ಬೆಂಗಳೂರು.ನ.30 : ಭಯೋತ್ಪಾದನಾ ಸಂಘಟನೆಗಳ ಜೊತೆ ಸಂಪರ್ಕ ಹೊಂದುವ ಮೂಲಕ ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದೆ ಎನ್ನುವ ಆರೋಪದ ಮೇಲೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು ನಿಷೇಧಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶವನ್ನು ಕರ್ನಾಟಕ ಹೈಕೋರ್ಟ್ ಬುಧವಾರ ಎತ್ತಿ ಹಿಡಿದಿದೆ.
ಬೆಂಗಳೂರಿನ ನಿವಾಸಿ, ಪಿಎಫ್‌ಐ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ನಾಸಿರ್ ಅಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ. ವಿಸ್ತೃತ ಆದೇಶವು ಇನ್ನಷ್ಟೇ ಲಭ್ಯವಾಗಬೇಕಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಜಯಕುಮಾರ್ ಪಾಟೀಲ್ ಅವರು “ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) 1967ರ ಸೆಕ್ಷನ್ 3, ಉಪ ನಿಯಮ 3ರ ಅಡಿ ಪಿಎಫ್‌ಐ ನಿಷೇಧಿಸಿರುವುದು ಕಾನೂನು ಬಾಹಿರ. ಪಿಎಫ್‌ಐ ಸಂಘಟನೆಯನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಿರುವುದು ಸಂವಿಧಾನ ವಿರೋಧಿ ಕ್ರಮ. ಕಾನೂನುಬಾಹಿರ ಸಂಘಟನೆ ಎಂದು ಘೋಷಿಸುವುದಕ್ಕೆ ಮತ್ತು ಆ ನಿಷೇಧ ತಕ್ಷಣದಿಂದಲೇ ಅನ್ವಯಿಸಿರುವುದಕ್ಕೆ ಪ್ರತ್ಯೇಕ ಕಾರಣ ಆದೇಶದಲ್ಲಿ ತಿಳಿಸಿಲ್ಲ” ಎಂದು ಆಕ್ಷೇಪಿಸಿದ್ದರು.
ಮುಸ್ಲಿಂ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಕಾಲೇಜು ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್..?
“ಪಿಎಫ್‌ಐಗೆ ತನ್ನ ವಾದ ಮಂಡನೆಗೆ ಕಾಲಾವಕಾಶ ನೀಡದೇ ಏಕಾಏಕಿ ನಿಷೇಧ ಆದೇಶ ಮಾಡಲಾಗಿದೆ. ಯುಎಪಿಎ ಕಾಯಿದೆಗೆ ವಿರುದ್ಧವಾಗಿ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು” ಎಂದು ಕೋರಿದ್ದರು.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು “ಪಿಎಫ್‌ಐ ಸಂಘಟನೆ ದೇಶ ವಿರೋಧಿ ಕೃತ್ಯಗಳನ್ನು ನಡೆಸುತ್ತಿತ್ತು. ಅದು ಭಯೋತ್ಪಾದಕ ಸಂಘಟನೆಗಳ ಕೈ ಜೋಡಿಸಿ ದೇಶದಲ್ಲಿ ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿತ್ತು. ಜೊತೆಗೆ ಸಂಘಟನೆಯ ಸದಸ್ಯರು ರಾಷ್ಟ್ರದಲ್ಲಿ ಭೀತಿಯ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ” ಎಂದು ನಿಷೇಧವನ್ನು ಸಮರ್ಥಿಸಿದ್ದರು.
#PFIban, #Karnataka, #HighCourt #dismisses,#plea #CentreGovt, #notification,