ಬೆಂಗಳೂರು, ಸೆ.16- ಗಣೇಶ ಮೂರ್ತಿಯನ್ನು ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪಿಸುವ ಮೊದಲು ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ಅನುಮತಿ ಪಡೆದು ಸಾರ್ವಜನಿಕರು ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಪ್ರತಿಷ್ಠಾಪನೆ ಮಾಡಬೇಕೆಂದು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು ಮನವಿ ಮಾಡಿದ್ದಾರೆ. ಸಾರ್ವಜನಿಕರು ಹಾಗೂ ವಾಹನ ಸಂಚಾರ ಒತ್ತಡವಿರುವ ರಸ್ತೆಗಳಲ್ಲಿ ಯಾವುದೇ ಕಾರಣಕ್ಕೂ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗುವುದಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.
ಬಿಬಿಎಂಪಿ ಪರವಾನಗಿ ಕಡ್ಡಾಯ:
ಗಣೇಶ ವಿಗ್ರಹ ಪ್ರತಿಷ್ಠಾಪನೆ ಹಾಗೂ ಇತರೆ ಕಾರ್ಯಕ್ರಮಗಳ ಆಯೋಜನೆಗಾಗಿ ಬಲವಂತವಾಗಿ ಹಾಗೂ ಕಾನೂನು ಬಾಹಿರವಾಗಿ ವಂತಿಗೆಯನ್ನು ಸಂಗ್ರಹಿಸುವವರ ವಿರುದ್ದ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು, ಸಾರ್ವಜನಿಕ ಸ್ಥಳದಲ್ಲಿ ಚಪ್ಪರ, ಶಾಮಿಯಾನಗಳನ್ನು ಬಂದೋಬಸ್ತಾಗಿ ನಿರ್ಮಿಸತಕ್ಕದ್ದು ಈ ಬಗ್ಗೆ ಬೆಂಗಳೂರು ಮಹಾನಗರ ಪಾಲಿಕೆಯಿಂದ ಪರವಾನಗಿಯನ್ನು ಪಡೆಯತಕ್ಕದ್ದು ಎಂದು ಅವರು ತಿಳಿಸಿದ್ದಾರೆ.
ಅನುಮತಿಗೆ ಸೂಚನೆ:
ಗಣೇಶ ಮೂರ್ತಿಯನ್ನು ವಿವಾದಿತ ಸ್ಥಳದಲ್ಲಿ ಯಾವುದೇ ಕಾರಣಕ್ಕೂ ಪ್ರತಿಷ್ಠಾಪಿಸಬಾರದು ಹಾಗೂ ಪ್ರತಿಷ್ಠಾಪನೆ ಮಾಡುವ ಸ್ಥಳದ ಮಾಲೀಕರ ಅನುಮತಿ ಪಡೆದು ಮಾಹಿತಿಯನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ನೀಡಿ ನಂತರ ಪ್ರತಿಷ್ಠಾಪನೆ ಮಾಡತಕ್ಕದು ಎಂದು ಅವರು ಹೇಳಿದ್ದಾರೆ.
ಠಾಣೆಗೆ ಮಾಹಿತಿ ನೀಡತಕ್ಕದ್ದು:
ಗಣೇಶ ಪ್ರತಿಷ್ಠಾಪನೆ ಮಾಡಿದ ಸ್ಥಳದಲ್ಲಿ ಆಯೋಜಕರ ಪರವಾಗಿ ಇಬ್ಬರು ಜವಾಬ್ದಾರಿಯುತ ಕಾರ್ಯಕರ್ತರು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ದಿನದ 24 ಗಂಟೆಗಳ ಕಾಲ, ಇರುವಂತೆ ನೋಡಿಕೊಳ್ಳುವುದು ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡತಕ್ಕದ್ದು.
ಆಯೋಜಕರು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಸ್ಥಳದಲ್ಲಿ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸುವುದು ಹಾಗೂ ಗಣೇಶ ಮೂರ್ತಿಯ ಪ್ರತಿಷ್ಟಾಪನಾ ಸ್ಥಳದಲ್ಲಿ ಬೆಂಕಿ ನಂದಿಸುವ ಸಾಮಗ್ರಿಗಳನ್ನು, ಸ್ಥಳೀಯ ಪೊಲೀಸ್ ಠಾಣೆಯ ಮತ್ತು ಅಗ್ನಿಶಾಮಕ ದಳದ ದೂರವಾಣಿ ಸಂಖ್ಯೆಗಳನ್ನು ಹಾಗೂ ಪದಾಧಿಕಾರಿಗಳ ಮೊಬೈಲ್ ಸಂಖ್ಯೆಗಳನ್ನು ನಮೂದಿಸಬೇಕು.
