ನವದೆಹಲಿ, ಅ.1- ನೀರು, ವಿದ್ಯುತ್, ಅಡುಗೆ ಅನಿಲದ ಮಾದರಿಯಲ್ಲೇ ದೇಶದ ಪ್ರತಿಯೊಂದು ಮನೆಗೂ ಇಂಟರ್ ನೆಟ್ ಸೇವೆಯನ್ನು ಒದಗಿಸುವ ಸಂಕಲ್ಪವನ್ನು ಸರ್ಕಾರ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂಡಿಯನ್ ಮೊಬೈಲ್ ಕಾಂಗ್ರೆಸ್‍ನ ಆರನೇ ಆವೃತ್ತಿಗೆ ಚಾಲನೆ ನೀಡಿ, 5ಜಿ ಸೇವೆಯನ್ನು ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ನಮ್ಮ ಸರ್ಕಾರದ ಪ್ರಯತ್ನದಿಂದಾಗಿ ಭಾರತದಲ್ಲಿ ಡೇಟಾದ ವೆಚ್ಚವು ತುಂಬಾ ಕಡಿಮೆಯಾಗಿದೆ. ಹಿಂದೆ 1 ಜಿಬಿಗೆ 300 ರೂಪಾಯಿಗಳನ್ನು ಪಾವತಿಸಬೇಕಿತ್ತು, ಈಗ 10 ರೂಪಾಯಿಗೆ ಅಷ್ಟೆ ಪ್ರಮಾಣದ ಇಂಟರ್‍ನೆಟ್ ಸಿಗುತ್ತಿದೆ.
ಈ ಬಗ್ಗೆ ನಾವು ಹೆಚ್ಚು ಪ್ರಚಾರ ಮಾಡಿಲ್ಲ, ದೊಡ್ಡ ಜಾಹೀರಾತುಗಳನ್ನು ನೀಡಿಲ್ಲ ಎಂಬುದು ಬೇರೆ ವಿಚಾರ. ದೇಶದ ಜನರ ಅನುಕೂಲತೆಯನ್ನು ಹೆಚ್ಚಿಸುವುದು, ಜೀವನ ಸೌಕರ್ಯವನ್ನು ಹೆಚ್ಚಿಸುವುದು ಹೇಗೆ ಎಂಬುದರ ಬಗ್ಗೆ ನಾವು ಗಮನಹರಿಸಿದ್ದೇವೆ ಎಂದರು.
ಡಿಜಿಟಲ್ ಇಂಡಿಯಾ ಸಣ್ಣ ವ್ಯಾಪಾರಿಗಳು, ಸಣ್ಣ ಉದ್ಯಮಿಗಳು, ಸ್ಥಳೀಯ ಕಲಾವಿದರು ಮತ್ತು ಕುಶಲಕರ್ಮಿಗಳು ಸೇರಿ ಎಲ್ಲರಿಗೂ ವೇದಿಕೆ, ಮಾರುಕಟ್ಟೆ ಒದಗಿಸಿದೆ. ನೀವು ಸ್ಥಳೀಯ ಮಾರುಕಟ್ಟೆ ಅಥವಾ ತರಕಾರಿ ಮಾರುಕಟ್ಟೆಗೆ ಹೋಗಿ ನೋಡಿ, ಸಣ್ಣ ಬೀದಿ ವ್ಯಾಪಾರಿ ಕೂಡ ನಿಮಗೆ ಹೇಳುತ್ತಾನೆ. ನಗದಿಗಿಂತ ಯುಪಿಐ ಮಾಡಿ ಎಂದು. ಸರ್ಕಾರವೇ ಮುಂದೆ ಹೋಗಿ ಡಿಜಿಟಲ್ ಪಾವತಿಗೆ ದಾರಿ ಮಾಡಿಕೊಟ್ಟಿತು.
ಕುಗ್ರಾಮದ ವಿದ್ಯಾರ್ಥಿ ಡಿಜಿಟಲ್ ಇಂಡಿಯಾದಿಂದ ಆನ್‍ಲೈನ್ ಶಿಕ್ಷಣ ಪಡೆಯುತ್ತಿದ್ದಾನೆ. ಸರ್ಕಾರವೇ ಆ್ಯಪ್ ಮೂಲಕ ನಾಗರಿಕ ಕೇಂದ್ರಿತ ವಿತರಣಾ ಸೇವೆಯನ್ನು ಉತ್ತೇಜಿಸಿದೆ. ಅದು ರೈತರಾಗಿರಲಿ ಅಥವಾ ಸಣ್ಣ ಅಂಗಡಿಯವರಾಗಿರಲಿ, ಅವರ ದೈನಂದಿನ ಅಗತ್ಯಗಳನ್ನು ಅಪ್ಲಿಕೇಶನ್ ಮೂಲಕ ಪೂರೈಸಲು ಅನುಕೂಲವಾಗಿದೆ ಎಂದರು.
