ಬೆಂಗಳೂರು,ಸೆ.29- ಕೇಂದ್ರ ಸರ್ಕಾರ ಐದು ವರ್ಷಗಳ ಕಾಲ ನಿಷೇಧಿಸಿರುವ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಪರವಾಗಿ ಯಾರೇ ಧ್ವನಿ ಎತ್ತಿದರೂ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ನೇರ ಎಚ್ಚರಿಕೆ ಕೊಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆಯಷ್ಟೇ ಕೇಂದ್ರ ಸರ್ಕಾರ ಪಿಎಫ್‍ಐ ಸೇರಿದಂತೆ ಅದರ 8 ಅಂಗಸಂಸ್ಥೆಗಳನ್ನು ಐದು ವರ್ಷಗಳ ಕಾಲ ನಿಷೇಧ ಮಾಡಿದೆ. ಒಂದು ವೇಳೆ ಈ ಸಂಘಟನೆ ಪರವಾಗಿ ಹೋರಾಟ ಪ್ರತಿಭಟನೆ ನಡೆಸಿದರೆ ಅಂಥವರ ಮೇಲೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಗುಡುಗಿದರು.
ಕೇಂದ್ರದ ಸೂಚನೆಯಂತೆ ಈಗಾಗಲೇ ರಾಜ್ಯದ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಯಾವುದೇ ಗಲಾಟೆ ನಡೆಯದಂತೆ ಕ್ರಮವಹಿಸಲಾಗಿದೆ. ನಿಷೇದಿತ ಈ ಸಂಘಟನೆ ಹೆಸರಿನಲ್ಲಿ ಯಾರೊಬ್ಬರು ಯಾವುದೇ ರೀತಿಯ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ಸೂಚಿಸಿದ್ದಾರೆ.
ಯಾವುದೇ ಸಂಘಟನೆ ರಾಜಕೀಯ ಪಕ್ಷಗಳು ದೇಶದ್ರೋಹಿ ಕೆಲಸದಲ್ಲಿ ಭಾಗವಹಿಸಿದ್ದರೆ ಅಂಥವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ನಾವು ಯಾರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಸಿದರು.
ಪಿಎಫ್‍ಐ ಹಾಗೂ ಅದರ 8 ಅಂಗಸಂಸ್ಥೆಗಳನ್ನು ನಿಷೇಧ ಹೇರಿದ ಹಿನ್ನೆಲೆಯಲ್ಲಿ ಕೆಲವು ಸಮಾಜಘಾತುಕ ಶಕ್ತಿಗಳು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬಹುದು ಎಂಬ ಹಿನ್ನೆಲೆಯಲ್ಲಿ ಕೆಎಸ್‍ಆರ್‍ಪಿ ತುಕಡಿ ಸೇರಿದಂತೆ ವಿವಿಧ ಶ್ರೇಣಿಯ ಭದ್ರತೆಯನ್ನು ಒದಗಿಸಲಾಗಿದೆ ಎಂದರು.
ಪಿಎಫ್‍ಐ ಜೊತೆಗೆ ಎಸ್‍ಡಿಪಿಐ ಸಂಘಟನೆಯನ್ನು ರಾಜ್ಯ ಸರ್ಕಾರ ನಿಷೇಧ ಮಾಡಲಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಒಂದು ಸಂಘಟನೆಯನ್ನು ನಿಷೇಧ ಮಾಡಬೇಕಾದರೆ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಕಲೆ ಹಾಕಬೇಕಾಗುತ್ತದೆ ಎಂದು ಹೇಳಿದರು.
