ವಿದ್ಯುತ್ ದರ ಹೆಚ್ಚಳಕ್ಕೆ ಪೆರಿಕಲ್ ಸುಂದರ್ ಅಸಮದಾನ

Spread the love

ಬೆಂಗಳೂರು, ಜೂ.10- ಕಬ್ಬಿಣ, ಉಕ್ಕು ಹಾಗೂ ತೈಲ ಬೆಲೆಗಳು ಈಗಾಗಲೇ ಗಗನಕ್ಕೇರಿದ್ದು ಲಾಕ್ ಡೌನ್ ಸಂಸರ್ಭದಲ್ಲಿ ವಿದ್ಯುತ್ ದರ ಹೆಚ್ಚಳ ಗಾಯದ ಮೇಲೆ ಬರೆಎಳೆದಂತಾಗಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಪೆರಿಕಲ್ ಎಂ ಸುಂದರ್ ಬಲವಾದ ಅಸಮದಾನ ವ್ಯಕ್ತ ಪಡಿಸಿದ್ದಾರೆ.ಕೋವಿಡ್-19ರ ಎರಡನೇಯ ಅಲೆಯ ಲಾಕ್ಡೌನ್ ಸಮಯದಲ್ಲಿ ವಿದ್ಯುತ್ ದರ ಹೆಚ್ಚಳಕ್ಕೆ ಕೆಇಆರ್ಸಿ ಹೊರಡಿಸಿರುವ ಆದೇಶವನ್ನು ಕೈಗಾರಿಕಾ ಹಾಗೂ ವಾಣಿಜೋದ್ಯಮಿಗಳ ಸಮೂಹ ವಿರೋಧಿಸಿದೆ ಎಂದಿದ್ದಾರೆ.

ಕೆಇಆರ್ಸಿ, ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳು ಪೂರೈಸುತ್ತಿರುವ ವಿದ್ಯುತ್ತಿನ ಪ್ರತಿ ಯೂನಿಟ್ಗೆ ಸರಾಸರಿ 30 ಪೈಸೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಈ ಆದೇಶದ ಪರಿಣಾಮವಾಗಿ ಎಲ್ಲಾ ವರ್ಗದ ಗ್ರಾಹಕರಿಗೆ ಹೊರೆಯಾಗಲಿದೆ. ರಾಜ್ಯದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ವಿದ್ಯುತ್ ದರ ಏರಿಕೆಯು ಕೈಗಾರಿಕೆಯ ಕಚ್ಚಾ ವಸ್ತುಗಳ ಬೆಲೆಯ ಮೇಲೆಯೂ ಸಹ ಪರಿಣಾಮ ಬೀರಲಿದ್ದು, ಕೈಗಾರಿಕೆಗಳು ಮೂಲೆ ಗುಂಪಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ.

ಕರ್ನಾಟಕ ಸರ್ಕಾರದ ಆಕರ್ಷಕ ಹೂಡಿಕೆ ಸ್ನೇಹಿ ಕೈಗಾರಿಕಾ ನೀತಿ, ಕೈಗಾರಿಕಾ ಸೌಲಭ್ಯ ಕಾಯಿದೆಯಲ್ಲಿನ ಶ್ಲಾಘನೀಯ ಸುಧಾರಣೆಗಳು ಮತ್ತು ಹೂಡಿಕೆಯನ್ನು ಆಕರ್ಷಿಸಲು, ಉದ್ಯೋಗ ಸೃಷ್ಟಿಸಲು ಕರ್ನಾಟಕ ಭೂ ಸುಧಾರಣಾ ಕಾಯ್ದೆ ಬದಲಾವಣೆಯಂತಹ ದಿಟ್ಟ ನಿರ್ಧಾರಗಳು ವಿದ್ಯುತ್ ದರ ಹೆಚ್ಚಳದಿಂದ ವ್ಯರ್ಥವಾಗಲಿವೆ ಎಂದು ಎಂದಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇಯ ಅಲೆ ಋಣಾತ್ಮಕ ಪರಿಣಾಮವನ್ನು ನಿಗ್ರಹಿಸಲು ಸರ್ಕಾರ ಘೋಷಿಸಿದ ಲಾಕ್ಡೌನ್ ಪರಿಣಾಮದಿಂದಾಗಿ ರಾಜ್ಯದ ಶೇ.90 ಕೈಗಾರಿಕೆಗಳು ತಮ್ಮ ಕಾರ್ಯಚರಣೆಯನ್ನು ಸ್ಥಗಿತಗೊಳಿಸಿವೆ. ಬಹಳಷ್ಟು ಕೈಗಾರಿಕೆಗಳು ವಿಶೇಷವಾಗಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಮತ್ತು ಸಣ್ಣ ವ್ಯಾಪಾರಿಗಳು ತಮ್ಮ ಅಸ್ಥಿತ್ವದ ಉಳಿವಿಗಾಗಿ ಹೆಣಗಾಡುತ್ತಿವೆ, ಬಹುತೇಕ ಕೈಗಾರಿಕೆಗಳು ಮುಚ್ಚುವ ಹಂತದಲ್ಲಿವೆ. ರಾಜ್ಯದಲ್ಲಿ ನಿರುದ್ಯೋಗ ಹೆಚ್ಚಾಗುವ ಮುನ್ಸೂಚನೆಯಿದೆ ಎಂದು ಎಚ್ಚರಿಸಿದ್ದಾರೆ.

