ಕೇರಳ ಸೇರಿ 3 ರಾಜ್ಯಗಳಲ್ಲಿ ವ್ಯಾಟ್ ಕಡಿತ, ಪೆಟ್ರೋಲ್, ಡಿಸೇಲ್ ಮತ್ತಷ್ಟು ಅಗ್ಗ

ನವದೆಹಲಿ, ಮೇ 22- ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲದ ಮೇಲೆ ಅಬಕಾರಿ ಸುಂಕ ಕಡಿತ ಮಾಡುತ್ತಿದ್ದಂತೆ ಕೇರಳ, ರಾಜಸ್ಥಾನ ಸೇರಿ ಹಲವು ರಾಜ್ಯಗಳು ತಮ್ಮ ಪಾಲಿನ ತೆರಿಗೆ ಹೊರೆಯನ್ನು ಇಳಿಸಿ ಜನ ಸಾಮಾನ್ಯರಿಗೆ ನೆರವಾಗಿವೆ.

ನಿನ್ನೆ ದಿಡೀರ್ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ ಒಟ್ಟು 9.5 ರೂಪಾಯಿ, ಡಿಸೇಲ್ ಮೇಲೆ 7 ರೂಪಾಯಿ, ಅಡುಗೆ ಅನಿಲ ಸಿಲಿಂಡರ್ ಮೇಲೆ 200 ರೂಪಾಯಿ ತೆರಿಗೆ ಕಡಿತ ಮಾಡಿದೆ. ಅದನ್ನು ಅನುಸರಿಸಿ ಚುನಾವಣಾ ವರ್ಷದಲ್ಲಿರುವ ರಾಜಸ್ಥಾನ ಸ್ಥಳೀಯ ಸರ್ಕಾರ ವ್ಯಾಟ್ ತೆರಿಗೆಯನ್ನು ಕಡಿತ ಮಾಡಿದೆ. ಪೆಟ್ರೋಲ್ ಮೇಲೆ 2.48 ರೂ, ಡಿಸೇಲ್ ಮೇಲೆ 1.16 ರೂ. ಇಳಿಕೆಯಾಗಿದೆ.

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿದ್ದು, ಕೇಂದ್ರ ಸರ್ಕಾರ ತೆರಿಗೆ ಕಡಿತ ಮಾಡಿದಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರವೂ ತೆರಿಗೆ ಇಳಿಕೆ ಮಾಡಿದ್ದರಿಂದ ಪೆಟ್ರೋಲ್ ಮೇಲೆ 10.48, ಡಿಸೇಲ್ ಮೇಲೆ 7.16 ರೂ. ದರ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.
ಕೇರಳ ಸರ್ಕಾರ ಪೆಟ್ರೋಲ್ ಮೇಲೆ 2.41 ರೂ. ಡಿಸೇಲ್ ಮೇಲೆ 1.36 ರೂಪಾಯಿ, ಒಡಿಸ್ಸಾ ಸರ್ಕಾರ ಪೆಟ್ರೋಲ್ ಮೇಲೆ 2.23, ಡಿಸೇಲ್ ಮೇಲೆ 1.36 ರೂಪಾಯಿ ವ್ಯಾಟ್ ತೆರಿಗೆ ಕಡಿತ ಮಾಡಿವೆ.

ಇದರಿಂದ ಕೇರಳದ ತಿರುವನಂತಪುರಂನಲ್ಲಿ ಪೆಟ್ರೋಲ್‍ಗೆ 107.71 ರೂ, ಡಿಸೇಲ್ 95.52 ರೂ,ಗಳ ಮಾರಾಟ ದರವಿದೆ. ರಾಜಸ್ಥಾನದ ಜೈಪುರದಲ್ಲಿ ಪೆಟ್ರೋಲ್ ದರ 108.48 ರೂ, ಡಿಸೇಲ್ ದರ 91.72 ರೂ.ಗಳಿದ್ದರೆ, ಒಡಿಸ್ಸಾದ ಭುವನೇಶ್ವರದಲ್ಲಿ ಪೆಟ್ರೋಲ್‍ಗೆ 103.19, ಡಿಸೇಲ್ ಬೆಲೆ 94.76 ರೂ.ಗಳಿದೆ.

ಕಳೆದ ವರ್ಷ ನವೆಂಬರ್‍ನಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ 5 ರೂ. ಡಿಸೇಲ್ ಮೇಲೆ 10 ರೂ. ದರ ಕಡಿತ ಮಾಡಿತ್ತು. ಆ ವೇಳೆ ಕೆಲ ರಾಜ್ಯಗಳು ಸ್ಥಳೀಯ ತೆರಿಗೆ ಕಡಿಮೆ ಮಾಡಿದ್ದವು. ಇನ್ನೂ ಕೆಲವು ರಾಜ್ಯಗಳು ಕೇಂದ್ರ ಸರ್ಕಾರವೇ ಮತ್ತಷ್ಟು ತೆರಿಗೆ ಇಳಿಕೆ ಮಾಡಲಿ ಎಂದು ಒತ್ತಾಯಿಸಿ ಸುಮ್ಮನಿದ್ದವು.

ಈ ಬಾರಿ ನಿನ್ನೆಯಿಂದ ಮೂರು ರಾಜ್ಯಗಳು ದರ ಕಡಿತ ಮಾಡಿವೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಸ್ಥಳಿಯ ತೆರಿಗೆ ಕಡಿತದ ಕುರಿತು ಪರಿಶೀಲನೆ ನಡೆಸುತ್ತಿವೆ. ಸ್ಥಳೀಯವಾಗಿ ರಾಜ್ಯ ಸರ್ಕಾರಗಳು ವ್ಯಾಟ್ ಕಡಿಮೆ ಮಾಡಿದರೆ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನಸಾಮಾನ್ಯರಿಗೆ ಮತ್ತಷ್ಟು ನೆರವಾಗಲಿದೆ.