ಪಿರಿಯಾಪಟ್ಟಣ, ಆ.3- ತಾಲೂಕಿನ ಯುವಕನೋರ್ವ ಕೆಲ್ಲೂರು-ಹೊಸಕೋಟೆ ಸೇತುವೆಯ ಮೇಲಿನಿಂದ ಹೆಲ್ಮೆಟ್ ಹಿಡಿಯಲು ಹೋಗಿ ಕೆರೆಗೆ ಜಾರಿ ಬಿದ್ದು ಸಾವಿಗೀಡಾಗಿರುವ ಘಟನೆ ನಡೆದಿದೆ.
ಪಿರಿಯಾಪಟ್ಟಣ ನಿವಾಸಿ ಪರಮೇಶ್ ಮಗ ಕಾರ್ತಿಕ್(17) ಮೃತ ಯುವಕ. ಈತ ಹೊಸಕೋಟೆ ಗ್ರಾಮದಲ್ಲಿದ್ದ ಅಜ್ಜಿಯನ್ನು ಕರೆದುಕೊಂಡು ತಂದೆಯ ಬುಲೆಟ್ ಬೈಕ್‍ನಲ್ಲಿ ಪಿರಿಯಾಪಟ್ಟಣಕ್ಕೆ ಹೋಗುವಾಗ ಕೆಲ್ಲೂರು-ಹೊಸಕೋಟೆಯ ಮಾರ್ಗಮದ್ಯ ಇರುವ ಕೆರೆಯ ಏರಿ ಮೇಲೆ ನೀರು ಹರಿಯುವುದನ್ನು ಕಂಡು ಅಜ್ಜಿಯನ್ನು ಒಂದು ದಡದಲ್ಲಿ ನಿಲ್ಲಿಸಿ ಬೈಕ್ ಅನ್ನು ತಳ್ಳಿಕೊಂಡು ಮತ್ತೊಂದು ದಡಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಹೆಲ್ಮೆಟ್ ಕೆಳಗೆ ಬಿದ್ದಿದೆ.
ನೀರಿನಲ್ಲಿ ತೇಲಿಕೊಂಡು ಹೋಗುತ್ತಿದ್ದ ಹೆಲ್ಮೆಟ್ ಅದನ್ನು ಹಿಡಿಯಲು ಬೈಕ್ ನಿಲ್ಲಿಸಿ ಮುಂದೆ ಹೋದ ಕಾರ್ತಿಕ್ ಕಾಲು ಜಾರಿ ನಾಲೆಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ತಂದೆ ಪರಮೇಶ್ ಮತ್ತು ಸಂಬಂಧಿಕರು, ಕೆ.ಆರ್.ನಗರದ ಅಗ್ನಿಶಾಮಕ ಸಿಬ್ಬಂದಿ, ಚುಂಚನಕಟ್ಟೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ನುರಿತ ಈಜುಗಾರರಿಂದ ಶವವನ್ನು ಹೊರ ತೆಗೆದಿದ್ದಾರೆ.
ಈ ಸಂಬಂಧ ಚುಂಚನಕಟ್ಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಂತರ ಕೆ.ಆರ್.ನಗರದ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಮೃತರ ಅಂತಿಮ ಸಂಸ್ಕಾರವನ್ನು ಯುವಕನ ಸ್ವಗ್ರಾಮ ಕೆ.ಹರಳಹಳ್ಳಿಯಲ್ಲಿ ನೆರವೇರಿಸಲಾಯಿತು.