ಜಾಗೃತಿ ವಹಿಸಿ: ಗಣೇಶ ಪ್ರತಿಷ್ಠಾಪನಾ ಸ್ಥಳದಲ್ಲಿ ಹಾಗೂ ಸುತ್ತಮುತ್ತ ಯಾವುದೇ ಅಡುಗೆ ಮಾಡುವ ಕಟ್ಟಿಗೆ, ಉರುವಲು, ಸೀಮೆಎಣ್ಣೆ ಸಾಧನಗಳನ್ನು ಇಡಬಾರದು ಹಾಗೂ ಅಡುಗೆ ಮಾಡಬಾರದು. ವಿದ್ಯುತ್ ಮತ್ತು ವಿದ್ಯುತ್ ಅಲಂಕಾರಕ್ಕೆ ಸಂಬಂಧಿಸಿದಂತೆ ವೈರಿಂಗ್ ಬಗ್ಗೆ ಬೆಸ್ಕಾಂ ಇಲಾಖೆಯಿಂದ ಅನುಮತಿ ಹಾಗೂ ಅಗ್ನಿಶಾಮಕ ದಳ ಹಾಗೂ ಸಂಚಾರಿ ಪೊಲೀಸರಿಂದ ನಿರಾಪೇಕ್ಷಣಾ ಪಡೆಯಬೇಕು, ದಿನದ 24 ಗಂಟೆ ಸಮರ್ಪಕ ಬೆಳಕು ಇರುವಂತೆ ನೋಡಿಕೊಳ್ಳಬೇಕು.
ಬಿಬಿಎಂಪಿಯಲ್ಲಿ ಸೆ.19ಕ್ಕೆ ಗೌರಿ ಗಣೇಶ ಉತ್ಸವ
ಆಯೋಜಕರು ಗಣೇಶ ಪ್ರತಿಷ್ಠಾಪನ ಸ್ಥಳಕ್ಕೆ ಆಗಮಿಸುವ ಸಾರ್ವಜನಿಕರಿಗೋಸ್ಕರ ಸಮರ್ಪಕವಾಗಿ ಆಗಮನ ಮತ್ತು ನಿರ್ಗಮನದ ವ್ಯವಸ್ಥೆಯನ್ನು ಮಾಡುವುದರ ಜೊತೆಗೆ ಜನಸಂದಣಿಯನ್ನು ನಿಯಂತ್ರಿಸುವ ಬಗ್ಗೆ ಬ್ಯಾರಿಕೇಡ್ಗಳನ್ನು ನಿರ್ಮಿಸಿ, ಸ್ವಯಂ ಸೇವಕರನ್ನು ನೇಮಿಸಿಕೊಂಡು ಯಾವುದೇ ಜನಜಂಗುಳಿಗೆ ಆಸ್ಪದ ನೀಡದಂತೆ ನೋಡಿಕೊಳ್ಳಬೇಕೆಂದು ಆಯುಕ್ತರು ಸೂಚಿಸಿದ್ದಾರೆ.
ಆಯೋಜಕರೇ ಜವಾಬ್ದಾರರು:
ಗಣೇಶ ವಿಗ್ರಹ ಪ್ರತಿಷ್ಠಾಪನೆಯ ಸಂಬಂಧ ಎಲ್ಲಾ ಪರಿಕರಗಳ ರಕ್ಷಣೆಗಾಗಿ ಸದರಿ ಕಾರ್ಯಕ್ರಮವನ್ನು ಆಯೋಜಿಸುವವರೇ ಜವಾಬ್ದಾರರಾಗಿರುತ್ತಾರೆ, ಗಣೇಶ ವಿಸರ್ಜನಾ ಮೆರವಣಿಗೆ ಸಮಯದಲ್ಲಿ ಯಾವುದೇ ರೀತಿಯ ಅಪರಾಧಗಳು ನಡೆಯದಂತೆ ಗಮನಹರಿಸಬೇಕು, ಮೆರವಣಿಗೆ ಸಮಯದಲ್ಲಿ ಯಾವುದೇ ಅಪರಾದಗಳು ನಡೆದರೆ ಆಯೋಜಕರೇ ಜವಾಬ್ದಾರರಾಗಿರು ತ್ತಾರೆ.
ಗಣೇಶ ಪ್ರತಿಷ್ಠಾಪನೆ, ಮನರಂಜನಾ ಕಾರ್ಯಕ್ರಮ, ಮೆರವಣಿಗೆ ಮತ್ತು ವಿಸರ್ಜನಾ ಸ್ಥಳಗಳಲ್ಲಿ ಕೀಟಲೆ ಮಾಡದಂತೆ ಆಯೋಜಕರೇ ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳತಕ್ಕದ್ದು ಎಂದು ಅವರು ಹೇಳಿದ್ದಾರೆ.
