ನವದೆಹಲಿ,ಆ.7- ದೇಶದ ಅಭಿವೃದ್ಧಿಯ ನೀಲ ನಕ್ಷೆ ಹಾಗೂ ಸವಾಲಿನ ಸಂದರ್ಭಗಳನ್ನು ನಿಭಾಯಿಸುವ ಮಹತ್ವದ ಸಂಸ್ಥೆಯಾಗಿರುವ ನೀತಿ ಆಯೋಗದ 7ನೇ ಆಡಳಿತ ಸಭೆ ಇಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಕೇಂದ್ರ ಸಚಿವರಾದ ನಿತಿನ್‍ಗಡ್ಕರಿ, ರಾಜನಾಥ್‍ಸಿಂಗ್, ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಎಸ್.ಜೈಶಂಕರ್, ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿ, ಯೋಗಿ ಆದಿತ್ಯನಾಥ್, ಶಿವರಾಜಸಿಂಗ್ ಚವ್ಹಾಣ್, ಜಗನ್‍ಮೋಹನರೆಡ್ಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಬಿಹಾರದ ಮುಖ್ಯಮಂತ್ರಿ ನಿತೀಶ್‍ಕುಮಾರ್, ತೆಲಂಗಾಣದ ಸಿಎಂ ಚಂದ್ರಶೇಖರರಾವ್ ಗೈರು ಹಾಜರಾಗಿದ್ದರು. ಕೋವಿಡ್ ಕಾರಣದಿಂದಾಗಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿ ಪ್ರವಾಸ ರದ್ದುಗೊಂಡಿದ್ದು, ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಉಳಿದಂತೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು, ಲೆಫ್ಟಿನೆಂಟ್ ಜನರಲ್‍ಗಳು, ನೀತಿ ಆಯೋಗದ ಉಪಾಧ್ಯಕ್ಷರು, ಪೂರ್ಣಾವ ಸದಸ್ಯರು, ಕೇಂದ್ರ ಸಚಿವರಿಗೆ ಸಭೆಗೆ ಆಹ್ವಾನ ನೀಡಲಾಗಿತ್ತು.
2019ರ ಜುಲೈ ಬಳಿಕ ನಡೆಯುತ್ತಿರುವ ಮೊದಲ ಭೌತಿಕ ಸಭೆ ಇದಾಗಿದೆ. ಕೋವಿಡ್ ಕಾರಣದಿಂದಾಗಿ ನೀತಿ ಆಯೋಗದ ಆಡಳಿತ ಮಂಡಳಿ ಪೂರ್ಣ ಪ್ರಮಾಣದ ಸಭೆ ನಡೆಸಲು ಸಾಧ್ಯವಾಗಿರಲಿಲ್ಲ. ಇಂದಿನ ಸಭೆಯಲ್ಲಿ ಬೆಳೆ ವೈವಿದ್ಯತೆ, ತೈಲ ಬೀಜಗಳು ಹಾಗೂ ದ್ವಿದಳ ದಾನ್ಯಗಳ ಸ್ವಾವಲಂಬನೆ, ಕೃಷಿ ಉತ್ಪನಗಳ ಹೆಚ್ಚಳ, ಶಾಲೆ ಮತ್ತು ಉನ್ನತ ಶಿಕ್ಷಣದಲ್ಲಿ ನೂತನ ಶಿಕ್ಷಣ ನೀತಿ ಜಾರಿ, ನಗರಾಡಳಿತ ಸೇರಿದಂತೆ ಸಮಗ್ರ ಅಭಿವೃದ್ಧಿಯ ಚರ್ಚೆಗೆ ವಿಷಯ ನಿಗದಿ ಪಡಿಸಲಾಗಿತ್ತು.
