ಬೆಂಗಳೂರು, ಜ.22- ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಬಿಬಿಎಂಪಿ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು, ಕೆಮ್ಮು, ಶೀತ, ಜ್ವರದಂತಹ ಲಕ್ಷಣಗಳಿರುವವರ ಬಗ್ಗೆ ಮನೆ ಮನೆಗೆ ತೆರಳಿ ಪರೀಕ್ಷೆ ನಡೆಸಲು ಮುಂದಾಗಿದೆ.
198 ವಾರ್ಡ್‍ಗಳಲ್ಲಿ ಫಿಜಿಕಲ್ ಟ್ರಯಾಜಿಂಗ್ ನಡೆಸಲು ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದ್ದು, ಇದಕ್ಕಾಗಿ ಪ್ರತ್ಯೇಕ ತಂಡ ರಚಿಸಿದೆ. ಕೊರೊನಾ ಎರಡನೆ ಅಲೆ ತೀವ್ರತೆ ಸಂದರ್ಭದಲ್ಲಿ ಟ್ರಯಾಜಿಂಗ್ ಆರಂಭ ಮಾಡಲಾಗಿತ್ತು. ಆದರೆ, ಅಲೆಯ ತೀವ್ರತೆ ಕಡಿಮೆಯಾದಾಗ ಟ್ರಯಾಜಿನ್ ಸ್ಥಗಿತಗೊಂಡಿತ್ತು. ಈಗ ನಗರದಲ್ಲಿ ಕೇಸ್‍ಗಳು ಹೆಚ್ಚಾದ ಹಿನ್ನೆಲೆಯಲ್ಲಿ ಫಿಜಿಕಲ್ ಟ್ರಯಾಜಿನ್ ಮಾಡಲು ಆರಂಭಿಸಿದೆ.
ದಿನನಿತ್ಯ ಮೂರು ಸಾವಿರಕ್ಕೂ ಹೆಚ್ಚು ಜನರಿಗೆ ತಪಾಸಣೆ ಮಾಡುವ ಗುರಿ ಹೊಂದಲಾಗಿದೆ. ಈ ಟ್ರಯಾಜಿಂಗ್‍ನಲ್ಲಿ ರೋಗಿಗಳಿಗೆ ರೋಗ ಲಕ್ಷಣಗಳು ಹೆಚ್ಚಾಗಿ ಕಂಡುಬಂದರೆ ಆಸ್ಪತ್ರೆಗೆ ದಾಖಲು ಮಾಡಲಾಗುವುದು ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
