ಬೆಂಗಳೂರು,ಸೆ.28- ವಿದೇಶಿ ದೇಣಿಗೆ ಮೂಲಕ ಸಮಾಜವಿದ್ರೋಹಿ ಕೆಲಸಗಳಲ್ಲಿ ತೊಡಗಿಕೊಂಡಿದ್ದ ಪಿಎಫ್‍ಐ ನಿಷೇಧ ಅತ್ಯಂತ ಸಮರ್ಥ ನಿರ್ಧಾರ ಮತ್ತು ಇದು ಸ್ವಾಗತಾರ್ಹ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಪಿಎಫ್‍ಐ ನಾಯಕರು ಜಾಗತಿಕ ಉಗ್ರ ಸಂಘಟನೆಗಳ ಜೊತೆ ಸಂಬಂಧ ಹೊಂದಿದ್ದರು. ಕೇಂದ್ರ ಸರಕಾರ ಮಹತ್ವದ ಬೆಳವಣಿಗೆಯೊಂದರಲ್ಲಿ, ಪಿಎಫ್‍ಐ ಹಾಗೂ ಅದರ ಇತರ ಸಹವರ್ತಿ ಸಂಸ್ಥೆಗಳನ್ನು, ಐದು ವರ್ಷಗಳ ವರೆಗೆ ನಿಷೇಧಿಸಿದೆ. ಇದನ್ನು ನಾನು ಸ್ವಾಗತಿಸುತ್ತೇನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ದೇಶದಲ್ಲಿ ಕೋಮು ಸೌಹಾರ್ದ ಕೆಡಿಸಿ, ಭಯೋತ್ಪಾದಕ ಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಗ್ಗೆ ಕೇಂದ್ರ ಸರಕಾರ ಬಲವಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ದೇಶದ ಏಕತೆ ಹಾಗೂ ಸಮಗ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಿಷೇಧ ಕ್ರಮ ಕೈಗೊಂಡಿದೆ ಎಂದಿದ್ದಾರೆ.
ಭವಿಷ್ಯದಲ್ಲಿ ವಿದ್ರೋಹಿ ಹಾಗೂ ವಿಚ್ಛಿದ್ರಕಾರಿ ಮನಸ್ಥಿತಿಯ ಸಂಘಟನೆಗಳು ಸಮಾಜದ ಒಳಗಡೆ ರೂಪುಗೊಳ್ಳದಂತೆ ಎಚ್ಚರಿಕೆ ವಹಿಸಬೇಕು. ನಿಷೇಧದ ಸುತ್ತ ಯಾವ ರಾಜಕೀಯ ಪಕ್ಷವೂ ತುಷ್ಟೀಕರಣದ ಮತ್ತು ರಾಜಕೀಯ ಲಾಭ ಪಡೆಯುವ ಪ್ರಯತ್ನದ ಮಾಡಬಾರದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಸಿದ್ದರಾಮಯ್ಯರ ನೇತೃತ್ವದ ಸರಕಾರವು ಇಂಥ ಸಮಾಜವಿದ್ರೋಹಿಗಳ ಮೇಲಿನ ಪ್ರಕರಣಗಳನ್ನು ರದ್ದು ಮಾಡಿ ಅವುಗಳ ಬೆಳವಣಿಗೆಗೆ ಸಹಕರಿಸಿತ್ತು. ಇದನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಉತ್ತರವನ್ನು ಮುಂದಿನ ದಿನಗಳಲ್ಲಿ ಕೊಡುವುದು ಖಚಿತ ಎಂದ ಎಚ್ಚರಿಸಿದ್ದಾರೆ.