ನವದೆಹಲಿ,ಆ.15- ಜೈವಾನ್, ಜೈಕಿಸಾನ್ ಜೊತೆ ಜೈ ಅನುಸಂಧಾನ್ ಮಂತ್ರ ಪಠಿಸಿದ ಪ್ರಧಾನಿ ನರೇಂದ್ರಮೋದಿ ಅವರು, ಸಂಶೋಧನೆಗೆ ಆದ್ಯತೆ ನೀಡುವ ಮೂಲಕ ಭವಿಷ್ಯದ ದಿನಗಳಲ್ಲಿ ಭಾರತ ಜಾಗತಿಕ ತಂತ್ರಜ್ಞಾನದ ಅಧಿಪತ್ಯ ವಹಿಸಲು ನಾಂದಿಯಾಡಿದ್ದಾರೆ.
ದೆಹಲಿಯ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಪಂಚಸೂತ್ರಗಳನ್ನು ಪ್ರತಿಪಾದಿಸಿದರು. ಸರ್ಕಾರ ವಿದ್ಯುತ್ ಪೂರೈಸುತ್ತದೆ. ಜನ ವಿದ್ಯುತ್ ಉಳಿತಾಯದ ಜವಾಬ್ದಾರಿಯನ್ನು ನಿಭಾಯಿಸಬೇಕು. ರೈತರ ಕೃಷಿಗೆ ನೀರು ಒದಗಿಸುತ್ತದೆ, ನೀರಿನ ಮಿತವ್ಯಯದ ಜವಾಬ್ದಾರಿಯನ್ನು ನಿಭಾಯಿಸುತ್ತದೆ. ಜನಸಾಮಾನ್ಯರು, ಜನಪ್ರತಿನಿಧಿಗಳು ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು ಎಂದರು.
ರಾಸಾಯನಿಕ ನೈಸರ್ಗಿಕ ಕೃಷಿ ಆತ್ಮ ನಿರ್ಭರ ಭಾರತ ಸಾಕಾರಕ್ಕೆ ಪೂರಕವಾಗಿವೆ. ಸ್ವಾವಲಂಬನೆಯ ಜಾಗೃತಿ ಇಂದು ಹೆಚ್ಚುತ್ತಿದೆ.5-6 ವರ್ಷದ ಮಗುವಿನ ನರನಾಡಿನಲ್ಲೂ ಸ್ವದೇಶಿ ಭಾವನೆ ಹರಿಯುತ್ತಿದೆ. ವಿದೇಶಿ ಆಟಿಕೆಗಳನ್ನು ನಾನು ಬಳುಸುವುದಿಲ್ಲ ಎಂದು ಮಕ್ಕಳು ಹೇಳುತ್ತಿವೆ.
ಆತ್ಮ ನಿರ್ಭರ ಭಾರತ ಸರ್ಕಾರದ ಕಾರ್ಯಕ್ರಮವಲ್ಲ. ಅದು ಜನಾಂದೋಲನ. ಸೂಕ್ಷ್ಮ, ಸಣ್ಣ, ಕೈಗಾರಿಕೆಗಳು, ಆತ್ಮನಿರ್ಭರ ಭಾರತದ ಭಾಗವಾಗಿದ್ದಾರೆ. ಖಾಸಗಿ ಸಂಸ್ಥೆಗಳು ಈ ನಿಟ್ಟಿನಲ್ಲಿ ತಮ್ಮನ್ನು ಹೆಚ್ಚಾಗಿತೊಡಗಿಸಿಕೊಳ್ಳಬೇಕು ಎಂದರು.
ಸ್ವದೇಶಿ ಸ್ವಾವಲಂಬನೆ ಬಗ್ಗೆ ತಾವು ಪ್ರಸ್ತಾಪ ಮಾಡಿದ್ದಕ್ಕೆ ಪೂರಕವಾಗಿ ಸೇನೆ ಮಹತ್ವದ ಪ್ರತಿಕ್ರಿಯೆ ವ್ಯಕ್ತಪಡಿಸಿದೆ. ತನಗೆ ಬೇಕಾದ ಆಯುಧ, ಶಸ್ತ್ರಾಸ್ತ್ರಗಳನ್ನುಇಲ್ಲಿಯೇ ಉತ್ಪಾದಿಸಲಾಗುತ್ತಿದೆ.