ಡಿಜಿಟಲ್ ಇಂಡಿಯಾ ಕೇವಲ ಸರ್ಕಾರದ ಯೋಜನೆ ಎಂದು ಕೆಲವರು ಭಾವಿಸುತ್ತಾರೆ. ಆದರೆ ಡಿಜಿಟಲ್ ಇಂಡಿಯಾ ಹೆಸರಿಗಷ್ಟೇ ಅಲ್ಲ, ದೇಶದ ಅಭಿವೃದ್ಧಿಯ ದೊಡ್ಡ ದೃಷ್ಟಿ. ಜನರಿಗಾಗಿ ಕೆಲಸ ಮಾಡುವ, ಜನರೊಂದಿಗೆ ಕೆಲಸ ಮಾಡುವ ತಂತ್ರಜ್ಞಾನವನ್ನು ಸಾಮಾನ್ಯ ಜನರ ಬಳಿಗೆ ಕೊಂಡೊಯ್ಯುವುದು ಈ ವಿಸನ್‍ನ ಗುರಿಯಾಗಿದೆ ಎಂದರು.
ಡಿಜಿಟಲ್ ಇಂಡಿಯಾ ಎಲ್ಲರಿಗೂ ಅರ್ಥವಾಗುವುದಿಲ್ಲ ಎಂದು ಬಡ ಜನರ ಸಾಮಥ್ರ್ಯವನ್ನು ಬೆರಳೆಣಿಕೆಯಷ್ಟು ಗಣ್ಯ ವರ್ಗದ ಜನರು ಅನುಮಾನಿಸಿದ್ದರು. ದೇಶದ ಜನರ ತಿಳುವಳಿಕೆ ಬಗ್ಗೆ ನನಗೆ ಅಪಾರ ನಂಬಿಕೆಯಿದೆ ಎಂದ ಪ್ರಧಾನಿಗಳು, ಮನೆ ಮನೆಗೆ ವಿದ್ಯುತ್ ನೀಡುವ ಅಭಿಯಾನ ಆರಂಭಿಸಿದಂತೆ, ಪ್ರತಿಮನೆಗೂ ಶುದ್ಧ ಕುಡಿಯುವ ನೀರು ಪೂರೈಸುವ ಹರ್ ಘರ್ ಜಲ ಅಭಿಯಾನದ ಮಾದರಿಯಲ್ಲಿ, ಉಜ್ವಲಾ ಯೋಜನೆಯಡಿ ಬಡ ಬಡವರಿಗೆ ಗ್ಯಾಸ್ ಸಿಲಿಂಡರ್‍ಗಳನ್ನು ತಲುಪಿಸಿದಂತೆ ನಮ್ಮ ಸರ್ಕಾರ ಎಲ್ಲರಿಗೂ ಇಂಟರ್ನೆಟ್ ಕಲ್ಪಿಸುವ ಗುರಿ ಹೊಂದಿದೆ ಎಂದರು.
2014 ರ ವೇಳೆಗೆ ಮೊಬೈಲ್ ರಫ್ತಿನಲ್ಲಿ ನಮ್ಮ ದೇಶ ಶೂನ್ಯ ಪಾಲುದಾರಿಕೆ ಹೊಂದಿತ್ತು. ಇಂದು ಸಾವಿರಾರು ಕೋಟಿ ರೂಪಾಯಿಗಳ ಮೊಬೈಲ್ ಫೋನ್‍ಗಳನ್ನು ರಫ್ತು ಮಾಡುವ ದೇಶವಾಗಿದೆ. ಎರಡರಷ್ಟಿದ್ದ ಮೊಬೈಲ್ ಕಂಪೆನಿಗಳು ಇಂದು 200 ದಾಟಿವೆ.