ಧ್ವನಿವರ್ಧಕಕ್ಕೆ ಸಮಯ ನಿಗದಿ:
ಹಿರಿಯ ನಾಗರಿಕರಿಗೆ, ಶಾಲಾ ಮಕ್ಕಳಿಗೆ ಹಾಗೂ ಇತರರಿಗೆ ತೊಂದರೆಯಾಗದಂತೆ ಧ್ವನಿವರ್ಧಕಗಳನ್ನು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10ರವರೆಗೆ ಮಾತ್ರ ಬಳಸಿಕೊಳ್ಳಲು ಸ್ಥಳೀಯ ಪೊಲೀಸರ ಅನುಮತಿ ಪಡೆದುಕೊಳ್ಳಬೇಕು. ಈ ನಿಬಂಧನೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡದವರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಧ್ವನಿವರ್ಧಕಗಳಿಂದ ಹೊರಡುವ ಶಬ್ದದ ಪ್ರಮಾಣವನ್ನು ಕಡಿಮೆ ಮಟ್ಟದಲ್ಲಿ ಇಟ್ಟುಕೊಳ್ಳುವುದು. ಹಾಗೂ ಯಾವುದೇ ಕಾರಣಕ್ಕೂ ಡಿಜೆ ಸೌಂಡ್ ಅಳವಡಿಸಲು ಅವಕಾಶ ಇರುವುದಿಲ್ಲ.ಗಣೇಶ ಪ್ರತಿಷ್ಠಾಪನ ಮಂಡಳಿಯ ಸಂಘಟಕರು ತಮ್ಮ ಮಂಡಳಿಯ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಇತರ ಪದಾಧಿಕಾರಿಗಳ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಸಂಬಂಧಪಟ್ಟ ಠಾಣಾಧಿಕಾರಿಗೆ ಒದಗಿಸಿ ಸಹಕರಿಸಬೇಕು.
ವಿಸರ್ಜನೆಗೆ ನಿಯಮ ಪಾಲನೆ:
ಗಣೇಶ ವಿಸರ್ಜನಾ ಮೆರವಣಿಗೆ ಸಮಯದಲ್ಲಿ ಆಯೋಜಕರು ಸ್ವಯಂಸೇವಕರನ್ನು ಗುರ್ತಿಸಲು ಅವರಿಗೆ ಗುರುತಿನ ಚೀಟಿ, ಬ್ಯಾಡ್ಜ್, ಟೀ-ಶರ್ಟ್ ಅಥವಾ ಕ್ಯಾಪ್ಗಳನ್ನು ನೀಡಬೇಕು, ಮೆರವಣಿಗೆ ಶಾಂತ ರೀತಿಯಲ್ಲಿ ವಿಸರ್ಜನಾ ಸ್ಥಳಕ್ಕೆ ಹೋಗಲು ಅನುವು ಮಾಡಿಕೊಡಲು ಕೋರಲಾಗಿದೆ.
ಗಣೇಶ ಪ್ರತಿಷ್ಠಾಪನಾ ಸ್ಥಳದಲ್ಲಿ ಏನಾದರೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುವುದಿದ್ದಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮುಂಚಿತವಾಗಿ ಮಾಹಿತಿ ನೀಡಿ ಸೂಕ್ತ ಬಂದೋಬಸ್ತ್ ಮಾಡಿಕೊಳ್ಳಲು ಸ್ಥಳೀಯ ಪೊಲೀಸರೊಂದಿಗೆ ಸಹಕರಿಸುವುದು ಹಾಗೂ ಧ್ವನಿವರ್ಧಕಗಳಿಗೆ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.
10 ಗಂಟೆಯೊಳಗೆ ಮೆರವಣಿಗೆ ಮುಕ್ತಾಯಕ್ಕೆ ಸೂಚನೆ:
ಮೆರವಣಿಗೆಯು ಸೂಕ್ಷ್ಮಸ್ಥಳ, ಅತೀ ಸೂಕ್ಷ್ಮ ಸ್ಥಳ ಹಾಗೂ ಪ್ರಾರ್ಥನಾ ಸ್ಥಳಗಳ ಮುಂಭಾಗದಲ್ಲಿ ಸಾಗುವಾಗ ಸಿಡಿಮದ್ದು, ಪಟಾಕಿಗಳನ್ನು ಸಿಡಿಸದಂತೆ ಹಾಗೂ ಕರ್ಪೂರಗಳನ್ನು ಹಚ್ಚಬಾರದು. ಗಣೇಶ ವಿಸರ್ಜನೆ ಸಂಬಂಧ ಮೆರವಣಿಗೆಯು ರಾತ್ರಿ 10 ಗಂಟೆಯೊಳಗೆ ಮುಗಿಯುವಂತೆ ಆಯೋಜಕರು ನೋಡಿಕೊಳ್ಳಬೇಕು. ಮೆರವಣಿಗೆ ಸಮಯದಲ್ಲಿ ಎಲೆಕ್ಟ್ರಿಕಲ್ ವೈರುಗಳು, ಮರದ ಕೊಂಬೆಗಳ ಬಗ್ಗೆ ಗಮನಹರಿಸಿ, ವಿಸರ್ಜನಾ ಮೆರವಣಿಗೆ ಸುಸೂತ್ರವಾಗಿ ಹೋಗಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಸಂಬಂಧಪಟ್ಟ ಇಲಾಖೆಯವರಿಂದ (ಅರಣ್ಯ ಮತ್ತು ಕೆ.ಇ.ಬಿ) ಪಡೆದುಕೊಳ್ಳಬೇಕೆಂದು ಆಯುಕ್ತರು ಸೂಚಿಸಿದ್ದಾರೆ.
#Permission #rule #compliance #mandatory #GaneshaIdol