ನವದೆಹಲಿ,ಸೆ.28- ಯಾರೂ ಕೂಡ ನಿರೀಕ್ಷೆ ಮಾಡದ ರೀತಿಯಲ್ಲಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಅದರ ಅಂಗಸಂಸ್ಥೆಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಬಲವಾದ ಕಾರಣಗಳನ್ನು ನೀಡಿದೆ. ಈ ಹಿಂದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‍ಡಿಎ ಸರ್ಕಾರದ ಅವಧಿಯಲ್ಲಿ ಸಿಮಿ ಸಂಘಟನೆಗೆ ನಿಷೇಧ ಹೇರಲಾಗಿತ್ತು. ನಂತರ ಅದರ ಮತ್ತೊಂದು ಮುಖವಾಡವೇ ಪಿಎಫ್‍ಐ ಎಂಬುದು ಹಲವರ ಆರೋಪವಾಗಿತ್ತು.
ಸರಿಸುಮಾರು ಒಂದು ದಶಕದಿಂದ ಈ ಸಂಘಟನೆಗಳನ್ನು ನಿಷೇಧ ಮಾಡಬೇಕೆಂದು ಅನೇಕ ರಾಜ್ಯ ಸರ್ಕಾರಗಳು ಕೇಂದ್ರದ ಮೇಲೆ ಒತ್ತಡ ಹಾಕಿದ್ದವು. ಸೂಕ್ತ ದಾಖಲೆಗಳಿಗೆ ಕಾಯುತ್ತಿದ್ದ ಕೇಂದ್ರ ಗೃಹ ಇಲಾಖೆ ಕಳೆದ ಒಂದು ತಿಂಗಳಿನಿಂದ ದೇಶಾದ್ಯಂತ ಭಾರೀ ಕಾರ್ಯಾಚರಣೆ ನಡೆಸಿ ಅದರ ಮುಖಂಡರು, ಪದಾಧಿಕಾರಿಗಳನ್ನು ಬಂಧಿಸಿ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿ ಕೊಂಡಿತ್ತು.
ಇದನ್ನೂ ಓದಿ : BIG NEWS: ದೇಶದ್ರೋಹಿ PFI ಸಂಘಟನೆ ಬ್ಯಾನ್, ಕೇಂದ್ರ ಸರ್ಕಾರ ಖಡಕ್ ನಿರ್ಧಾರ
ನಿನ್ನೆಯಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಎನ್‍ಐಎ, ಇಡಿ, ಗುಪ್ತಚರ ವಿಭಾಗ, ಸಂಶೋಧನೆ ಮತ್ತು ವಿಶ್ಲೇಷಣೆ ಸೇರಿದಂತೆ ವಿವಿಧ ವಿಭಾಗದ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಇದರ ಬೆನ್ನಲ್ಲೇ ಪಿಎಫ್‍ಐ ಹಾಗೂ ಅದರ ಅಂಗಸಂಸ್ಥೆಗಳನ್ನು ಗೃಹ ಇಲಾಖೆ 5 ವರ್ಷ ನಿಷೇಧ ಹೇರಿದೆ.
ಗೃಹ ಇಲಾಖೆ ಕೊಟ್ಟಿರುವ ಕಾರಣಗಳು ಕೆಳಕಂಡಂತಿವೆ. 2006ರಲ್ಲಿ ಕೇರಳದಲ್ಲಿ ಜನ್ಮ ತಳೆದ ಪಿಎಫ್‍ಐ ಸಂಘಟನೆಯು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿತ್ತು. ಇದು ದೇಶದ ಭದ್ರತೆ ಹಾಗೂ ಕೋಮು ಸೌಹಾರ್ದಕ್ಕೆ ಮಾರಕವಾಗಿ ನಡೆದುಕೊಂಡಿದೆ.
ಪಿಎಫ್‍ಐ ಹಾಗೂ ಅದರ ಸಹ ಸಂಘಟನೆಗಳು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದವು.
ಪಿಎಫ್‍ಐನ ಸಂಸ್ಥಾಪಕ ಸದಸ್ಯರು ನಿಷೇಧಿತ ಭಯೋತ್ಪಾದನಾ ಸಂಘಟನೆಯಾದ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‍ಮೆಂಟ್ ಆಫ್ ಇಂಡಿಯಾ ಸಂಘಟನೆಯೊಂದಿಗೆ ಪಿಎಫ್‍ಐಗೆ ನಂಟು ಇತ್ತು.
ಪಿಎಫ್‍ಐ ಸಂಘಟನೆಗೆ ಜಾಗತಿಕ ಉಗ್ರ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಸಿರಿಯಾ ಜತೆಗೂ ನಂಟು ಇತ್ತು. ಪಿಎಫ್‍ಐ ಸಂಘಟನೆಯು ಮೂಲಭೂತವಾದಕ್ಕೆ ಬೆಂಬಲ ಕೊಡುತ್ತಿತ್ತು ಹಾಗೂ ದೇಶದಲ್ಲಿ ಅಭದ್ರತೆ ಸೃಷ್ಟಿಗೆ ಕಾರಣವಾಗಿತ್ತು.