ಕೋವಿಡ್ ಮೀಟಿಂಗ್ : ಸಿಎಂಗಳಿಗೆ ಪ್ರಧಾನಿ ಮೋದಿ ಕೊಟ್ಟ ಸೂಚನೆಗಳೇನು..?

ನವದೆಹಲಿ,ಏ.27- ದೇಶದಲ್ಲಿ ಕೊರೊನಾ ಅಲೆ ನಮ್ಮನ್ನು ಸಂಪೂಣವಾಗಿ ಬಿಟ್ಟು ಹೋಗಿಲ್ಲ. ನಮ್ಮಲ್ಲಿ ಪರಿಸ್ಥಿತಿ ಹದಗೆಟ್ಟಿಲ್ಲವಾದರೂ ನಿರ್ಲಕ್ಷ್ಯವಹಿಸದೆ ಕೆಲವು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಹಿಂದೆ ಅನುಸರಿಸಿದ್ದ ತ್ರಿ-ಟಿ (ಟೆಸ್ಟಿಂಗ್, ಟ್ರೇಸಿಂಗ್, ಟ್ರೀಟ್‍ಮೆಂಟ್) ತಂತ್ರವನ್ನು ಎಲ್ಲಾ ರಾಜ್ಯಗಳು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಕೋವಿಡ್ ಹೋಗಿದೆ ಎಂದು ಯಾರೂ ಭಾವಿಸಬೇಡಿ. ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮಲ್ಲಿ ಪರಿಸ್ಥಿತಿ ಉತ್ತಮವಾಗಿದೆ ಆದರೂ ನಿರ್ಲಕ್ಷ್ಯ ಬೇಡ ಎಂದು ಅವರು ಕಿವಿಮಾತು ಹೇಳಿದರು.

ಇಂದು ಕೋವಿಡ್ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನರೆನ್ಸ್ ನಡೆಸಿದ ಮೋದಿ ಅವರು, ಇತರೆ ದೇಶಗಳಿಗೆ ಹೋಲಿಸಿದರೆ ನಾವು ಸುರಕ್ಷಿತವಾಗಿದ್ದೇವೆ. ಈ ಹಿಂದೆ 1, 2 ಮತ್ತು 3ನೇ ಕೋವಿಡ್ ಅಲೆಯನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ. ಓಮಿಕ್ರಾನ್ ಎದುರಿಸಿರುವಾಗ 4ನೇ ಅಲೆ ನಮಗೇನು ದೊಡ್ಡ ಸಮಸ್ಯೆಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಪ್ರತಿಯೊಬ್ಬರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಒಂದನೇ ಲಸಿಕೆಯನ್ನು ಬಹುತೇಕ ಎಲ್ಲರೂ ಪಡೆದಿದ್ದಾರೆ. ಕೆಲವರು 2ನೇ ಲಸಿಕೆ ಪಡೆಯಲು ಮೀನಾಮೇಷ ಎಣಿಸುತ್ತಿದ್ದಾರೆ. ಇಂಥವರನ್ನುಗುರುತಿಸಿ ಲಸಿಕೆ ನೀಡಬೇಕೆಂದು ಸಲಹೆ ಮಾಡಿದರು.

60 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಬೂಸ್ಟರ್ ಡೋಸ್ ನೀಡುತ್ತಿದ್ದೇವೆ. ಕೆಲವರು ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಇನ್ನು ಕೆಲವರು ಕೋವಿಡ್ ಹೋಗಿರುವಾಗ ನಮಗೇಕೆ ಎಂದು ಉದಾಸೀನ ತೋರುತ್ತಿದ್ದಾರೆ. ಮೊದಲು ಇವರನ್ನು ಗುರುತಿಸಿ ಲಸಿಕೆ ಹಾಕಿ ಎಂದು ಪ್ರಧಾನಿಯವರು ಹೇಳಿದರು.

ಲಸೀಕಾಕರಣ ಮತ್ತು ಶಾಲೆಗಳಲ್ಲಿ ಹೆಚ್ಚು ಅಭಿಯಾನವನ್ನು ಮೂಡಿಸಬೇಕು. ಕೋವಿಡ್ ನಿಯಮಗಳನ್ನು ಚಾಚುತಪ್ಪದೆ ಪಾಲನೆ ಮಾಡಿ. ಮುಖಕ್ಕೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಪ್ರತಿ ನಿಯಮಗಳನ್ನು ಪಾಲನೆ ಮಾಡಬೇಕೆಂದು ಮನವಿ ಮಾಡಿದರು.