ಇದು ದೇಶದ ಮುನ್ನುಡಿಯಾಗಿದೆ. ಮೊದಲ ಬಾರಿಗೆ ಕೆಂಪುಕೋಟೆಯಲ್ಲಿ ದೇಶೀಯ ಉತ್ಪಾದನೆಯ ಬಂದೂಕುಗಳನ್ನು ಬಳಸಿ ಗನ್‍ಸಲ್ಯೂಟ್ ನೀಡಲಾಗಿದೆ ಎಂದರು. ಭಾರತ ಇಂದು ಉತ್ಪಾದನೆಯ ತಾಣವಾಗುತ್ತಿದೆ. ಎಲೆಕ್ಟ್ರಾನಿಕ್ಸ್ , ಮೊಬೈಲ್ ಉತ್ಪಾದನೆಯಲ್ಲಿ ವೇಗ ಪಡೆದುಕೊಂಡಿದೆ. ದೇಶೀಯ ಬ್ರಹ್ಮೋಸ್ ಕ್ಷಿಪಣಿ ವಿಶ್ವದ ಗಮನಸೆಳೆದಿದೆ ಎಂದರು.
ವಂದೇ ಭಾರತ್ ಮತ್ತು ಮೆಟ್ರೋ ರೈಲುಗಳು ಸರಕು ಸಾಗಾಣಿಕೆಯ ಅಮೃತ್‍ಕಾಲ್‍ನಲ್ಲಿ ಮುಂಚೂಣಿಯಲ್ಲಿವೆ. ಹಸಿರು ಇಂಧನ, ಹೈಡ್ರೋಜನಿಕ್ ಶಕ್ತಿ, ಎಲೆಕ್ಟ್ರಿಕಲ್ ವಾಹನ, ಎಲ್ಲದರಲ್ಲೂ ಸ್ವಾವಲಂಬಿಗಳಾಗುತ್ತಿದ್ದೇವೆ. ಬಾಹ್ಯಾಕಾಶದಲ್ಲಿ ಹೊಸ ಅವಕಾಶಗಳು ತೆರೆದುಕೊಂಡಿವೆ. ಲಾಲ್ ಬಹುದ್ದೂರ್ ಶಾಸ್ತ್ರಿಯವರು ಜೈಜವಾನ್ ಜೈಕಿಸಾನ್ ಘೋಷಣೆ ನೀಡಿದರು. ತಾವು ಈ ಎರಡು ಘೋಷಣೆಗಳೊಂದಿಗೆ ಜೈ ಅನುಸಂಧಾನ್ (ಸಂಶೋಧನೆ) ಎಂಬುದನ್ನು ಸೇರಿಸುವುದಾಗಿ ಹೇಳಿದರು.
ಡಿಜಿಟಲ್ ಕ್ರಾಂತಿಯಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಜಾಗತಿಕವಾಗಿ ತಂತ್ರಜ್ಞಾನದ ನಾಯಕತ್ವ ವಹಿಸಲಿದೆ. ಸ್ವದೇಶಿ ನಿರ್ಮಿತ ಯುಪಿಐ ನಗದು ಪಾವತಿ ವ್ಯವಸ್ಥೆ ಇಂದು ಜಗತ್ತಿನಲ್ಲಿ ಡಿಜಿಟಲ್ ಪಾವತಿ ವ್ಯವಹಾರದಲ್ಲಿ ಶೇ.40ರಷ್ಟು ಪಾಲು ಪಡೆದಿದೆ ಎಂದು ತಿಳಿಸಿದರು.
ನಾವು 5ಜಿ ತಂತ್ರಜ್ಞಾನದತ್ತ ಹೆಜ್ಜೆ ಇಟ್ಟಿದ್ದೇವೆ. ಹಳ್ಳಿ ಹಳ್ಳಿಗೂ ಆಪ್ಟಿಕಲ್ ಫೈಬರ್ ಮೂಲಕ ಡಿಜಿಟಲ್ ಕ್ರಾಂತಿಯಾಗುತ್ತಿದೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ 4 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳು ಕೆಲಸ ಮಾಡುತ್ತಿವೆ. ಯುವ ಸಮುದಾಯ ಡಿಜಿಟಲ್‍ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ ಎಂದರು.
ಡಿಜಿಟಲ್ ಇಂಡಿಯಾ ಇಂದು ವ್ಯಾಪಕ ಬದಲಾವಣೆಗೆ ಕಾರಣವಾಗಿದ್ದು, ಶಿಕ್ಷಣ, ಆರೋಗ್ಯ, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಬೆಳವಣಿಗೆಗಳಾಗಿವೆ ಎಂದು ಹೇಳೀದರು.