ವೃದ್ಧರಿಗೆ ವಂಚಿಸುತ್ತಿದ್ದ ಪಿಎಚ್‍ಡಿ ಪದವೀಧರ ಅಂದರ್

Social Share

ದಾವಣಗೆರೆ, ಮಾ.5- ಓದಿಗೆ ತಕ್ಕ ಕೆಲಸ ಸಿಗದೆ ಎಟಿಎಂ ಅದಲು-ಬದಲು ಮಾಡಿ ಹಣ ವಂಚಿಸುತ್ತಿದ್ದ ಪಿಹೆಚ್‍ಡಿ ಪದವೀಧರನೊಬ್ಬನನ್ನು ಬಂಧಿಸಿರುವ ಪೊಲೀಸರು ಬಂಧಿತನಿಂದ 8,58,800 ರೂ. ವಶಪಡಿಸಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಹಾವೇರಿ ಜಿಲ್ಲೆ ರಾಣೇಬೆನ್ನೂರು ಮೂಲದ ಯೋಗಾನಂದ್(47) ಬಂಧಿತ ಆರೋಪಿ.
ಇಂಗ್ಲೀಷ್ ವಿಷಯದಲ್ಲಿ ಎಂಎ ಸ್ನಾತಕೋತ್ತರ ಪದವಿ ಪಡೆದು, ಪಿಹೆಚ್‍ಡಿ ಮಾಡಿದ್ದ ಈತ ಅವಿವಾಹಿತನಾಗಿದ್ದು, ಯಾವುದೇ ಉದ್ಯೋಗ ಸಿಗದೆ ಎಟಿಎಂನಿಂದ ಹಣ ತೆಗೆದುಕೊಡುವ ನೆಪದಲ್ಲಿ ವೃದ್ಧರಿಗೆ ವಂಚಿಸುತ್ತಿದ್ದ ಎಂದರು.
ಹಣ ಡ್ರಾ ಮಾಡಿಕೊಳ್ಳಲು ಎಟಿಎಂಗೆ ಬರುತ್ತಿದ್ದ ವೃದ್ಧರನ್ನೇ ಗುರಿಯಾಗಿಸಿಕೊಂಡು, ಅವರಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಎಟಿಎಂಗೆ ಹೋಲಿಕೆಯಾಗುವ ಮತ್ತೊಂದು ಎಟಿಎಂ ನೀಡುತ್ತಿದ್ದ. ನಂತರ ಅವರ ಎಟಿಎಂನಿಂದ ಹಣ ಡ್ರಾ ಮಾಡಿಕೊಳ್ಳುತ್ತಿದ್ದ. ಆರೋಪಿಯ ಬಳಿಯಿದ್ದ 78 ಎಟಿಎಂ ಕಾರ್ಡ್‍ಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ.
ಈತ ದಾವಣಗೆರೆ, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ, ಹಿರಿಯೂರು, ತುಮಕೂರು, ಶಿಗ್ಗಾವಿ, ಹಿರೇಕೇರೂರು ಸೇರಿದಂತೆ ರಾಜ್ಯದ ವಿವಿಧೆಡೆ ಒಟ್ಟು 18 ಎಟಿಎಂ ಹಣ ವಂಚನೆ ಪ್ರಕರಣದಲ್ಲಿ ಭಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅವರು ಹೇಳಿದರು.
ಕಳೆದ ನ.30ರಂದು ತಾಲೂಕಿನ ಮುಚ್ಚನೂರು ಗ್ರಾಮದ ಪಾಪಣ್ಣ ಎಂಬುವವರಿಗೆ ಆರೋಪಿಯು ಮಂಡಿಪೇಟೆಯ ಎಸ್‍ಬಿಐ ಎಟಿಎಂ ಕೇಂದ್ರದಲ್ಲಿ ಹಣ ತೆಗೆದುಕೊಡುವುದಾಗಿ ಹೇಳಿ 69,200 ರೂ. ವಂಚಿಸಿದ್ದ. ಈ ಬಗ್ಗೆ ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ನಂತರ ಸಿಸಿಟಿವಿ ಫುಟೇಜ್ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಯಾಯಿತು. ಇದೇ ರೀತಿ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿಯಲ್ಲಿ ಆರೋಪಿಯು ಎಟಿಎಂ ಸಹಾಯದ ಹೆಸರಲ್ಲಿ 3 ಲಕ್ಷ ರೂ. ವಂಚಿಸಿದ್ದ ಎಂದು ಅವರು ವಿವರಿಸಿದರು. ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದ ನಗರ ಡಿವೈಎಸ್‍ಪಿ ನರಸಿಂಹ ವಿ.ತಾಮ್ರಧ್ವಜ, ಸಿಪಿಐ ನಾಗಪ್ಪ ಬಂಕಾಳಿ, ಪಿಎಸ್‍ಐ ಲಲಿತಮ್ಮ ಹಾಗೂ ಸಿಬ್ಬಂದಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Articles You Might Like

Share This Article