ಹಿಂದಿನ ಅಲೆಗಳಿಂದ ನಾವು ಸಾಕಷ್ಟು ಪಾಠ ಕಲಿತ್ತಿದ್ದೇವೆ. ಆರೋಗ್ಯ ಕ್ಷೇತ್ರಕ್ಕೆ ನಮ್ಮ ಸರ್ಕಾರ ವಿಶೇಷ ಒತ್ತು ನೀಡಿದೆ. ಮೂಲಭೂತ ಸೌಕರ್ಯಗಳಿಗೆ ಕೊರತೆ ಇಲ್ಲ. ಹಾಸಿಗೆ, ವೆಂಟಿಲೇಟರ್, ಆಕ್ಸಿಜನ್ ಕೊರತೆಯೂ ಈಗಿಲ್ಲ. ಎಲ್ಲವೂ ಸುಭದ್ರ ಸ್ಥಿತಿಯಲ್ಲಿವೆ ಎಂದು ಹೇಳಿದರು.
ಕೊರೊನಾದಿಂದ ರಕ್ಷಣೆಗೆ ಪ್ರತಿಯೊಬ್ಬರು ಕಡ್ಡಾಯವಾಗಿ ಲಸಿಕೆಯನ್ನು ಪಡೆಯಬೇಕು. ಕೆಲವು ಕಡೆ ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ಪೋಷಕರು ಆತಂಕಗೊಂಡಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಲಸಿಕೆಯೇ ರಕ್ಷಾ ಕವಚ ಎಂಬುದನ್ನು ಮರೆಯಬಾರದು ಎಂದು ಜನತೆಗೆ ಕಿವಿಮಾತು ಹೇಳಿದರು.

ಯಾವ ರಾಜ್ಯಗಳು ಕೂಡ ಕೋವಿಡ್ ಅಲೆಯನ್ನು ನಿಭಾಯಿಸುವುದಿಲ್ಲ ವಿಫಲವಾಗಿಲ್ಲ. ಎಲ್ಲರೂ ಕೂಡ ಸಮರ್ಪಕವಾಗಿ ನಿಭಾಯಿಸಿದ್ದಾರೆ. ಜೂನ್ ತಿಂಗಳಿಗೆ 4ನೇ ಬರಬಹುದೆಂದು ಹೇಳುತ್ತಿದ್ದಾರೆ. ತಕ್ಷಣವೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕಡಿಮೆ ಮಾಡಿ ಎಂದು ಮೋದಿ ಹೇಳಿದರು.

ತೆರಿಗೆ ಕಡಿಮೆ ಮಾಡಿ:
ತೈಲೋತ್ಪನ್ನಗಳ ಬೆಲೆ ಹೆಚ್ಚುತ್ತಿರುವುದು ಎಲ್ಲರಿಗೂ ಗೊತ್ತಿದೆ. ಕರ್ನಾಟಕ ಸರ್ಕಾರ ಕಳೆದ ನವೆಂಬರ್ ತಿಂಗಳಲ್ಲೇ ಪೆಟ್ರೋಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿತು. ಆದರೆ ಅದರ ಅಕ್ಕಪಕ್ಕದಲ್ಲಿರುವ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ ಸೇರಿದಂತೆ ಪಶ್ಚಿಮ ಬಂಗಾಳ ಮತ್ತಿತರ ರಾಜ್ಯಗಳು ಕಡಿಮೆ ಮಾಡಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಕರ್ನಾಟಕ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಮಾರಾಟವನ್ನು ಕಡಿತಗೊಳಿಸಿತು. ತೆರಿಗೆ ಕಡಿಮೆ ಮಾಡುವುದರಿಂದ ಜನತೆಗೆ ಲಾಭವಾಗಲಿದೆ. ಆರು ತಿಂಗಳು ನೀವು ತೆರಿಗೆ ಲಾಭವನ್ನು ಅನುಭವಿಸಿದ್ದೀರಿ. ನಿಮ್ಮ ಜನತೆಗೆ ಅನುಕೂಲವಾಗುವುದಾದರೆ ತೆರಿಗೆ ಕಡಿಮೆ ಮಾಡಲು ಸಮಸ್ಯೆಯಾದರೂ ಏನು ಪ್ರಶ್ನಿಸಿದರು.