ತಿರುವನಂತಪುರಂ,ಸೆ.23-ರಾಷ್ಟ್ರೀಯ ತನಿಖಾ ದಳ ಕಾರ್ಯಾಚರಣೆ ನಂತರ ಕೇರಳದ ವಿವಿಧ ಭಾಗಗಳಲ್ಲಿ ಇಂದು ಹಿಂಸಾಚಾರ ಘಟನೆಗಳು ನಡೆದಿದೆ. ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುತ್ತಿರುವ ಬಗ್ಗೆ ಎನ್‍ಐಎ ನೇತೃತ್ವದ ಅಧಿಕಾರಿಗಳ ಪಡೆ ಪಿಎಫ್‍ಐ ನಾಯಕರ ಕಚೇರಿಗಳು ಮತ್ತು ನಿವಾಸಗಳ ಮೇಲೆ ದಾಳಿ ನಡೆಸಿ ಹಲವರನ್ನು ಬಂಧಿಸಿರುವುದನ್ನು ವಿರೋಧಿಸಿ ಇಂದು ಬಂದ್ ಕರೆ ವ್ಯಾಪ ಹಿಂಸಾಚಾರಕ್ಕೆ ಇಳಿದಿದೆ.
ತಿರುವನಂತಪುರಂ, ಕೊಲ್ಲಂ, ಕೋಝಿಕ್ಕೋಡ್, ವಯನಾಡ್ ಮತ್ತು ಅಲಪ್ಪುಳ ಸೇರಿದಂತೆ ವಿವಿಧ ಜಿಲ್ಲಾಗಳಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಕೆಲವೆಡೆ ಅಂಗಡಿಗಳನ್ನು ಕೂಡ ಜಖಂಗೊಳಿಸಲಾಗಿದೆ.
ಖಾಸಗಿ ವಾಹನಗಳನ್ನೂ ಕೂಡ ತಡೆದು ಉದ್ರಿಕ್ತರ ಗುಂಪು ಪ್ರತಿಭಟನೆ ನಡೆಸುತ್ತಿದ್ದು, ಇದನ್ನು ತಡೆಯಲು ಪೊಲೀಸರು ಸಾಕಷ್ಟು ಹರಸಾಹಸಪಟ್ಟಿದ್ದಾರೆ. ಕೆಲವೆಡೆ ಪೊಲೀಸ್ ಗಸ್ತು ವಾಹನಗಳನ್ನು ತಡೆದು ದಾಂಧಲೆ ನಡೆಸಿರುವ ಘಟನೆಗಳು ಕೂಡ ವರದಿಯಾಗಿದೆ. ನೂರಾರು ಮಂದಿ ಪಿಎಫ್‍ಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಣ್ಣೂರಿನ ನಾರಾಯಣಪಾರಾದಲ್ಲಿ ಬೆಳಿಗ್ಗೆ ಪತ್ರಿಕೆಗಳನ್ನು ವಿತರಿಸಲು ಸಾಗಿಸುತ್ತಿದ್ದ ವಾಹನದ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಲಪ್ಪುಳದಲ್ಲಿ ನಡೆದ ಕಲ್ಲು ತೂರಾಟ ಬಸ್‍ಗಳು, ಟ್ಯಾಂಕರ್ ಲಾರಿ ಮತ್ತು ಇತರ ಕೆಲವು ವಾಹನಗಳು ಜಖಂಗೊಂಡಿವೆ. ಹಲವು ಚಾಲಕರು ಹಾಗೂ ಜನರು ಗಾಯಗೊಂಡಿದ್ದಾರೆ.
ಕೋಝಿಕ್ಕೋಡ್ ಮತ್ತು ಕಣ್ಣೂರಿನಲ್ಲಿ ಪಿಎಫ್‍ಐ ಕಾರ್ಯಕರ್ತರು ನಡೆಸಿದ ಕಲ್ಲು ತೂರಾಟದಲ್ಲಿ ಕ್ರಮವಾಗಿ 15 ವರ್ಷದ ಬಾಲಕಿ ಮತ್ತು ಆಟೋ ರಿಕ್ಷಾ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸರಕು ಸಾಗಾಣೆ ಲಾರಿಗಳ ಸಾಲು ಅಲ್ಲಲ್ಲಿ ನಿಂತಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಾರಿಗೆ ಬಸ್‍ಗಳ ಸೇವೆಯನ್ನು ಬಂದ್ ಮಾಡಲಾಗಿದೆ ಎಂದು ಸಾರಿಗೆ ಸಚಿವ ಆಂಟೋನಿ ರಾಜು ತಿಳಿಸಿದ್ದಾರೆ.
ಏತನ್ಮಧ್ಯೆ, ಕೇರಳ ಪೊಲೀಸರು ರಾಜ್ಯದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಸೂಕ್ಮ ಪ್ರದೇಶದಲ್ಲಿ ಕೇಂದ್ರೀಯ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಘಟನೆ ಕುರಿತಂತೆ ರಾಜ್ಯ ಹೈಕೋರ್ಟ್ ಪಿಎಫ್‍ಐನ ದಿಢೀರ್ ಬಂದ್ ಕರೆ ಅಸಂವಿಧಾನಿಕ ಎಂದು ತರಾಟೆಗೆ ತೆಗೆದುಕೊಂಡಿದೆ. ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಬಂದ್‍ಗೆ ಕರೆ ಕೊಡುವುದು ಸರಿಯಲ್ಲ. ಸರ್ಕಾರ ಇದರ ವಿರುದ್ಧ ಕಠಿಣ ನಿರ್ಧಾರ ಕೈಗೊಳ್ಳಬೇಕೆಂದು ಸೂಚನೆ ನೀಡಿದೆ.