ಪ್ರಸ್ತುತ, ರಾಜ್ಯದಲ್ಲಿ ರಫ್ತು ವ್ಯವಹಾರಗಳಲ್ಲಿ ತೊಡಗಿರುವ ಕೈಗಾರಿಕೆಗಳು ಶೇ.40 ರಿಂದ ಶೇ.60ರಷ್ಟು ಉತ್ಪಾದನಾ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, ಉಳಿದೆಲ್ಲಾ ಕೈಗಾರಿಕೆಗಳು, ಲಾಕ್ಡೌನಿಂದ ಮುಚ್ಚಿವೆ. ಇಂತಹ ಪರಿಸ್ಥಿತಿಯಲ್ಲಿ ಕೆಇಆರ್ಸಿಯಿಂದ ವಿದ್ಯುತ್ ದರ ಹೆಚ್ಚಳದ ಆದೇಶವನ್ನು ರಾಜ್ಯದ ಗ್ರಾಹಕರು ಇಚ್ಚಿಸಿರಲಿಲ್ಲ. ಎಫ್ ಕೆ ಸಿಸಿಐ ಅನೇಕ ಸಲ ಸರ್ಕಾರಕ್ಕೆ ಮನವಿ ಸಲ್ಲಿಸಿ ವಿದ್ಯುತ್ ದರ ಹೆಚ್ಚಳಕ್ಕೆ ಅವಕಾಶ ನೀಡಬಾರದೆಂದು ತಿಳಿಸಿತ್ತು. ಕೆಇಆರ್ಸಿ ಸಾರ್ವಜನಿಕ ವಿಚಾರಣೆಯ ವೇಳೆಯಲ್ಲೂ ಎಫ್ಕೆಸಿಸಿಐ ತನ್ನ ಪ್ರಬಲವಾದ ಅಕ್ಷೇಪಣೆಯನ್ನು ಅಂಕಿ ಅಂಶಗಳೊಂದಿಗೆ ವ್ಯಕ್ತ ಪಡಿಸಿತ್ತು ಎಂದು ವಿವರಿಸಿದ್ದಾರೆ.

ಈ ಸಾಂಕ್ರಾಮಿಕ ರೋಗದ ಸಂಕಷ್ಟ ಪರಿಸ್ಥಿತಿಯಿಂದಾಗಿ ಮುಂದಿನ 2-3 ವರ್ಷವರೆಗೆ ವಿದ್ಯುತ್ ದರದ ಹೆಚ್ಚಳದ ಪ್ರಕ್ರಿಯೆಗಳನ್ನು ಮುಂದೂಡಿ ಕೈಗಾರಿಕೆಗಳ ಬೆಳೆವಣಿಗೆಗೆ ಹಾಗೂ ರಾಜ್ಯದ ಆರ್ಥಿಕತೆ ಸುಧಾರಣೆಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದ್ದರೂ ಸಹ ವಿದ್ಯುತ್ ದರ ಹೆಚ್ಚಳ ಮಾಡಿರುವು ಸರಿಯಲ್ಲ, ವಿದ್ಯುತ್ ಸರಬರಾಜು ಕಂಪನಿಗಳು ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ, ವಿಶ್ವಾಸಾರ್ಹ ಮತ್ತು ನಿರಂತರ ವಿದ್ಯುತ್ ಸರಬರಾಜು ಮಾಡಿದರೆ ಮಾತ್ರ ರಾಜ್ಯವು ಹೂಡಿಕೆಯನ್ನು ಆಕರ್ಷಿಸಬಹುದು, ಉದ್ಯೋಗ ಸೃಷ್ಟಿಸಬಹುದು ಎಂದು ವಿವರಿಸಿದ್ದಾರೆ.

ಕರ್ನಾಟಕ ರಾಜ್ಯದ ಕೈಗಾರಿಕಾ ನೀತಿಯಲ್ಲಿ 5 ಲಕ್ಷ ಕೋಟಿ ಮೌಲ್ಯದ ಹೂಡಿಕೆ, 20 ಲಕ್ಷ ಜನರಿಗೆ ಉದ್ಯೋಗಾವಕಾಶ, ಸರಕು ರಫ್ತಿನಲ್ಲಿ 3ನೇ ಸ್ಥಾನಕೇರುವುದು, ವರ್ಷಕ್ಕೆ ಶೇ.10ರಷ್ಟು ಕೈಗಾರಿಕಾ ಬೆಳೆವಣಿಗೆಯ ದರವನ್ನು ದಾಖಲಿಸುವ ಗುರಿಯನ್ನು ನಿಗದಿ ಪಡಿಸಲಾಗಿದೆ. ವಿದ್ಯುತ್ ದರ ಏರಿಕೆಯಿಂದ ಅದು ಸಾಧ್ಯವಾಗುವುದಿಲ್ಲ. ಮುಖ್ಯಮಂತ್ರಿಗಳು ತಕ್ಷಣ ಈ ಆದೇಶವನ್ನು ಹಿಂಪಡೆಯದಿದ್ದರೆ ಕರ್ನಾಟಕದಲ್ಲಿ ಇರುವ ಅನೇಕ ಕೈಗಾರಿಕೆಗಳು ನೆರೆಯ ರಾಜ್ಯಕ್ಕೆ ಹೋಗುವ ಸಾಧ್ಯತೆ ಇರುತ್ತದ ಎಂದು ಅಧ್ಯಕ್ಷರು ಎಚ್ಚರಿಸಿದ್ದಾರೆ.

Facebook Comments