ಮಾತಿನ ಮನೆಯ ವಾಕ್‍ಯುದ್ಧಕ್ಕೆ ತಂತ್ರ, ಪ್ರತಿತಂತ್ರಗಳ ಸಭೆ

Social Share

ನವದೆಹಲಿ, ಜು.21- ಮುಂಗಾರು ಅಧಿವೇಶನದಲ್ಲಿ ಪ್ರತಿಪಕ್ಷಗಳ ಪ್ರತಿರೋಧ ಎದುರಿಸಲು ಅನುಸರಿಸಬೇಕಾದ ತಂತ್ರಗಾರಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ಸಂಪುಟ ಹಿರಿಯ ಸಚಿವರ ಜೊತೆ ಸಭೆ ನಡೆಸಿ ಸಮಾಲೋಚಿಸಿದರು. ಅತ್ತ ಪ್ರತಿಪಕ್ಷಗಳು ಪ್ರತ್ಯೇಕ ಸಭೆ ನಡೆಸಿವೆ.

ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅನುರಾಗ್ ಸಿಂಗ್ ಠಾಕೂರ್, ಕಿರಣ್ ರಿಜ್ಜಿಜ್ಜು ಸೇರಿದಂತೆ ಹಲವರು ಪ್ರಧಾನಿ ಸಭೆಯಲ್ಲಿ ಭಾಗವಹಿಸಿದ್ದರು. ಸೋಮವಾರದಿಂದ ಆರಂಭವಾದ ಸಂಸತ್ ಕಲಾಪದಲ್ಲಿ ಪ್ರತಿಪಕ್ಷಗಳು ಪ್ರತಿ ದಿನ ಗಲಾಟೆ ನಡೆಸುತ್ತಿವೆ. ಮೊದಲ ದಿನ ಸಂತಾಪ ಸೂಚಕ ಸಂದರ್ಭದಲ್ಲಿ ಹೊರತು ಪಡಿಸಿ ಉಳಿದಂತೆ ಜಿಎಸ್‍ಟಿ ಹೇರಿಕೆ, ಹಣದುಬ್ಬರ, ನಿರುದ್ಯೋಗ ಸೇರಿದಂತೆ ಅನೇಕ ವಿಷಯಗಳ ಕುರಿತು ಚರ್ಚೆಗೆ ಪಟ್ಟು ಹಿಡಿದು ಗಲಾಟೆ, ಧರಣಿ ನಡೆಸಿ ಕಲಾಪಕ್ಕೆ ಅಡ್ಡಿ ಪಡಿಸುತ್ತಿವೆ.

ಸಂಸತ್ ಅಧಿವೇಶನ ಆರಂಭದ ಮುನ್ನಾ ದಿನವೇ ಕೇಂದ್ರ ಸರ್ಕಾರ ಮೊಸರು, ಪನ್ನೀರ್ ಸೇರಿದಂತೆ ಜನ ಸಾಮಾನ್ಯರು ಬಳಸುವ ದಿನ ನಿತ್ಯದ ವಸ್ತುಗಳು ಹಾಗೂ ಪ್ಯಾಕಿಂಗ್ ಮಾಡಿದ ಬ್ರಾಂಡೆಡ್ ಆಹಾರ ಪದಾರ್ಥಗಳ ಮೇಲೆ ಜಿಎಸ್‍ಟಿ ವಿಧಿಸಿ ಆದೇಶ ಹೊರಡಿಸಿತ್ತು.

ಇದು ಜನಾಕ್ರೋಶಕ್ಕೆ ಕಾರಣವಾಗಿದ್ದು, ಪ್ರತಿಪಕ್ಷಗಳು ಚರ್ಚೆಗೆ ಅವಕಾಶ ಕೇಳಿ ನೋಟಿಸ್ ನೀಡಿದ್ದವು. ಆದರೆ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಸಭಾಧ್ಯಕ್ಷರು ನೋಟಿಸ್ ಅನ್ನು ತಿರಸ್ಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಪ್ರತಿಭಟನೆಯನ್ನು ಮುಂದುವರೆಸಿವೆ.

ಕಳೆದ ನಾಲ್ಕು ದಿನಗಳಿಂದಲೂ ಸಂಸತ್‍ನಲ್ಲಿ ಯಾವುದೇ ಕಲಾಪಗಳು ನಡೆಯದೆ ಸಮಯ ವ್ಯರ್ಥವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳಿಗೆ ಪ್ರತ್ಯುತ್ತರಿಸಲು ಸರ್ಕಾರ ಪ್ರತಿತಂತ್ರ ರೂಪಿಸಿದೆ. ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಇತ್ತ ಇಂದು ಬೆಳಗ್ಗೆ ಪ್ರತಿಪಕ್ಷಗಳು ಸಭೆ ನಡೆಸಿವೆ. ಡಿಎಂಕೆ, ಎಡಪಕ್ಷಗಳು, ಐಯುಎಂಎಲ್, ಜೆಕೆಎನ್‍ಸಿ, ಟಿಆರ್‍ಎಸ್, ಎಂಡಿಎಂಕೆ, ಎನ್‍ಸಿಪಿ, ವಿಸಿಕೆ, ಆರ್‍ಜೆಡಿ, ಶಿವಸೇನೆ ಸೇರಿದಂತೆ ಹಲವು ಪಕ್ಷಗಳ ನಾಯಕರು ಸಭೆ ನಡೆಸಿ ತಮ್ಮ ತಂತ್ರಗಾರಿಕೆ ಕುರಿತು ಚರ್ಚೆ ನಡೆಸಿವೆ.

ಸಂಸತ್‍ನಲ್ಲಿ ಚರ್ಚೆಗೆ ಅವಕಾಶ ನೀಡದೆ ಪದೇ ಪದೇ ಕಲಾಪ ಮುಂದೂಡುತ್ತಿರುವುದರಿಂದ ಸಂಸತ್ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದರು ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅೀಧಿರ್ ರಂಜನ್ ಚೌದ್ರಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Articles You Might Like

Share This Article