ಆಜಾದಿ ಕಾ ಅಮೃತ ಮಹೋತ್ಸದ 75ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಭಾರತದ ಸುಸ್ಥಿರ ಅಭಿವೃದ್ಧಿಗೆ ಸಂಘಟನಾತ್ಮಕ ಪ್ರಯತ್ನ ಕೈಗೊಳ್ಳಲು ಚಿಂತಕರ ಛಾವಡಿ ಎಂದು ಗುರುತಿಸಲಾಗಿರುವ ನೀತಿ ಆಯೋಗ ನೀಲ ನಕ್ಷೆ ಸಿದ್ದಗೊಳಿಸಿವೆ.
ಅಭಿವೃದ್ಧಿಯ ವೇಗ ತೀವ್ರಗೊಳಿಸುವುದು, ಸಮಗ್ರ ಚಟುವಟಿಕೆ ಆಧಾರಿತ ಬೆಳವಣಿಗೆಯ ದರ ಇಂದಿನ ಸಭೆಯ ಪ್ರಮುಖ ಅಂಶಗಳಾಗಿದ್ದವು. ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ಮುಂಜಾಗ್ರತಾ ಕ್ರಮಗಳು ಮತ್ತು ಅನುಸರಿಸಿದ ಕಾರ್ಯತಂತ್ರಗಳ ಬಗ್ಗೆ ಎಲ್ಲಾ ರಾಜ್ಯಗಳ ಮುಖ್ಯಸ್ಥರಿಗೆ ಪ್ರಧಾನಿ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ.
ಭವಿಷ್ಯದಲ್ಲಿ ಎದುರಾಗುವ ಮಂಕಿಫಾಕ್ಸ್ ಸೇರಿದಂತೆ ಹೊಸ ಸವಾಲುಗಳನ್ನು ನಿಭಾಯಿಸುವ ಸಂಘಟನಾತ್ಮಕ ಪ್ರಯತ್ನಗಳ ಬಗ್ಗೆಯೂ ಚರ್ಚೆಯಾಗಿದೆ ಎಂದು ಮೂಲಗಳು ತಿಳಿಸಿವೆ. ನೀತಿ ಆಯೋಗದ ಸಭೆಯಲ್ಲಿ ಒಕ್ಕೂಟ ವ್ಯವಸ್ಥೆಯ ಸುಭದ್ರತೆ ಕುರಿತು ಸಲಹೆಗಳು ಕೇಳಿ ಬಂದಿವೆ.
ಮುಂದಿನ ವರ್ಷ ಭಾರತ ಜಿ20 ಪ್ರೆಸಿಡೆನ್ಸಿ ಮತ್ತು ಸಮ್ಮೇಳನ ಆಯೋಜಿಸಿದೆ. ಅದರಲ್ಲಿ ರಾಜ್ಯಗಳ ಪಾತ್ರ ಮಹತ್ವದ್ದಾಗಿದ್ದು, ಪ್ರಧಾನ ಮಂತ್ರಿಯವರು ಅದನ್ನು ಸಿಎಂಗೆ ವಿವರಿಸಿದ್ದಾರೆ ಎನ್ನಲಾಗಿದೆ.
ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು ಸಭೆಯನ್ನು ಭಹಿಷ್ಕರಿಸಿದ್ದು, ಕೇಂದ್ರ ಸರ್ಕಾರ ರಾಜ್ಯಗಳ ಅಭಿವೃದ್ಧಿಯಲ್ಲಿ ತಾರತಮ್ಯ ಅನುಸರಿಸುತ್ತಿದೆ. ಇದನ್ನು ವಿರೋಸಿ ಸಭೆಯಿಂದ ದೂರ ಉಳಿಯುತ್ತಿರುವುದಾಗಿ ತಿಳಿಸಿದ್ದಾರೆ. ಸಭೆಗೂ ಮುನ್ನ ಪ್ರಧಾನಮಂತ್ರಿ ಯವರು ಸಮಿತಿಯ ಸದಸ್ಯರೊಟ್ಟಿಗೆ ಟೀಮ್ ಇಂಡಿಯಾ ಎಂದು ಸಾಮೂಹಿಕ ಭಾವಚಿತ್ರಕ್ಕೆ ಫೋಸ್ ಕೊಟ್ಟರು.