ನೇಪಾಳದ ಲುಂಬಿನಿಯಲ್ಲಿ ಪ್ರಧಾನಿ ಮೋದಿ

ಲುಂಬಿನಿ (ನೇಪಾಳ), ಮೇ 16- ಗೌತಮ ಬುದ್ಧನ ಜನ್ಮಸ್ಥಳವಾದ ಲುಂಬಿನಿಗೆ ಸಂಕ್ಷಿಪ್ತ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ನೇಪಾಳಕ್ಕೆ ಆಗಮಿಸಿದ್ದಾರೆ. ಜಲವಿದ್ಯುತ್, ಅಭಿವೃದ್ಧಿ ಮತ್ತು ಸಂಪರ್ಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸುವ ಸಲುವಾಗಿ ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರೊಂದಿಗೆ ಸಮಗ್ರ ಮಾತುಕತೆ ನಡೆಸಿದರು.

ಬುದ್ಧ ಪೂರ್ಣಿಮೆಯ ವಿಶೇಷ ಸಂದರ್ಭದಲ್ಲಿ ನೇಪಾಳದ ಜನರಲ್ಲಿ ಸೇರಲು ಸಂತೋಷವಾಗಿದೆ. ಲುಂಬಿನಿಯಲ್ಲಿನ ಕಾರ್ಯಕ್ರಮಗಳನ್ನು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಟ್ವಿಟರ್‍ನಲ್ಲಿ ತಿಳಿಸಿದ್ದಾರೆ. ದೇವುಬಾ ಅವರ ಆಹ್ವಾನದ ಮೇರೆಗೆ ಹಿಮಾಲಯ ರಾಷ್ಟ್ರದಲ್ಲಿರುವ ಮೋದಿ, ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ ಲುಂಬಿನಿಗೆ ಒಂದು ದಿನದ ಭೇಟಿಗಾಗಿ ಆಗಮಿಸಿದ್ದಾರೆ. 2014 ರಿಂದ ನೇಪಾಳಕ್ಕೆ ಪ್ರಧಾನಿಯವರ ಐದನೇ ಭೇಟಿ ಇದಾಗಿದೆ.

ಉತ್ತರ ಪ್ರದೇಶದ ಕುಶಿನಗರದಿಂದ ಭಾರತೀಯ ವಾಯುಪಡೆಯ ವಿಶೇಷ ಹೆಲಿಕಾಪ್ಟರ್‍ನಲ್ಲಿ ಮೋದಿ ಮತ್ತು ಅವರ ಪರಿವಾರದವರು ಇಲ್ಲಿಗೆ ಆಗಮಿಸಿದೆ. ನೇಪಾಳದ ದಕ್ಷಿಣಭಾಗ ತೇರೈ ಬಯಲು ಪ್ರದೇಶದಲ್ಲಿ ಲುಂಬಿನಿ ನೆಲೆಗೊಂಡಿದೆ. ಭಗವಾನ್ ಬುದ್ಧನು ಅಲ್ಲಿ ಜನಿಸಿದನು ಎಂಬ ಕಾರಣಕ್ಕೆ ಬೌದ್ಧ ಧರ್ಮದ ಪವಿತ್ರ ಸ್ಥಳಗಳಲ್ಲಿ ಲುಂಬಿನಿ ಒಂದಾಗಿದೆ.

ಮೋದಿ ತಮ್ಮ ಭೇಟಿಯ ಸಂದರ್ಭದಲ್ಲಿ ಪವಿತ್ರ ಮಾಯಾದೇವಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಜೊತೆಗೆ ಲುಂಬಿನಿ ಅಭಿವೃದ್ಧಿ ಟ್ರಸ್ಟ್ ಆಯೋಜಿಸಿರುವ ಬುದ್ಧ ಜಯಂತಿಯಲ್ಲಿ ಭಾಷಣ ಮಾಡಲಿದ್ದಾರೆ. ಲುಂಬಿನಿ ಮೊನಾಸ್ಟಿಕ್ ವಲಯದಲ್ಲಿ ಬೌದ್ಧ ಸಂಸ್ಕøತಿ ಮತ್ತು ಪರಂಪರೆಯ ಕೇಂದ್ರ ನಿರ್ಮಾಣಕ್ಕೆ ಶಂಕುಸ್ಥಾಪನೆ ಸಮಾರಂಭದಲ್ಲಿ ಮೋದಿ ಭಾಗವಹಿಸಲಿದ್ದಾರೆ.

ನಂತರ ಪ್ರಧಾನಿ ಮೋದಿ ಮತ್ತು ನೇಪಾಳದ ಪ್ರಧಾನಿ ದೇವುಬಾ ಲುಂಬಿನಿಯಲ್ಲಿ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ನೇಪಾಳ-ಭಾರತ ಸಹಕಾರ ಮತ್ತು ಪರಸ್ಪರ ಹಿತಾಸಕ್ತಿಗಳ ವಿಷಯಗಳ ಬಗ್ಗೆ ಪರಸ್ಪರ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ ಎಂದು ನೇಪಾಳದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೊರಡಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.

ಜಲವಿದ್ಯುತ್, ಅಭಿವೃದ್ಧಿ ಮತ್ತು ಸಂಪರ್ಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸಲು ಉಭಯ ದೇಶಗಳು ಆಸಕ್ತಿ ಹೊಂದಿವೆ. ನೇಪಾಳದೊಂದಿಗಿನ ನಮ್ಮ ಸಂಬಂಧ ಸಾಟಿಯಿಲ್ಲದ್ದು, ಭಾರತ ಮತ್ತು ನೇಪಾಳದ ನಡುವಿನ ನಾಗರಿಕತೆ ಮತ್ತು ಜನರ ನಡುವಿನ ಸಂಪರ್ಕಗಳು ಶಾಶ್ವತ ಕಟ್ಟಡವಾಗಿವೆ ಎಂದು ವ್ಯಾಖ್ಯಾನಿಸಲಾಗಿದೆ.

ವಿದೇಶಾಂಗ ಸಚಿವ ಎಸ್ ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ ಕ್ವಾತ್ರಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಇತರ ಹಿರಿಯ ಅಧಿಕಾರಿಗಳು ಪ್ರಧಾನಿಯವರ ಪರಿವಾರದಲ್ಲಿದ್ದಾರೆ.

ಸಿಕ್ಕಿಂ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ಸೇರಿದಂತೆ ಭಾರತೀಯ ಐದು ರಾಜ್ಯಗಳೊಂದಿಗೆ ನೇಪಾಳ 1,850 ಕಿಮೀ ಗಡಿಯನ್ನು ಹಂಚಿಕೊಂಡಿದೆ. ಸರಕು ಮತ್ತು ಸೇವೆಗಳ ಸಾಗಣೆಗಾಗಿ ನೇಪಾಳವು ಭಾರತವನ್ನು ಹೆಚ್ಚು ಅವಲಂಬಿಸಿದೆ.