ಎಸ್‍ಡಿಪಿಐ ಒಂದು ರಾಜಕೀಯ ಮಾನ್ಯತೆ ಇರುವ ಸಂಘಟನೆ. ಅದನ್ನು ನಿಷೇಧ ಮಾಡಬೇಕೆಂದರೆ ನೀತಿ-ನಿಯಮಗಳು ಇರುತ್ತವೆ. ಪಿಎಫ್‍ಐನ್ನು ನಿಷೇಧಿಸುವಾಗಲು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗಿತ್ತು. ಈಗ ಎಸ್‍ಡಿಪಿಐ ನಿಷೇಧಿಸಬೇಕಾದರೂ ಇದೇ ಕಾನೂನು ಕ್ರಮ ಅನುಸರಿಸಬೇಕು ಎಂದರು.
ಒಂದು ವೇಳೆ ಎಸ್‍ಡಿಪಿಐ ಭಯೋತ್ಪಾದಕ ಸಂಘಟನೆಗಳಿಗೆ ಕುಮ್ಮುಕು ಕೊಡುವುದು ಇಲ್ಲವೇ ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಸಾಕ್ಷಾಧಾರಗಳಿಂದ ಸಾಬೀತಾದರೆ ಅದನ್ನು ಕೂಡ ನಿಷೇಧ ಮಾಡಲು ಹಿಂದೆ ಮಂದೆ ನೋಡುವುದಿಲ್ಲ ಎಂದು ಹೇಳೀದರು.
ಪಿಎಫ್‍ಐ ಸಂಘಟನೆ ನಿಷೇಧ ಮಾಡಿದ ಬಳಿಕ ಆಸ್ತಿ ಮುಟುಗೋಲು ಮಾಡಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. ಈ ಬಗ್ಗೆ ನಾವು ಸರ್ವೆ ಕೂಡ ಮಾಡುತ್ತಿದ್ದೇವೆ. ಎಲ್ಲೆಲ್ಲಿ ಅವರು ಆಸ್ತಿ ಹೊಂದಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಬೇಕು. ನಂತರ ಮುಟುಗೋಲು ಪ್ರಕ್ರಿಯೆ ಆರಂಭವಾಗಲಿದೆ.
ಮುಸ್ಲಿಂ ಮತವನ್ನು ವಿಭಜನೆ ಮಾಡಲು ಎಸ್‍ಡಿಪಿಐ ನಿಷೇಧ ಮಾಡಿಲ್ಲ ಎಂಬ ಪ್ರತಿಪಕ್ಷ ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಅರಗ ಜ್ಞಾನೇಂದ್ರ , ಇದು ಆ ಪಕ್ಷದ ಬೌದ್ಧಿಕ ದಿವಾಳಿತನ ತೋರುತ್ತದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ನಾಯಕರಿಗೆ ಯಾವಾಗಲೂ ಮತ ಬ್ಯಾಂಕ್ ರಾಜಕಾರಣವೇ ಮುಖ್ಯ. ಅವರು ಅಧಿಕಾರದಲ್ಲಿದ್ದಾಗ ಈ ಸಂಘಟನೆಗಳನ್ನು ಏಕೆ ನಿಷೇಧ ಮಾಡಿರಲಿಲ್ಲ ಎಂದು ಪ್ರಶ್ನಿಸಿದರು.
ನಮಗೆ ದೇಶ ಮುಖ್ಯ. ಅವರಿಗೆ ಚುನಾವಣೆ ಗೆಲ್ಲುವುದೇ ಮುಖ್ಯ. ಬಿಜೆಪಿ, ಕಾಂಗ್ರೆಸ್‍ಗೂ ಇರುವ ವ್ಯತ್ಯಾಸ ಇದೇ ಎಂದು ವ್ಯಂಗ್ಯವಾಡಿದರು. ಕೇಂದ್ರ ಸರ್ಕಾರ ಸೂಚನೆ ಕೊಟ್ಟಂತೆ ನಾವು ಪಾಲನೆ ಮಾಡುತ್ತಿದ್ದೇವೆ. ಪಿಎಫ್‍ಐ ಸಂಘಟನೆಗಳ ಕಚೇರಿಗೆ ಬೀಗ ಹಾಕಲಾಗಿದೆ. ಮುಂದಿನ ಪ್ರಕ್ರಿಯೆಗಳು ಕಾನೂನು ಪ್ರಕಾರ ನಡೆಯಲಿವೆ. ಈಗಾಗಲೇ ಅಧಿಕಾರಿಗಳು ಈ ಬಗ್ಗೆ ಸೂಚನೆ ಕೊಟ್ಟಿರುವುದಾಗಿ ಮಾಹಿತಿ ನೀಡಿದರು.
