ನವದೆಹಲಿ,ಸೆ.28- ಪಿಎಫ್‍ಐ ಮತ್ತು ಅದರ ನಿಷೇಧ ಕುರಿತು ಅಭಿಪ್ರಾಯ ವ್ಯಕ್ತಪಡಿಸಲು ಕರ್ನಾಟಕ ಕಾಂಗ್ರೆಸ್ ಹೊರತು ಪಡಿಸಿ ರಾಷ್ಟ್ರ ಮಟ್ಟದ ನಾಯಕರು ಹಿಂದೇಟು ಹಾಕಿರುವ ಬೆಳವಣಿಗೆ ಬಿಜೆಪಿ ಬಾಯಿಗೆ ಆಹಾರ ಒದಗಿಸಿದೆ.
ದೆಹಲಿಯಲ್ಲಿ ನಿನ್ನೆ ಪ್ರಧಾನಿ ಮಹತ್ವದ ಸಭೆ ನಡೆಸಿದ ಬಳಿಕ ಪಿಎಫ್‍ಐ ಮತ್ತು ಅದರ ಎಂಟು ಅಂಗ ಸಂಸ್ಥೆಗಳನ್ನು ನಿಷೇಧ ಮಾಡಲಾಗಿತ್ತು. ಇಂದು ಬೆಳಗ್ಗೆ ಇದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಬಿಜೆಪಿಯ ನಾಯಕರು ನಾ ಮುಂದು, ತಾ ಮುಂದು ಎಂದು ಪ್ರತಿಕ್ರಿಯಿಸಿ ನಿಷೇಧವನ್ನು ಸ್ವಾಗತಿಸಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ದಿಢೀರ್ ನಿರ್ಧಾರದಿಂದ ಕಕ್ಕಾಬಿಕ್ಕಿಯಾಗಿದ್ದಾರೆ.
ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಬೇಕೋ ಬೇಡವೋ ಎಂಬ ಜಿಜ್ಞಾಸೆಯಲ್ಲಿ ಮಧ್ಯಾಹ್ನದವರೆಗೂ ಯಾವುದೇ ಪ್ರತಿಕ್ರಿಯೆ ನೀಡದೆ ತಟಸ್ಥವಾಗಿ ಉಳಿದಿದ್ದರು. ಎಐಸಿಸಿಯ ಸಾಮಾಜಿಕ ಜಾಲ ತಾಣಗಳಲ್ಲಿ ಭಗತ್‍ಸಿಂಗ್ ಅವರ ಜನ್ಮ ದಿನಾಚರಣೆಗೆ ಶುಭ ಕೋರಿದ ಸಂದೇಶ ಮತ್ತು ಭಾರತ ಐಕ್ಯತಾ ಯಾತ್ರೆಯ ಮಾಹಿತಿಗಳೇ ಹರಿದಾಡಲಾರಂಭಿಸಿದ್ದವು.
ಸುಮಾರು 12 ಗಂಟೆ ವೇಳೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಕಟಣೆಯೊಂದನ್ನು ನೀಡಿ, ಕಾಂಗ್ರೆಸ್ ಎಲ್ಲಾ ಮಾದರಿಯ ಕೋಮುವಾದಕ್ಕೆ ವಿರುದ್ಧವಾಗಿದೆ. ಯಾವುದೇ ಭಯ ಹಾಗೂ ರಾಜಿ ಇಲ್ಲದೆ ಕೋಮುವಾದದ ವಿರುದ್ಧ ಹೋರಾಟ ನಡೆಸುವುದು ನಮ್ಮ ನೀತಿಯಾಗಿದೆ. ಧಾರ್ಮಿಕ ಮತಾಂಧತೆಯ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.
ನಮ್ಮ ಸಮಾಜವನ್ನು ಧಾರ್ಮಿಕವಾಗಿ ಧ್ರುವೀಕರಿಸಲು ಪೂರ್ವಾಗ್ರಹ, ದ್ವೇಷ, ಧರ್ಮಾಂಧತೆ ಮತ್ತು ಹಿಂಸೆಯನ್ನು ಆಶ್ರಯಿಸುವ ಪ್ರತಿಯೊಂದು ಸಿದ್ಧಾಂತ ಮತ್ತು ಸಂಸ್ಥೆಗಳಿಗೆ ನಾವು ವಿರುದ್ಧವಾಗಿದ್ದೇವೆ. ಕೋಮುವಾದದ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದೇವೆ. ಭಾರತದ ಬಹುತ್ವವನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಆಧÀ್ಯತೆ ಮೇಲೆ ಹೋರಾಟ ನಡೆಸುತ್ತೇವೆ. ರಾಷ್ಟ್ರೀಯತಾ ಉತ್ಸವದಲ್ಲಿ ನಾವು ಭಾರತದ ಜಾತ್ಯತೀತ ಮತ್ತು ಸಾಮೂಹಿಕ ಹಿತಾಸಕ್ತಿಗೆ ಬದ್ಧರಾಗಿದ್ದೇವೆ ಎಂದು ತಿಳಿಸಿದ್ದರು.
