ನವದೆಹಲಿ, ಮಾ.4- ಉಕ್ರೇನ್‍ನಲ್ಲಿರುವ ಭಾರತೀಯರ ಪರಿಸ್ಥಿತಿ ಮತ್ತು ಸ್ಥಳಾಂತರ ಕಾರ್ಯಚರಣೆ ಕುರಿತು ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಆಪರೇನ್ ಗಂಗಾ ಕಾರ್ಯಾಚರಣೆಯನ್ನು ಪೂರ್ಣಪ್ರಮಾಣದಲ್ಲಿ ಚುರುಕುಗೊಳಿಸುವಂತೆ ಸೂಚಿಸಿದ್ದಾರೆ.
ವಿದೇಶಾಂಗ ಸಚಿವ ಎಸ್.ಜೈಶಂಕರ್, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ವಿದೇಶಾಂಗ ಕಾರ್ಯದರ್ಶಿ ಹರ್ಷವಧನ್ ಶ್ರಿಂಗಾಲ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೇವೋಲ್ ಮತ್ತಿತರು ಉಪಸ್ಥಿತರಿದ್ದರು. ಪ್ರಧಾನಿಗಳು ಆಪರೇಷನ್ ಗಂಗಾ ಕಾರ್ಯಾಚರಣೆ ಪ್ರಗತಿ ಪರಿಶೀಲನೆಗೆ ಪದೇ ಪದೇ ಸಭೆಗಳನ್ನು ನಡೆಸುತ್ತಲೇ ಇದ್ದಾರೆ. ಸೋಮವಾರ ಎರಡು ಸಭೆಗಳು ನಡೆದಿದ್ದವು, ಭಾನುವಾರ ಸಭೆ ನಡೆದಿತ್ತು.
ಈ ನಡುವೆ ರೊಮಾನಿಯಾದ ಬುಚರೆಸ್ಟ್‍ನಿಂದ 219 ಮಂದಿಯನ್ನು ಕರೆ ತಂದ ಇಂಡಿಗೋ ವಿಮಾನ ಇಂದು ದೆಹಲಿಗೆ ಬಂದಿಳಿದಿದೆ. ಕೇಂದ್ರ ಕೃಷಿ ಸಚಿವ ಕೈಲಾಶ್ ಚೌದರಿ ವಿದ್ಯಾರ್ಥಿಗಳನ್ನು ಬರ ಮಾಡಿಕೊಂಡಿದ್ದಾರೆ.ಇದಕ್ಕೂ ಮೊದಲು ಮುಂಜಾನೆ ಬಂದಿಳಿದ ವಿಮಾನದಲ್ಲಿ 219 ಮಂದಿ ಆಗಮಿಸಿದ್ದು, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿಶಿತ್ ಪ್ರಮಾಣಿಕ್ ಬರಮಾಡಿಕೊಂಡರು.
ಜೊತೆಗೆ ಭಾರತೀಯ ವಾಯುಪಡೆಗೆ ಸೇರಿದ ಎರಡು ಸಿ-17 ಗೋಲ್ಡ್ ಮಾಸ್ಟರ್ ವಿಮಾನಗಳು ತಲಾ 210 ವಿದ್ಯಾರ್ಥಿಗಳನ್ನು ಬೂಚರೆಸ್ಟ್ ಮತ್ತು ಬುದಪೆಸ್ಟ್‍ನಿಂದ ಕರೆ ತಂದಿವೆ, ರಕ್ಷಣಾ ಇಲಾಖೆಯ ರಾಜ್ಯ ಸಚಿವ ಅಜಯ್ ಭಟ್ ಅವರನ್ನು ಸ್ವಾಗತಿಸಿದ್ದಾರೆ.
ವಾಯು ಸೇನೆಯ ಏಳು ವಿಮಾನಗಳು ಈವರೆಗೂ 1428 ಮಂದಿಯನ್ನು ಕರೆ ತಂದಿದ್ದು, 9.7 ಟನ್ ಪರಿಹಾರ ಸಾಮಗ್ರಿಗಳನ್ನು ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ ವಿದ್ಯಾರ್ಥಿಗಳಿಗೆ ತಲುಪಿಸಿವೆ ಎಂದು ಹೇಳಲಾಗಿದೆ.
ಆಪರೇಷನ್ ಗಂಗಾ ಯೋಜನೆ ಮತ್ತಷ್ಟು ಚುರುಕುಗೊಂಡಿದ್ದು, ನಿನ್ನೆಯವರೆಗೂ 30ಕ್ಕೂ ಹೆಚ್ಚು ಕಾರ್ಯಾಚರಣೆಯ ಮೂಲಕ ಆರು ಸಾವಿರಕ್ಕೂ ಹೆಚ್ಚು ಜನರನ್ನು ಯುದ್ಧ ಪೀಡಿತ ಪ್ರದೇಶಗಳಿಂದ ಸ್ಥಳಾಂತರಿಸಲಾಗಿದೆ.
