ಮುಂದಿನ 5 ವರ್ಷಗಳ ಕ್ರಿಯಾ ಯೋಜನೆ : ಮಂತ್ರಿಪರಿಷತ್ ಸಭೆಯಲ್ಲಿ ಪ್ರಧಾನಿ ಮಹತ್ವದ ಚರ್ಚೆ

ನವದೆಹಲಿ, ಜ.5- ಮುಂದಿನ ಐದು ವರ್ಷಗಳಲ್ಲಿ ಸರ್ಕಾರದ ವಿವಿಧ ಸಚಿವಾಲಯಗಳಿಗೆ ಕ್ರಿಯಾ ಯೋಜನೆ ನಿಗದಿಗೊಳಿಸುವ ಪ್ರಕ್ರಿಯೆಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ನಿನ್ನೆ ರಾತ್ರಿ ಮಂತ್ರಿ ಪರಿಷತ್ ಸಭೆಯಲ್ಲಿ ಮಹತ್ವದ ಸಮಾಲೋಚನೆ ನಡೆಸಿದರು.

ಅಲ್ಲದೇ ವಿವಿಧ ವಲಯಗಳ ಪ್ರಗತಿ ಪರಾಮರ್ಶೆ ನಡೆಸಿದ ಮೋದಿ, ಅನುಷ್ಠಾನಕ್ಕೆ ಬಾಕಿ ಇರುವ ಅಭಿವೃದ್ದಿ ಯೋಜನೆಗಳನ್ನು ಕ್ಷಿಪ್ರವಾಗಿ ಕಾರ್ಯಗತಗೊಳಿಸುವಂತೆ ಸಂಬಂಧಪಟ್ಟ ಸಚಿವಾಲಯಗಳು, ಸಚಿವರು ಮತ್ತು ಆಯಾ ಇಲಾಖೆಗಳ ಉನ್ನತಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಡಿಸೆಂಬರ್ 21ರಿಂದ ಇದು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಮೂರನೇ ಮಂತ್ರಿ ಪರಿಷತ್ ಸಭೆಯಾಗಿದೆ.

ವಿದ್ಯುನ್ಮಾನ ಆಡಳಿತ (ಇ-ಗೌರ್ನೆನ್ಸ್), ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಂಪನ್ಮೂಲಗಳಂಥ ವಿವಿಧ ವಲಯಗಳಿಗೆ ಸಂಬಂಧಿಸಿದಂತೆ ಪ್ರಗತಿ, ಅನುಷ್ಠಾನಗೊಳ್ಳಬೇಕಿರುವ ಯೋಜನೆಗಳು ಮತ್ತು ಬಾಕಿ ಇರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದ ಮೋದಿ ಕೆಲವು ಸೂಚನೆ ಮತ್ತು ಮಾರ್ಗದರ್ಶನಗಳನ್ನು ನೀಡಿದರೆಂದು ಉನ್ನತ ಮೂಲಗಳು ತಿಳಿಸಿವೆ.

ಸಚಿವಾಲಯಗಳ ವಿವಿಧ ಸಮಿತಿಗಳಿಂದ ನೀಡಲಾದ ವರದಿಗಳ ಕುರಿತು ಮಂತ್ರಿ ಪರಿಷತ್ ಸಭೆಯಲ್ಲಿ ಸ್ವೀಕರಿಸಲಾದ ಮಾಹಿತಿಗಳು ಮತ್ತು ಕೆಲವೊಂದು ಸಲಹೆಗಳ ಆಧಾರದ ಮೇಲೆ ಕೇಂದ್ರ ಸರ್ಕಾರವು ಮುಂದಿನ ಐದು ವರ್ಷಗಳಿಗೆ ವಿವಿಧ ಸಚಿವಾಲಯಗಳಿಗೆ ನಿಗದಿಗೊಳಿಸಬೇಕಾದ ಕ್ರಿಯಾ ಯೋಜನೆಯನ್ನು ಅಂತಿಮಗೊಳಿಸಲಿದೆ.

ಕೃಷಿ, ಆರೋಗ್ಯ, ಕೈಗಾರಿಕೆ, ಆಡಳಿತ, ವಿಜ್ಞಾನ ಮತ್ತು ತಂತ್ರಜ್ಞಾನ ಇತ್ಯಾದಿ ವಲಯಗಳ ಮತ್ತಷ್ಟು ಅಭಿವೃದ್ದಿ ಹಾಗೂ ನೀತಿಗಳ ತ್ವರಿತ ಮತ್ತು ಉತ್ತಮ ಅನುಷ್ಠಾನಕ್ಕಾಗಿ ಮೋದಿ ನೇತೃತ್ವದ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ.

ಕ್ರಿಯಾ ಯೋಜನೆಯಿಂದ ಹೆಚ್ಚು ಕ್ರಮಬದ್ಧ ರೀತಿಯಲ್ಲಿ ಆಡಳಿತ ಮತ್ತು ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಲು ನೆರವಾಗಲಿದೆ ಹಾಗೂ ಬೇರುಮಟ್ಟಕ್ಕೆ ವಿವಿಧ ಇಲಾಖೆಗಳ ಫಲಾನುಭವಿಗಳನ್ನು ಕೊಂಡೊಯ್ಯಲು ಸಹಕಾರಿಯಾಗಲಿದೆ.  ಮುಂದಿನ ವಾರಗಳಲ್ಲಿ ಸಂಪೂರ್ಣ ಪರಾಮರ್ಶೆ ನಡೆಸಲು ಮತ್ತೊಂದು ಮಹತ್ವದ ಮಂತ್ರಿ ಪರಿಷತ್ ಸಭೆ ನಡೆಯಲಿದೆ.

ಪ್ರತಿ ತಿಂಗಳ ಸಂಪುಟ ಸಭೆ/ಮಂತ್ರಿಮಂಡಲ ಸಭೆ ನಂತರ ಸಾಮಾನ್ಯವಾಗಿ ಮಂತ್ರಿ ಪರಿಷತ್ ಸಭೆ ನಡೆಯುತ್ತದೆ. ಆದರೆ ಕಳೆದ ಮೂರು ಸಂದರ್ಭಗಳಲ್ಲಿ ಪ್ರತ್ಯೇಕವಾಗಿ ಈ ಸಭೆಗಳು ನಡೆದಿವೆ.