ಪಿಎಫ್‍ಐ ಮೇಲೆ ದಾಳಿಗೆ ಒಂದು ಡೈರಿ ಕಾರಣ..!?

Social Share

ಬೆಂಗಳೂರು,ಸೆ.27- ರಾಜ್ಯ ಪೊಲೀಸರು ಪಿಎಫ್‍ಐ ಸಂಘಟನೆ ವಿರುದ್ಧ ಎಲ್ಲ ಜಿಲ್ಲೆಗಳಲ್ಲೂ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿ ಹಲವರನ್ನು ವಶಕ್ಕೆ ತೆಗೆದುಕೊಂಡಿರುವುದು ಒಂದು ಡೈರಿಯಲ್ಲಿನ ಮಾಹಿತಿ ಪ್ರಮುಖ ಕಾರಣವಾಗಿದೆ.

ಕಳೆದ ವಾರ ಎನ್‍ಐಎ ಸ್ಥಳೀಯರ ಪೊಲೀಸರ ಸಹಕಾರದೊಂದಿಗೆ ದೇಶಾದ್ಯಂತ 12 ರಾಜ್ಯಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಪಿಎಫ್‍ಐ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಹಲವರನ್ನು ಬಂಧಿಸಿತ್ತು. ಆ ವೇಳೆದ ದೊರೆತ ಮಾಹಿತಿಗಳನ್ನು ಎನ್‍ಐಎ ರಾಜ್ಯದ ಪೊಲೀಸರೊಂದಿಗೆ ಹಂಚಿಕೊಂಡಿದೆ.

ಆ ಡೈರಿಯಲ್ಲಿನ ಮಾಹಿತಿಯನ್ನು ಪರಿಶೀಲಿಸಿದಾಗ ಬೆಚ್ಚಿಬೀಳಿಸುವ ಅಂಶಗಳು ಪತ್ತೆಯಾಗಿವೆ. ಸಂಘಟನಾತ್ಮಕ ಅಪರಾಧಗಳಿಗೆ ಸಂಚು ರೂಪಿಸಿರುವ ಜೊತೆಗೆ ಹಲವು ನಾಯಕರುಗಳ ಹೆಸರುಗಳನ್ನು ಡೈರಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

ಪಿಎಫ್‍ಐ ಕಚೇರಿಗಳಲ್ಲಿ ಕೆಲವು ಪೇಪರ್ ಕಟಿಂಗ್‍ಗಳು ಪತ್ತೆಯಾಗಿದ್ದು, ಅದರಲ್ಲಿ ಹಿಂದೂ ಸಂಘಟನೆಗೆ ಸೇರಿದ ನಾಯಕರು, ಮುಖಂಡರು ಮಾಡಿರುವ ಭಾಷಣಗಳು, ಹೇಳಿಕೆಗಳನ್ನು ಪ್ರತ್ಯೇಕವಾಗಿ ಗುರುತು ಹಾಕಲಾಗಿತ್ತು ಎಂದು ತಿಳಿದುಬಂದಿದೆ.
ಆಯ್ದ ಮಾಹಿತಿಗಳನ್ನು ಡೈರಿಯಲ್ಲಿ ಉಲ್ಲೇಖಿಸಿರುವುದರ ಜೊತೆಗೆ ಸಂಪರ್ಕ ಜಾಲದ ಮಾಹಿತಿಯು ರಹಸ್ಯ ಕೋಡ್‍ಗಳಲ್ಲಿ ನಮೂದಾಗಿತ್ತು ಎಂದು ಹೇಳಲಾಗಿದೆ.

ಡೈರಿಯ ಮಾಹಿತಿ ಪ್ರಕಾರ ರಾಜ್ಯದಲ್ಲಿ ಉಗ್ರ ಸಂಘಟನೆಗೆ ಯುವಕರನ್ನು ಸೆಳೆಯುವ ಕಾರ್ಯಾಗಾರಗಳು ಬಿರುಸಿನಿಂದ ನಡೆಯುತ್ತಿದ್ದವು. ಮುಂದಿನ ದಿನಗಳಲ್ಲಿ ವಿಧ್ವಂಸಕ ಸಂಚುಗಳ ಮೂಲಕ ಅಶಾಂತಿಯ ವಾತಾವರಣ ಸೃಷ್ಟಿಸುವುದು, ಭದ್ರತೆಗೆ ಧಕ್ಕೆ ಉಂಟು ಮಾಡುವುದು, ಜನಜೀವನ ಮತ್ತು ಆಸ್ತಿಪಾಸ್ತಿಗಳಿಗೆ ಹಾನಿ ಮಾಡುವ ದುರದ್ದೇಶ ಹೊಂದಿದ್ದಾಗಿ ತಿಳಿದುಬಂದಿದೆ.

ಈ ಮೊದಲು ಬಿಹಾರದ ಪಾಟ್ನಾದಲ್ಲಿನ ಹೃದಯಭಾಗದಲ್ಲಿರುವ ಪ್ರಾರ್ಥನಾ ಮಂದಿರವೊಂದರ ಮೇಲೆ ದಾಳಿ ನಡೆಸಿದಾಗ ವಿಧ್ವಂಸಕ ಸಂಚುಗಳ ಸುಳಿವು ದೊರೆತಿತ್ತು. ಅದರ ಬೆನ್ನಹತ್ತಿದ ಪೊಲೀಸರು ಮತ್ತು ಎನ್‍ಐಎ ಅಧಿಕಾರಿಗಳು ಕಾರ್ಯಾಚರಣೆಯನ್ನು ದೇಶಾದ್ಯಂತ ವಿಸ್ತರಿಸಿದ್ದಾರೆ.

ಉಗ್ರ ಸಂಘಟನೆಗಳ ಬೇರುಗಳನ್ನು ಬುಡಸಮೇತ ಕಿತ್ತು ಹಾಕುವ ಸಂಕಲ್ಪದೊಂದಿಗೆ ಕಾರ್ಯಾಚರಣೆಗಿಳಿದಿದ್ದಾರೆ. ಕಳೆದ 10 ದಿನಗಳಲ್ಲಿ 2ನೇ ಬಾರಿ ಬೃಹತ್ ಕಾರ್ಯಾಚರಣೆ ನಡೆದಿದ್ದು, ನೂರಾರು ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ದೇಶದಲ್ಲಿ ಇಸ್ಲಾಮಿಕ್ ಆಡಳಿತ ಜಾರಿಗೊಳಿಸುವ ಸಂಚಿನೊಂದಿಗೆ ಪ್ರತ್ಯೇಕವಾದ ಕಾರ್ಯತಂತ್ರ ರೂಪಿಸಿ ಕೆಲವು ಸಂಘಟನೆಗಳು ಕೆಲಸ ಮಾಡುತ್ತಿದ್ದವು ಎನ್ನಲಾಗಿದೆ.

ಡೈರಿಯಲ್ಲಿ ಇಂತಹ ಹಲವು ಮಾಹಿತಿಗಳು ಬಹಿರಂಗಗೊಂಡಿವೆ. ದಾಳಿಯ ಮೂಲಕ ಭಾರೀ ವಿಧ್ವಂಸಕ ಕೃತ್ಯಗಳ ಸಂಚನ್ನು ವಿಫಲಗೊಳಿಸಿರುವ ಪೊಲೀಸರು ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರರ ಸಂಘಟನೆಗಳ ನೇಮಕಾತಿಗೂ ತಡೆಯೊಡ್ಡಿದ್ದಾರೆ ಎಂದು ತಿಳಿದುಬಂದಿದೆ.

Articles You Might Like

Share This Article