PFI ಬ್ಯಾನ್ ಮಾಡಿದ್ದರಿಂದ ಭಾರಿ ವಿಧ್ವಂಸಕ ಕೃತ್ಯಗಳಿಗೆ ಬ್ರೇಕ್ ಬಿದ್ದಂತಾಗಿದೆ : ಸಚಿವ ಸುನಿಲ್ ಕುಮಾರ್

Social Share

ಬೆಂಗಳೂರು,ಸೆ.28- ದೇಶದ ಆಂತರಿಕ ಭದ್ರತೆಗೆ ಆತಂಕ ತಂದೊಡ್ಡಿದ್ದ ಪಿಎಫ್‍ಐ ಹಾಗೂ ಅದರ ಅಂಗಸಂಸ್ಥೆಗಳನ್ನು ಕೇಂದ್ರ ಸರಕಾರ ನಿಷೇಧಿಸಿರುವುದನ್ನು ಇಂಧನ ಸಚಿವ ವಿ.ಸುನಿಲ್‍ಕುಮಾರ್ ಸ್ವಾಗತಿಸಿದ್ದಾರೆ. ಇತ್ತೀಚೆಗೆ ನಡೆದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲೂ ಇದೇ ಸಂಘಟನೆ ಪಾತ್ರ ಇರುವುದನ್ನು ಕೇಂದ್ರ ಗೃಹ ಇಲಾಖೆ ಉಲ್ಲೇಖಿಸಿದ್ದು, ಭವಿಷ್ಯದಲ್ಲಿ ಪಿಎಫ್ ಐ ನಡೆಸಬಹುದಾಗಿದ್ದ ಭಾರಿ ವಿಧ್ವಂಸಕ ಕೃತ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಡಿವಾಣ ಹಾಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿ ಪಿಎಫ್ ಐ ಈ ಮಟ್ಟಿಗೆ ಬೆಳೆಯುವುದಕ್ಕೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವೇ ಕಾರಣವಾಗಿದೆ ಎಂದು ನೇರವಾಗಿ ಆರೋಪಿಸುತ್ತೇನೆ.

ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗ ಪಿಎಫ್ ಐ ಸಂಘಟನೆಯ ವಿರುದ್ಧ ದಾಖಲಾಗಿದ್ದ 100ಕ್ಕೂ ಹೆಚ್ಚು ಪ್ರಕರಣ ವಾಪಾಸ್ ಪಡೆಯಲಾಗಿತ್ತು. 1400ಕ್ಕೂ ಹೆಚ್ಚು ಪಿಎಫ್ ಐ ಉಗ್ರರಿಗೆ ಸಿದ್ದರಾಮಯ್ಯ ಕ್ಷಮಾದಾನ ನೀಡಿದ್ದರು. ಇದರ ಫಲವಾಗಿ ರಾಜ್ಯದಲ್ಲಿ ಹಿಂದು ಕಾರ್ಯಕರ್ತರ ಸರಣಿ ಕೊಲೆಗೆ ಕಾಂಗ್ರೆಸ್ ಕಾರಣವಾಗಿತ್ತು ಎಂದು ಸುನಿಲ್ ಕುಮಾರ್ ಆರೋಪಿಸಿದ್ದಾರೆ.

ಹುಬ್ಬಳ್ಳಿ ಹಾಗೂ ಮಂಗಳೂರಿನಲ್ಲಿ ಇದೇ ಸಂಘಟನೆ ಕಾರ್ಯಕರ್ತರು ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ನಡೆಸಿದಾಗ ಕಾಂಗ್ರೆಸ್ ನಾಯಕರು ತುಟಿ ಬಿಚ್ಚಲಿಲ್ಲ. ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ತನ್ನದೇ ಶಾಸಕರ ಮನೆಗೆ ಬೆಂಕಿ ಹಚ್ಚಿದಾಗಲೂ ಕಾಂಗ್ರೆಸ್ ಧ್ವನಿ ಎತ್ತಿರಲಿಲ್ಲ. ಇದು ಪಿಎಫ್ ಐ ಪರ ಕಾಂಗ್ರೆಸ್ ತಾಳಿದ್ದ ಮೃಧು ಧೋರಣೆಗೆ ಸಾಕ್ಷಿಯಾಗಿತ್ತಲ್ಲವೇ ? ಎಂದು ಪ್ರಶ್ನಿಸಿದ್ದಾರೆ.

Articles You Might Like

Share This Article