ಗುಜರಾತ್, ಮಹಾರಾಷ್ಟ್ರ ಸಂಸ್ಥಾಪನಾ ದಿನ, ಶುಭಾಷಯ ಕೋರಿದ ಪ್ರಧಾನಿ

ನವದೆಹಲಿ, ಮೇ 1- ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಂಸ್ಥಾಪನಾ ದಿನದಂದು ಶುಭಾಷಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯಗಳ ಅಭಿವೃದ್ಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸ್ಮರಿಸಿಕೊಂಡಿದ್ದಾರೆ. ಬಾಂಬೆ ಮರುಸಂಘಟನೆ ಕಾಯಿದೆ 1960 ಜಾರಿಯಾದ ನಂತರ ಮಹಾರಾಷ್ಟ್ರ ಮತ್ತು ಗುಜರಾತ್ ರಚನೆಯಾಯಿತು.

ಗುಜರಾತ್ ಸಂಸ್ಥಾಪನಾ ದಿನದಂದು ಗುಜರಾತ್ ಜನತೆಗೆ ನನ್ನ ಶುಭಾಶಯಗಳು. ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್‍ರಂತಹ ಹಲವು ಶ್ರೇಷ್ಠರ ಆದರ್ಶಗಳಿಂದ ಪ್ರೇರಿತರಾಗಿ, ಗುಜರಾತ್ ಜನರು ತಮ್ಮ ವೈವಿಧ್ಯಮಯ ಸಾಧನೆಗಳಿಗಾಗಿ ವ್ಯಾಪಕವಾಗಿ ಮೆಚ್ಚುಗೆ ಪಡೆದಿದ್ದಾರೆ ಎಂದು ತಮ್ಮ ತವರೂರ ಬಗ್ಗೆ ಮೋದಿ ಹೆಮ್ಮೆಯ ಟ್ವೀಟ್ ಮಾಡಿದ್ಧಾರೆ.ಮುಂಬರುವ ವರ್ಷಗಳಲ್ಲಿ ಗುಜರಾತ್ ಪ್ರಗತಿಯತ್ತ ಸಾಗಲಿ ಎಂದು ಹಾರೈಸಿದ್ದಾರೆ.

ಮತ್ತೊಂದು ಟ್ವೀಟ್‍ನಲ್ಲಿ ಮಹಾರಾಷ್ಟ್ರದ ಜನರಿಗೂ ಶುಭಾಶಯ ತಿಳಿಸಿದ್ದು, ರಾಷ್ಟ್ರದ ಪ್ರಗತಿಗೆ ಮಹರಾಷ್ಟ್ರ ಅದ್ಭುತ ಕೊಡುಗೆಗಳನ್ನು ನೀಡಿದೆ. ರಾಜ್ಯದ ಜನರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಮಹಾರಾಷ್ಟ್ರದ ಜನರ ಏಳಿಗೆಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.