ಬೆಂಗಳೂರು,ಸೆ.25- ಮಹಾಲಯ ಅಮಾವಾಸ್ಯೆ ಹಿನ್ನಲೆಯಲ್ಲಿ ಇಂದು ರಾಜ್ಯಾದ್ಯಂತ ಪಿತೃಪಕ್ಷವನ್ನು ಆಚರಿಸಲಾಗುತ್ತಿದೆ. ಶ್ರೀರಂಗಪಟ್ಟದ ಕಾವೇರಿ ತಟದಲ್ಲಿ ಪಿಂಡ ತರ್ಪಣಕ್ಕಾಗಿ ಜನಜಾತ್ರೆಯೇ ನೆರೆದಿತ್ತು.
ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ ಸ್ಥಾನಘಟ್ಟ ಗೋಸಾಯಿ ಘಾಟ್ ಹಾಗೂ ಸಂಗಮದಲ್ಲಿ ಪಿತೃ ತರ್ಪಣ ಮಾಡಲಾಗುತ್ತಿದ್ದು, ಅಗಲಿದ ಕುಟುಂಬಸ್ಥರಿಗೆ ಪೂಜೆ, ತರ್ಪಣ ಬಿಟ್ಟು ಧಾರ್ಮಿಕ ಕ್ರಿಯಾ ಕೈಂಕರ್ಯಗಳನ್ನು ಮಾಡಲಾಗುತ್ತದೆ.
ಜೊತೆಗೆ ಭಾನುವಾರವೇ ಮಹಾಲಯ ಅಮಾವಾಸ್ಯೆ ಬಂದಿರುವುದರಿಂದ ಸಾವಿರಾರು ಜನರು ಆಗಮಿಸಿ ತಮ್ಮ ಪೂರ್ವಿಕರಿಗೆ ನದಿಯ ತಟದಲ್ಲಿ ತರ್ಪಣ ಮಾಡಿದ್ದಾರೆ.
ಪಿತೃಪಕ್ಷದ ಆಚರಣೆಯಿಂದ ನಮ್ಮನಗಲಿದ ಪೂರ್ವಜರ ಆತ್ಮಗಳಿಗೆ ಸ್ವರ್ಗ ಪ್ರಾಪ್ತಿ ಹಾಗೂ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂಬ ನಂಬಿಕೆಯಿಂದ ಈ ಸಂಪ್ರದಾಯವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಕೆಲವರು ತಮ್ಮ ತಮ್ಮ ಮನೆಗಳಲ್ಲೇ ಅಗಲಿದವರ ಭಾವಚಿತ್ರಗಳನ್ನು ಇಟ್ಟು, ಅವರಿಗೆ ಇಷ್ಟವಾದ ಆಹಾರ, ಪದಾರ್ಥಗಳನ್ನಿಟ್ಟು ಪೂಜೆ ಸಲ್ಲಿಸಿ ಧೂಪ ಹಾಕಿದರೆ, ಇನ್ನು ಕೆಲವರು ನದಿ ದಡದಲ್ಲಿ ಪೂಜೆ ಸಲ್ಲಿಸಿ ಪಿಂಡ ತರ್ಪಣ ಮಾಡಿದ್ದಾರೆ.
ಬೆಂಗಳೂರಿನ ಜಯನಗರದ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸಾಮೂಹಿಕ ಪಿಂಡ ಪ್ರದಾನ ಕಾರ್ಯಕ್ರಮ ನಡೆಸಲಾಗಿದೆ.