ನವದೆಹಲಿ, ಜ.24- ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ವಿಜೇತರೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಈ ಮಕ್ಕಳು ಇಡೀ ಸಮಾಜಕ್ಕೆ ಸ್ಫೂರ್ತಿ ಎಂದು ಹೇಳಿದ ಪ್ರಧಾನಿ ಅವರು, ದೇಶಕ್ಕೆ ಹೇಗೆ ಸಹಾಯ ಮಾಡಬಹುದು ಎಂಬುದನ್ನು ಗಮನದಲ್ಲಿಟ್ಟುಕೊಂಡು ನೀವೆಲ್ಲರೂ ಕೆಲಸ ಮಾಡಬೇಕು ಎಂದು ಹೇಳಿದರು.
ಪಾಂಡಿತ್ಯಪೂರ್ಣ ಸಾಧನೆಗಳು, ಕ್ರೀಡೆ, ಕಲೆ ಮತ್ತು ಸಂಸ್ಕೃತಿ, ಸಮಾಜ ಸೇವೆ ಮತ್ತು ಶೌರ್ಯ ಸೇರಿದಂತೆ ಆರು ಕ್ಷೇತ್ರದಲ್ಲಿ ಮಹತ್ವದನ್ನು ಸಾಧಿಸಿದ 14 ಹುಡುಗಿಯರು ಸೇರಿದಂತೆ 29 ಮಕ್ಕಳಿಗೆ ಬ್ಲಾಕ್ ಚೈನ್ ತಂತ್ರಜ್ಞಾನವನ್ನು ಬಳಸಿಕೊಂಡು ಡಿಜಿಟಲ್ ಪ್ರಮಾಣಪತ್ರಗಳನ್ನು ಪ್ರಧಾನಿ ಪ್ರದಾನ ಮಾಡಿದರು. ಪ್ರತಿ ಮಗುವಿಗೆ ಪದಕ, 1 ಲಕ್ಷ ರೂ. ನಗದು ಬಹುಮಾನ ಮತ್ತು ಪ್ರಮಾಣಪತ್ರವನ್ನು ನೀಡಲಾಗಿದೆ.
ಪ್ರಧಾನಮಂತ್ರಿಯವರು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಶುಭಾಶಯ ಕೋರಿದರು. ಕೋವಿಡ್ ಲಸಿಕೆ ಕಾರ್ಯಕ್ರಮದಲ್ಲಿ ಮಕ್ಕಳು ತಮ್ಮ ಆಧುನಿಕ, ವೈಜ್ಞಾನಿಕ ಚಿಂತನೆಯನ್ನು ತೋರಿಸಿದ್ದಾರೆ, ಜನವರಿ 3 ರಿಂದ ಈವರೆಗೆ ದೇಶದ 40 ದಶ ಲಕ್ಷಕ್ಕೂ ಹೆಚ್ಚು ಮಕ್ಕಳು ಲಸಿಕೆ ಪಡೆದಿದ್ದಾರೆ ಎಂದು ಹೇಳಿದರು.
ಬಾಲಪುರಸ್ಕಾರ್ ವಿಜೇತರು ತಮ್ಮ ಸ್ಥಳೀಯ ಮಟ್ಟದಲ್ಲಿ ವೋಕಲ್ ಫಾರ್ ಲೋಕಲ್ ಅಭಿಯಾನಕ್ಕೆ ಸಹಕರಿಸಬೇಕು. ಮನೆಯಲ್ಲಿ ಬಳಸುವ ವಿದೇಶಿ ಮೂಲದ ಉತ್ಪನ್ನಗಳನ್ನು ಪಟ್ಟಿ ಮಾಡಬೇಕು. ದೇಶಿಯ ಉತ್ಪನ್ನಗಳ ಬಳಕೆಗೆ ಬೆಂಬಲ ನೀಡಬೇಕು ಎಂದು ಹೇಳಿದರು.
ನೇತಾಜಿಯಿಂದ ಸ್ಪೂರ್ತಿ ಪಡೆದ ನಾವು ರಾಷ್ಟ್ರದ ಮೊದಲು ಎಂಬ ಸಿದ್ಧಾಂತವನ್ನು ಪಾಲನೆ ಮಾಡಬೇಕು. ದೇಶಕ್ಕಾಗಿ ಕೆಲಸ ಮಾಡುವ ಹಾದಿಯಲ್ಲಿ ಮುಂದುವರಿಯಬೇಕು. ಭಾರತದ ಯುವಕರು ಆವಿಷ್ಕಾರಗಳನ್ನು ಮಾಡುವುತ್ತಿರುವುದನ್ನು ಮತ್ತು ಆ ಮೂಲಕ ದೇಶವನ್ನು ಮುಂದಕ್ಕೆ ಕೊಂಡೊಯ್ಯುವುದನ್ನು ನೋಡಿದಾಗ ಹೆಮ್ಮೆ ಪಡಬೇಕಿದೆ. ನಮ್ಮ ಸರ್ಕಾರ ರೂಪಿಸುವ ಎಲ್ಲಾ ನೀತಿಗಳು ಯುವಜನತೆ ಕೇಂದ್ರವಾಗಿದೆ ಎಂದು ಹೇಳಿದರು.