ಆರ್‍ಎಸ್‍ಎಸ್ ಸಂಘಟನೆಯನ್ನು ನಿಷೇಧ ಮಾಡಬೇಕೆಂಬ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೂ ಅರಗ ಜ್ಞಾನೇಂದ್ರ ಕೆಂಡಮಂಡಲವಾದರು. ಆರ್‍ಎಸ್‍ಎಸ್ ಈ ದೇಶದಲ್ಲಿ ಒಂದು ದೇಶಭಕ್ತ ಸಂಘಟನೆ. ಅದು ಎಂದಿಗೂ ಕೂಡ ದೇಶದ್ರೋಹಿ ಕೆಲಸ ಮಾಡಿಲ್ಲ. ಆ ಸಂಘಟನೆ ಬಗ್ಗೆ ಗೊತ್ತಿಲ್ಲದವರು ಈ ರೀತಿ ಮಾತನಾಡುತ್ತಾರೆ ಎಂದು ಕುಹುಕವಾಡಿದರು.
ಆರ್‍ಎಸ್‍ಎಸ್ ರಾಷ್ಟ್ರ ಭಕ್ತರನ್ನು ನಿರ್ಮಾಣ ಮಾಡುವ ಸಂಘ. ಜನರಲ್ಲಿ ಚಾರಿತ್ರೆ ನಿರ್ಮಾಣ ಮಾಡುವ ಕೆಲಸ ಮಾಡುತ್ತಿದೆ. ಪಿಎಫ್‍ಐ ಎಂಬ ಮತೀಯ ಸಂಘಟನೆ ಜೊತೆ ಆರ್‍ಎಸ್‍ಎಸ್ ಹೋಲಿಕೆ ಮಾಡುವುದು ತಪ್ಪು. ಹೀಗೆ ಹೋಲಿಕೆ ಮಾಡುವವರಿಗೆ ಮಾನಸಿಕ ದಾರಿದ್ರ್ಯತನವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರವೇ ಪಿಎಸ್‍ಎಫ್‍ಐ, ಎಸ್‍ಡಿಪಿಐನಂತರ ಮೂಲಭೂತ ಸಂಘಟನೆಗಳ ಮೃದು ಧೋರಣೆ ಹೊಂದಿದ್ದರು. ಅವರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಸಹ ಹಿಂಪಡೆದು ಸಹ ಇವರೇ. ನಿಮ್ಮ ಜೊತೆ ನಾವು ಇದ್ದೇವೆ ಎಂದು ಅಭಯ ನೀಡಿದ್ದರು ಎಂದು ಆರೋಪಿಸಿದರು.
ಕಾಂಗ್ರೆಸ್‍ಗೆ ಈಗ ದೇಶಕ್ಕಿಂತ ಅಕಾರ ಮುಖ್ಯ. ಹಾಗಾಗಿ ಅವರು ಇಂದು ಈ ಮಟ್ಟಕ್ಕೆ ತಲುಪಿದ್ದಾರೆ. ಕುರ್ಚಿಗಾಗಿ ಯಾವುದೇ ಸಂಘಟನೆಗಳಿಗೆ ಬೇಕಾದರೂ ಬೆಂಬಲ ಕೊಡುತ್ತಾರೆ. ಅಂಥವರ ಬಗ್ಗೆ ಮಾತನಾಡದಿರುವುದೇ ಲೇಸು ಎಂದರು.