ನವದೆಹಲಿ, ಫೆ.26- ಗ್ರಾಮೀಣ ಭಾಗದಲ್ಲೂ ನಿರ್ಣಾಯಕ ಆರೋಗ್ಯ ಸೇವೆಗಳು ಲಭ್ಯವಾಗಿಸುವುದು ಮತ್ತು ಆಯುಷ್ ಚಿಕಿತ್ಸಾ ಪದ್ಧತಿಯನ್ನು ಮತ್ತಷ್ಟು ವಿಸ್ತರಿಸುವ ಸಂಕಲ್ಪ ಹೊಂದಿರುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ಬಜೆಟ್ ನಂತರದಲ್ಲಿನ ಸರಣಿ ವೆಬಿನಾರ್ ಸಮಾವೇಶದಲ್ಲಿ ಇಂದು ಆರೋಗ್ಯ ಕ್ಷೇತ್ರದ ಚರ್ಚೆಗೆ ಚಾಲನೆ ನೀಡಿದ ಅವರು, ಭಾರತ ಜಾಗತಿಕವಾಗಿ ಆರೋಗ್ಯ ಸೇವೆಯಲ್ಲಿ ಪ್ರಧಾನ್ಯವಾಗಿ ಗುರುತಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಈ ಬಜೆಟ್ ಕಳೆದ 7 ವರ್ಷಗಳಲ್ಲಿ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಪರಿವರ್ತಿಸಲು ನಮ್ಮ ಪ್ರಯತ್ನಗಳನ್ನು ವಿಸ್ತರಿಸುತ್ತದೆ. ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿ ನಾವು ಸಮಗ್ರ ವಿಧಾನವನ್ನು ಅಳವಡಿಸಿಕೊಂಡಿದ್ದೇವೆ. ಇಂದು ನಮ್ಮ ಗಮನ ಆರೋಗ್ಯದ ಮೇಲೆ ಮಾತ್ರವಲ್ಲ, ಕ್ಷೇಮದ ಮೇಲೆಯೂ ಇದೆ.
ನಾವು ಆರೋಗ್ಯ ಕ್ಷೇತ್ರದಲ್ಲಿ ಸಮಗ್ರ ಮತ್ತು ಒಳಗೊಳ್ಳುವಿಕೆಯ ಬಗ್ಗೆ ಮಾತನಾಡುವಾಗ, ಅದರಲ್ಲಿ ಮೂರು ಅಂಶಗಳನ್ನು ಪ್ರಸ್ತಾಪಿಸುತ್ತೇವೆ. ಮೊದಲನೆಯದು ಆಧುನಿಕ ವೈದ್ಯಕೀಯ ವಿಜ್ಞಾನಕ್ಕೆ ಸಂಬಂಸಿದ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲಗಳ ವಿಸ್ತರಣೆ, ಎರಡನೆಯದು ಆಯುಷ್‍ನಂತಹ ಸಾಂಪ್ರದಾಯಿಕ ಭಾರತೀಯ ವೈದ್ಯಕೀಯ ಪದ್ಧತಿಯಲ್ಲಿ ಸಂಶೋಧನೆಯ ಪ್ರಚಾರ ಮತ್ತು ಆರೋಗ್ಯ ವ್ಯವಸ್ಥೆಯಲ್ಲಿ ಅದರ ಸಕ್ರಿಯ ತೊಡಗಿಸಿಕೊಳ್ಳುವಿಕೆಗೆ.
ಮೂರನೆಯದು ಆಧುನಿಕ ಮತ್ತು ಭವಿಷ್ಯದ (ಫ್ಯೂಚರಿಸ್ಟಿಕ್) ತಂತ್ರಜ್ಞಾನದ ಮೂಲಕ ಪ್ರತಿಯೊಬ್ಬ ವ್ಯಕ್ತಿಗೆ, ದೇಶದ ಪ್ರತಿಯೊಂದು ಭಾಗಕ್ಕೂ ಉತ್ತಮ ಮತ್ತು ಕೈಗೆಟುಕುವ ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು ಎಂದಿದ್ದಾರೆ.
ನಿರ್ಣಾಯಕ ಆರೋಗ್ಯ ಸೌಲಭ್ಯಗಳು ಬ್ಲಾಕ್ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ, ಹಳ್ಳಿಗಳಲ್ಲಿ ಲಭ್ಯ ಇರಬೇಕು ಎಂಬುದು ನಮ್ಮ ಪ್ರಯತ್ನವಾಗಿದೆ. ಈ ಮೂಲಸೌಕರ್ಯವನ್ನು ಕಾಲಕಾಲಕ್ಕೆ ನಿರ್ವಹಿಸಬೇಕು ಮತ್ತು ನವೀಕರಿಸಬೇಕು. ಇದಕ್ಕಾಗಿ, ಖಾಸಗಿ ವಲಯ ಮತ್ತು ಇತರ ವಲಯಗಳು ಸಹ ಹೆಚ್ಚಿನ ಶಕ್ತಿಯೊಂದಿಗೆ ಮುಂದೆ ಬರಬೇಕು ಎಂದು ಕರೆ ನೀಡಿದ್ದಾರೆ.
