ಕೆಂಪುಕೋಟೆ ಮೇಲೆ ಪ್ರಧಾನಿ ಧ್ವಜಾರೋಹಣ, ಇಲ್ಲಿದೆ ಮೋದಿ ಭಾಷಣದ ಹೈಲೈಟ್ಸ್

Social Share

ನವದೆಹಲಿ, ಆ.15- ಭ್ರಷ್ಟಾಚಾರ, ಸ್ವಜನಪಕ್ಷಪಾತ ದೇಶದ ಶತ್ರುಗಳಾಗಿದ್ದು, ಇವುಗಳನ್ನು ತೊಡೆದು ಹಾಕಲು ಮಹತ್ವದ ಬದಲಾವಣೆಯೊಂದಿಗೆ ಹೋರಾಟಕ್ಕಿಳಿಯಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯ ಕೆಂಪುಕೋಟೆ ಮೇಲೆ ರಾಷ್ಟ್ರದ ಹೆಮ್ಮೆಯ ಸಂಕೇತವಾದ ತ್ರೀವರ್ಣ ಧ್ವಜಾರೋಹಣ ನೆರವೇರಿಸಿದ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಬಡತನದ ವಿರುದ್ಧ ಜಯ ಗಳಿಸಬೇಕಾದರೆ ನಾವು ಮೊದಲು ಸಮಸ್ಯೆಗಳನ್ನು ಹತ್ತಿಕ್ಕಬೇಕು ಎಂದರು.

ಆತ್ಮನಿರ್ಭರ ಭಾರತ, ನಾರಿ ಶಕ್ತಿ, ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿ, ಕಪ್ಪು ಹಣ, ಡಿಜಿಟಲ್ ಕ್ರಾಂತಿ, ಸ್ವಾವಲಂಬನೆ, ಕೋವಿಡ್ ಸೇರಿದಂತೆ ಹಲವು ವಿಷಯಗಳ ಕುರಿತು ಪ್ರಧಾನಿ ಸುದೀರ್ಘವಾಗಿ ಮಾತನಾಡಿದರು. ಇದೇ ಮೊದಲ ಬಾರಿಗೆ ಸ್ವಾತಂತ್ರ್ಯದ ಸಂಭ್ರಮದಲ್ಲಿ ಕೆಂಪುಕೋಟೆ ಬಳಿ ಪ್ರಧಾನಿ ಅವರಿಗೆ ಸಾಂಪ್ರದಾಯಿಕ ಗೌರವ ವಂದನೆಯ ಅಂಗವಾಗಿ ಗನ್‍ಸಲ್ಯೂಟ್ ನೀಡುವಾಗ ದೇಶಿ ನಿರ್ಮಿತ ಬಂದೂಕುಗಳನ್ನು ಬಳಸಲಾಗಿತ್ತು.

ತಮ್ಮ ಭಾಷಣದುದ್ದಕ್ಕೂ ದೇಶ ಭಕ್ತಿಯ ಪ್ರೇರಣಾ ಮಾತುಗಳನ್ನು ವೈಭವೀಕರಿಸಿದ ಅವರು, 2047ರ ವೇಳೆಗೆ ದೇಶದ ಸ್ವಾತಂತ್ರ್ಯ ಸಂಭಮ್ರದ ಶತಮಾನೋತ್ಸವದ ಸಿದ್ದಗೊಳ್ಳಬೇಕಾದ ಮಾರ್ಗಗಳ ಬಗ್ಗೆ ವಿವರಣೆ ನೀಡಿದರು.
ಪಂಚಸೂತ್ರಗಳನ್ನು ಅನುಸರಿಸಿ, ಅಮೃತ್‍ಕಾಲ್ ಸಂಕಲ್ಪದೊಂದಿಗೆ ದೇಶವನ್ನು ಮುಂದೆ ತೆಗೆದುಕೊಂಡು ಹೋಗಬೇಕು.

ದೇಶದ ಜನರು ತಮ್ಮ ಶಕ್ತಿಯನ್ನು ಐದು ಸೂತ್ರಗಳ ಮೇಲೆ ಕೇಂದ್ರಿಕರಿಸಬೇಕು. ದೇಶ ಮೊದಲು ಎಂಬ ಸಿದ್ಧಾಂತದೊಂದಿಗೆ ಪ್ರಗತಿಯತ್ತ ಹೆಜ್ಜೆ ಹಾಕಬೇಕು ಎಂದು ಕರೆ ನೀಡಿದರು. ಅಭಿವೃದ್ಧಿ ಭಾರತ, ಮನಸ್ಸಿನಲ್ಲಿರುವ ಬಂಧನದ ಕುರುಹುಗಳನ್ನು ತೆಗೆದು ಹಾಕುವುದು, ನಮ್ಮ ಶ್ರೀಮಂತ ಪರಂಪರೆ ಬಗ್ಗೆ ಹೆಮ್ಮೆ ಪಡುವುದು, ಒಗ್ಗಟ್ಟು ಮತ್ತು ನಮ್ಮ ಜವಾಬ್ದಾರಿಗಳನ್ನು ನಿಭಾಯಿಸುವುದು ದೇಶದ ಅಭಿವೃದ್ಧಿ ದೃಷ್ಟಿಯಿಂದ ಅತ್ಯಗತ್ಯ ಎಂದರು.

ಭಾರತದ 130 ಕೋಟಿ ಜನರ ಆಶೋತ್ತರಗಳನ್ನು ಈಡೇರಿಸಲು ಮತ್ತು ಬಡವರು, ಶೋಷಿತರನ್ನು ಮೇಲೆತ್ತಲು ತಮ್ಮ ಅಕಾರವಯನ್ನು ಮೀಸಲಿಟ್ಟಿದ್ದೇನೆ. ಇಂದು ಜಗತ್ತಿನ ಮುಂದೆ ಭಾರತ ಹೆಮ್ಮೆಯಿಂದ ತಲೆ ಎತ್ತಿ ನಿಂತಿದೆ. ಅದೇ ವೇಳೆ ಭಾರತದ ಪ್ರಗತಿಯ ವೇಗವನ್ನೂ ಜಗತ್ತು ಆಶೋತ್ತರಗಳಿಂದ ಗಮನಿಸುತ್ತಿದೆ. ಸ್ಥಿರ ಸರ್ಕಾರ, ಶೀಘ್ರ ನಿರ್ಧಾರ ತೆಗೆದುಕೊಳ್ಳುವುದು ಅಭಿವೃದ್ಧಿಗೆ ಕಾರಣವಾಗಿದೆ ಎಂದರು.

Articles You Might Like

Share This Article