ಬೆಂಗಳೂರು,ಸೆ.27- ಇಂದು ಮುಂಜಾನೆ 3 ಗಂಟೆಯಿಂದಲೇ ರಾಜ್ಯಾದ್ಯಂತ ಪೊಲೀಸರು, ಪಿಎಫ್‍ಐ ಪದಾಧಿಕಾರಿಗಳ ಮತ್ತು ಮುಖಂಡರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್‍ಕುಮಾರ್ ತಿಳಿಸಿದ್ದಾರೆ.
ಈ ಸಂಜೆಯೊಂದಿಗೆ ಮಾತನಾಡುತ್ತಿದ್ದ ಅವರು, ಈತನಕ 80 ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಜಿಲ್ಲೆಗಳಲ್ಲಿ ಎಸ್ಪಿಗಳು, ನಗರಗಳಲ್ಲಿ ಆಯುಕ್ತರುಗಳ ನೇತೃತ್ವದಲ್ಲಿ ಈ ದಾಳಿ ನಡೆದಿದೆ ಎಂದರು.
ಎನ್‍ಐಎ ಮತ್ತು ಇನ್ನಿತರ ಕೇಂದ್ರದ ತನಿಖಾ ಏಜೆನ್ಸಿಗಳಿಂದ ಕೆಲವು ಮಾಹಿತಿಗಳನ್ನು ಪಡೆದುಕೊಂಡು ನಾವು ಈ ದಾಳಿಯನ್ನು ನಡೆಸಿದ್ದೇವೆ ಎಂದು ತಿಳಿಸಿದರು.
ರಾಜ್ಯದ ಜಿಲ್ಲೆಗಳು ಹಾಗೂ ನಗರಗಳಲ್ಲಿ ಏಕಕಾಲಕ್ಕೆ ಈ ದಾಳಿ ನಡೆದಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ, ಕೋಮು ಸೌಹಾರ್ದಕ್ಕೆ ಹಾನಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ದಾಳಿಯನ್ನು ನಡೆಸಲಾಗಿದೆ ಎಂದು ಅವರು ತಿಳಿಸಿದರು.
ವಶಕ್ಕೆ ತೆಗೆದುಕೊಂಡಿರುವ ಎಲ್ಲ ವ್ಯಕ್ತಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ದಾಳಿ ಸಂದರ್ಭದಲ್ಲಿ ಯಾವುದೇ ರೀತಿಯ ಘಟನೆಗಳು ನಡೆಯದಂತೆ ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಅವರು ಹೇಳಿದರು.