ಪ್ರಾಥಮಿಕ ಆರೋಗ್ಯ ರಕ್ಷಣೆ ಜಾಲವನ್ನು ಬಲಪಡಿಸಲು, 1.5 ಲಕ್ಷ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ನಿರ್ಮಾಣವು ಚುರುಕಿನ ವೇಗದಲ್ಲಿ ಪ್ರಗತಿಯಲ್ಲಿದೆ. ಇಲ್ಲಿಯವರೆಗೆ 85 ಸಾವಿರಕ್ಕೂ ಹೆಚ್ಚು ಕೇಂದ್ರಗಳು ಸಾಮಾನ್ಯ ತಪಾಸಣೆ, ಲಸಿಕೆ ಮತ್ತು ಪರೀಕ್ಷೆಗಳ ಸೌಲಭ್ಯವನ್ನು ಒದಗಿಸುತ್ತಿವೆ. ಈ ಬಜೆಟ್‍ನಲ್ಲಿ ಅವರಿಗೆ ಮಾನಸಿಕ ಆರೋಗ್ಯ ಸೌಲಭ್ಯವನ್ನೂ ವಿಸ್ತರಿಸಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಆರೋಗ್ಯ ಸೇವೆಗಳ ಬೇಡಿಕೆ ಹೆಚ್ಚುತ್ತಿರುವ ಕಾರಣ, ನಾವು ಅದಕ್ಕೆ ಅನುಗುಣವಾಗಿ ನುರಿತ ಆರೋಗ್ಯ ವೃತ್ತಿಪರರನ್ನು ರಚಿಸಲು ಪ್ರಯತ್ನಿಸುತ್ತಿದ್ದೇವೆ. ಆದ್ದರಿಂದ, ಕಳೆದ ವರ್ಷಕ್ಕೆ ಹೋಲಿಸಿದರೆ ಆರೋಗ್ಯ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ ಬಜೆಟ್‍ನಲ್ಲಿ ದೊಡ್ಡ ಹೆಚ್ಚಳ ಮಾಡಲಾಗಿದೆ.
ಕೋವಿನ್ ನಂತಹ ವೇದಿಕೆಗಳ ಮೂಲಕ ಕರೋನಾ ಲಸಿಕೆ ಅಭಿಯಾನಕ್ಕೆ ನಮ್ಮ ಡಿಜಿಟಲ್ ತಂತ್ರಜ್ಞಾನದ ಬಲಿಷ್ಠತೆಯನ್ನು ಇಡೀ ಜಗತ್ತು ಗುರುತಿಸಿದೆ. ಆಯುಷ್ಮಾನ್ ಭಾರತ್, ಡಿಜಿಟಲ್ ಮಿಷನ್ ಗ್ರಾಹಕ ಮತ್ತು ಆರೋಗ್ಯ ಪೂರೈಕೆದಾರರ ನಡುವೆ ಸರಳ ಮಧ್ಯಸ್ಥಿಕೆಯನ್ನು ಒದಗಿಸುತ್ತದೆ. ಇದರೊಂದಿಗೆ, ದೇಶದಲ್ಲಿ ಚಿಕಿತ್ಸೆ ಪಡೆಯುವುದು ಮತ್ತು ನೀಡುವುದು ಎರಡೂ ತುಂಬಾ ಸುಲಭವಾಗುತ್ತದೆ. ಅಷ್ಟೇ ಅಲ್ಲ, ಭಾರತದ ಗುಣಮಟ್ಟ ಮತ್ತು ಕೈಗೆಟಕುವ ದರದ ಆರೋಗ್ಯ ವ್ಯವಸ್ಥೆಗೆ ಜಾಗತಿಕ ಮಾನ್ಯತೆ ಹೆಚ್ಚಾಗಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಜಗತ್ತು ಇಂದು ಆಯುಷ್ ಪಾತ್ರವನ್ನು ಒಪ್ಪಿಕೊಳ್ಳುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಏಕೈಕ ಜÁಗತಿಕ ಸಾಂಪ್ರದಾಯಿಕ ಔಷಧಿ ಕೇಂದ್ರವನ್ನು ಭಾರತದಲ್ಲಿ ಪ್ರಾರಂಭಿಸಲಿದೆ ಎಂಬುದು ನಮಗೆ ಹೆಮ್ಮೆಯ ವಿಷಯ ಎಂದರು.