ಆತ್ಮನಿರ್ಭರ ಭಾರತದಿಂದಾಗಿ ಇಂದು ವಿಶ್ವದಲ್ಲೇ ಅತಿ ಹೆಚ್ಚು ಮೊಬೈಲ್ ಉತ್ಪಾದಿಸುವ ಎರಡನೆ ದೇಶವಾಗಿ ಭಾರತ ಹೊರ ಹೊಮ್ಮಿದೆ. ಈ ಎಲ್ಲಾ ಪ್ರಯತ್ನಗಳು ಸ್ವಾಭಾವಿಕವಾಗಿ ಮೊಬೈಲ್‍ಗಳ ದರದ ಮೇಲೆ ಪ್ರಭಾವ ಬೀರಿವೆ. ಕಡಿಮೆ ವೆಚ್ಚದಲ್ಲಿ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿರುವ ಮೊಬೈಲ್‍ಗಳು ನಮ್ಮ ಕೈನಲ್ಲಿವೆ ಎಂದರು.
ಕೇಂದ್ರ ಸರ್ಕಾರ ಏಕಕಾಲದಲ್ಲಿ ನಾಲ್ಕು ದಿಕ್ಕುಗಳಲ್ಲಿ 4 ಕಂಬಗಳ ಮೇಲೆ ಗಮನ ಕೇಂದ್ರೀಕರಿಸಿದೆ. ಮೊದಲನೆಯದು, ಸಾಧನದ ವೆಚ್ಚ , ಎರಡನೆಯದು ಡಿಜಿಟಲ್ ಸಂಪರ್ಕ, ಮೂರನೆಯದು ಡೇಟಾ ವೆಚ್ಚ, ನಾಲ್ಕನೆಯದು ಡಿಜಿಟಲ್ ಫಸ್ಟ್ ಎಂಬ ಕಲ್ಪನೆ ಎಂದರು.
2ಜಿ, 3ಜಿ, 4ಜಿ ತಂತ್ರಜ್ಞಾನಕ್ಕಾಗಿ ಭಾರತ ಇತರ ದೇಶಗಳ ಮೇಲೆ ಅವಲಂಬಿತವಾಗಿತ್ತು. 5ಜಿ ಮೂಲಕ ಭಾರತ ಹೊಸ ಇತಿಹಾಸ ಸೃಷ್ಟಿಸಿದೆ. ಮೊದಲ ಬಾರಿಗೆ ಟೆಲಿಕಾಂ ತಂತ್ರಜ್ಞಾನದಲ್ಲಿ ಜಾಗತಿಕ ಗುಣಮಟ್ಟವನ್ನು 5ಜಿ ಸೇವೆ ಮೂಲಕ ಭಾರತ ರೂಪಿಸಿದೆ.
ನವ ಭಾರತವು ಕೇವಲ ತಂತ್ರಜ್ಞಾನದ ಗ್ರಾಹಕನಾಗಿ ಉಳಿದಿಲ್ಲ. ಆ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಅನುಷ್ಠಾನದಲ್ಲಿ ಭಾರತವು ಸಕ್ರಿಯ ಪಾತ್ರವನ್ನು ವಹಿಸುತ್ತಿದೆ. ಭವಿಷ್ಯದ ವೈರ್‍ಲೆಸ್ ತಂತ್ರಜ್ಞಾನವನ್ನು ವಿನ್ಯಾಸಗೊಳಿಸುವಲ್ಲಿ ಭಾರತವು ದೊಡ್ಡ ಪಾತ್ರವನ್ನು ವಹಿಸುತ್ತದೆ, ಅದಕ್ಕೆ ಸಂಬಂಧಿಸಿದ ಉತ್ಪಾದನೆ ಎಂದರು.
ದೇಶದ 130 ಕೋಟಿ ಭಾರತೀಯರಿಗೆ 5ಜಿ ರೂಪದಲ್ಲಿ ಅದ್ಭುತ ಕೊಡುಗೆ ಸಿಗುತ್ತಿದೆ. ದೇಶದ ಬಾಗಿಲಲ್ಲಿ 5ಜಿ ಹೊಸ ಯುಗದ ಬಾಗಿಲು ತಟ್ಟಿದೆ. 5ಜಿ ಅವಕಾಶಗಳು ಆಕಾಶದಷ್ಟು ಅನಂತವಾಗಿವೆ. ಇದಕ್ಕಾಗಿ ನಾನು ಪ್ರತಿಯೊಬ್ಬ ಭಾರತೀಯನನ್ನು ಅಭಿನಂದಿಸುತ್ತೇನೆ ಎಂದರು.