ನಂತರ ಕೇರಳದ ಮಲ್ಪುರಂನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೈರಾಮ್ ರಮೇಶ್ ತಮ್ಮ ಲಿಖಿತ ಹೇಳಿಕೆಯನ್ನು ಪುನರುಚ್ಚರಿಸಿದರು. ಸ್ಪಷ್ಟ ಅಭಿಪ್ರಾಯ ನೀಡುವಂತೆ ಪತ್ರಕರ್ತರು ಒತ್ತಾಯಿಸಿದಾಗ ನಮ್ಮ ನಿಲುವು ಸ್ಪಷ್ಟವಾಗಿದೆ.
ಸಮಾಜವನ್ನು ಜಾತಿ, ಧರ್ಮದ ಮೇಲೆ ವಿಭಜಿಸುವ ಯಾವುದೇ ಸಂಘಟನೆಯಾದರೂ ನಾವು ವಿರೋಧಿಸುತ್ತೇವೆ. ಬಿಜೆಪಿ ಸಮಾಜವನ್ನು ವಿರೋಧಿಸಿ, ಐಕ್ಯತೆಯನ್ನು ಹಾಳು ಮಾಡುತ್ತಿದೆ. ಕಾಂಗ್ರೆಸ್ ಸಮಾಜದ ಭಾತೃತ್ವವನ್ನು ಸಂಭ್ರಮಿಸುತ್ತದೆ. ಅದಕ್ಕೆ ಬೆಂಬಲ ವ್ಯಕ್ತ ಪಡಿಸುತ್ತದೆ ಎಂದಿದ್ದಾರೆ.
ಎಐಸಿಸಿಯ ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ನಾಲ್ಕು ಗಂಟೆಗಳ ಬಳಿಕ ಪ್ರತಿಕ್ರಿಯಿಸಿ ತಡವಾಗಿಯಾದರೂ ಪಿಎಫ್‍ಐ ವಿರುದ್ಧ ಕ್ರಮ ಜರುಗಿಸಲಾಗಿದೆ. ಹಲವು ವರ್ಷಗಳ ಚಂಚಲತೆಯ ಬಳಿಕ ಸರಿಯಾದ ಹೆಜ್ಜೆ ಇಡಲಾಗಿದೆ. ನಾಣ್ಯದ ಮತ್ತೊಂದು ಮುಖವಾಗಿರುವ ಬಿಜೆಪಿಯ ಆಪ್ತ ಸಂಘಟನೆ ಆರ್‍ಎಸ್‍ಎಸ್ ವಿರುದ್ಧ ಯಾವಾಗ ಕ್ರಮ ಜರುಗಿಸಲಾಗುತ್ತದೆ. ಎಲ್ಲಾ ಮಾದರಿಯ ಕೋಮುವಾದ ಮತ್ತು ದ್ವೇಷ ಸಮಾಜಕ್ಕೆ ಹಾನಿಕಾರಕ, ಅದನ್ನು ಕಡ್ಡಾಯವಾಗಿ ಹತ್ತಿಕ್ಕಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.
ಅಚ್ಚರಿ ಎಂಬಂತೆ ಕೇರಳದ ಸಂಸದ ಹಾಗೂ ಲೋಕಸಭೆಯ ಕಾಂಗ್ರೆಸ್ ಮುಖ್ಯ ಸಚೇತಕ ಕುಡಿಕುನ್ನೈಲ್ ಸುರೇಶ್ ಹೇಳಿಕೆ ನೀಡಿ, ಪಿಎಫ್‍ಐ ನಿಷೇಧದಿಂದ ಯಾವುದೇ ಪರಿಣಾಮವಾಗುವುದಿಲ್ಲ ಎಂದಿದ್ದಾರೆ. ನಾವು ಆರ್‍ಎಸ್‍ಎಸ್‍ನ್ನು ನಿಷೇಧಿಸುವಂತೆ ಒತ್ತಾಯಿಸಿದ್ದೆವು, ಪಿಎಫ್‍ಐ ನಿಷೇಧ ಪರಿಹಾರವಲ್ಲ. ಆರ್‍ಎಸ್‍ಎಸ್ ಕೂಡ ದೇಶದಲ್ಲಿ ಹಿಂದು ಕೋಮುವಾದವನ್ನು ಹರಡುತ್ತಿದೆ. ಆರ್‍ಎಸ್‍ಎಸ್ ಮತ್ತು ಪಿಎಫ್‍ಐ ಎರಡು ಸಮಾನಾಂತರ ಸಂಘಟನೆಗಳು. ಸರ್ಕಾರ ಎರಡನ್ನು ನಿಷೇಧಿಸಬೇಕು. ಪಿಎಫ್‍ಐ ಮಾತ್ರ ಯಾಕೆ ನಿಷೇಧಿಸಬೇಕು ಎಂದು ಪ್ರಶ್ನಿಸಿದ್ದಾರೆ.