ಬಿಎಸ್‍ವೈ-ಮೋದಿ ಗೌಪ್ಯ ಮಾತುಕತೆ, ರಾಜ್ಯ ಬಿಜೆಪಿಯಲ್ಲಿ ಸಂಚಲನ

Social Share

ನವದೆಹಲಿ,ಜ.17- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ನಡೆಸಿರುವ ಗೌಪ್ಯ ಮಾತುಕತೆ ಸಂಚಲನ ಸೃಷ್ಟಿಸಿದೆ.

ರಾಜ್ಯ ಬಿಜೆಪಿಯೊಳಗೆ ಯಡಿಯೂರಪ್ಪ ನವರ ಯುಗ ಮುಗಿಯಿತು ಎಂದು ಅವರ ವಿರೋಧಿಗಳು ಮಾತನಾಡಿಕೊಳ್ಳುತ್ತಿರುವ ಸಂದರ್ಭದಲ್ಲೇಮೋದಿ ಮತ್ತು ಬಿಎಸ್‍ವೈ ಅವರ ಭೇಟಿ ಅನೇಕ ಸಂಶಯಗಳನ್ನು ಹುಟ್ಟು ಹಾಕಿದೆ. ಮೇಲ್ನೋಟಕ್ಕೆ ಇದೊಂದು ಸೌಹಾರ್ದಯುತ ಭೇಟಿ ಎಂದು ಹೇಳಲಾಗಿದೆ.

ಶಿವಮೊಗ್ಗದಲ್ಲಿ ಉದ್ಘಾಟನೆಗೆ ಸಿದ್ದಗೊಂಡಿರುವ ವಿಮಾನ ನಿಲ್ದಾಣ, ಇತರೆ ಯೋಜನೆಗಳ ಲೋಕಾರ್ಪಣೆಗೆ ಮೋದಿ ಅವರನ್ನು ಯಡಿಯೂರಪ್ಪ ಆಹ್ವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ ಕಾರ್ಯಕಾರಿಣಿ ನಡೆಯುವ ಸಂದರ್ಭದಲ್ಲಿ ಎಲ್ಲ ಪ್ರಮುಖ ನಾಯಕರನ್ನು ಬಿಟ್ಟು ವಿಶೇಷವಾಗಿ ಯಡಿಯೂರಪ್ಪನವರ ಜೊತೆ ಸುಮಾರು 10ಕ್ಕೂ ಹೆಚ್ಚು ನಿಮಿಷಗಳ ಕಾಲ ಕರ್ನಾಟಕದ ಬೆಳವಣಿಗೆಗಳ ಕುರಿತಂತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸಾಮಾನ್ಯವಾಗಿ ನರೇಂದ್ರಮೋದಿ ಅವರು ಅಷ್ಟು ಸುಲಭವಾಗಿ ಯಾವುದೇ ಪ್ರಮುಖರ ಜೊತೆ ರಾಜಕೀಯ ಬೆಳವಣಿಗೆಗಳು ಇಲ್ಲವೇ ಇತರೆ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆಸುವುದೇ ಅಪರೂಪ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಅವರ ಆಪ್ತ ವಲಯ ನೀಡುವ ಮಾಹಿತಿ ಮೇರೆಗೆ ಮುಂದಿನ ಕಾರ್ಯಕ್ರಮಗಳನ್ನು ರೂಪಿಸುತ್ತಾರೆ.

ನಿಷೇಧಿತ ಗಾಳಿಪಟ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರ ವಿರುದ್ಧ ಕ್ರಮ

ಯಡಿಯೂರಪ್ಪನವರ ಬಗ್ಗೆ ಈಗಲೂ ಮೋದಿ ತುಂಬ ಸಕಾರಾತ್ಮಕವಾದ ಭಾವನೆಯನ್ನೇ ಇಟ್ಟುಕೊಂಡಿದ್ದಾರೆ. ಪಕ್ಷದಲ್ಲಿ 75 ವರ್ಷ ಮೀರಿದವರಿಗೆ ಅಧಿಕಾರ ನೀಡಬಾರದೆಂದು ಅಲಿಖಿತ ನಿಯಮ ಮಾಡಿಕೊಳ್ಳಲಾಗಿತ್ತು.

ಲಾಲ್‍ಕೃಷ್ಣ ಅಡ್ವಾಣಿ, ಮುರುಳಿ ಮನೋಹನರ್ ಜೋಷಿ, ಉಮಾಭಾರತಿ, ಸುಷ್ಮಾ ಸ್ವರಾಜ್, ಸುಮಿತ್ರಾ ಮಹಾಜನ್ ಸೇರಿದಂತೆ ಘಟಾನುಘಟಿ ನಾಯಕರನ್ನೇ ಮೋದಿ ಮತ್ತು ಅಮಿತ್ ಷಾ ಟಿಕೆಟ್ ಕೊಟ್ಟಿರಲಿಲ್ಲ. ಅಂತಹ ಸಂದರ್ಭದಲ್ಲೂ 75 ವರ್ಷ ದಾಟಿದ ಯಡಿಯೂರಪ್ಪನವರಿಗೆ ಕರ್ನಾಟಕದಲ್ಲಿ 2 ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ಮೋದಿ ಅವರ ಸಹಕಾರವೇ ಕಾರಣ ಎಂದು ಬಿಜೆಪಿಯಲ್ಲಿ ಹೇಳಲಾಗುತ್ತಿದೆ.

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದ್ದ ಯಡಿಯೂರಪ್ಪ ಈಗಲೂ ಕೂಡ ಲಿಂಗಾಯಿತ ಸಮುದಾಯದ ಏಕಾಮೇವಾತ್ಯ ನಾಯಕ. ಅವರ ರಾಜೀನಾಮೆ ನಂತರ ಸಿಎಂ ಬೊಮ್ಮಾಯಿ ಅದೇ ಸಮುದಾಯಕ್ಕೆ ಸೇರಿದ್ದರೂ ಕೂಡ ಈಗಲೂ ಕೂಡ ವರ್ಚಸ್ವಿ ನಾಯಕರಾಗಿ ಹೊರಹೊಮ್ಮಿಲ್ಲ.

ಸಿಎಂ ಗಾದಿಯಿಂದ ಯಡಿಯೂರಪ್ಪ ಅವರನ್ನು ಕೆಳಕ್ಕಿಳಿಸಿದ ಬಳಿಕ ಅವರಿಗೆ ಬಿಜೆಪಿಯಲ್ಲಿ ಮಹತ್ವದ ಸ್ಥಾನವೇನೂ ನೀಡಿಲ್ಲ. ಅವರು ಬಿಜೆಪಿ ಕೇಂದ್ರ ಸಂಸದೀಯ ಸ್ಥಾನಕ್ಕೆ ಸೀಮಿತರಾಗಿದ್ದಾರೆ. ಆದರೆ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಏಕೈಕ ರಾಜ್ಯದಲ್ಲಿ, ಪ್ರಬಲ ಲಿಂಗಾಯತ ಸಮುದಾಯದ ಬೆಂಬಲ ಹೊಂದಿರುವ ಯಡಿಯೂರಪ್ಪ ಅವರನ್ನು ಕಡೆಗಣಿಸಿದಷ್ಟೂ ಪಕ್ಷಕ್ಕೆ ಹಿನ್ನಡೆ ಎನ್ನುವುದು ಕೇಂದ್ರ ನಾಯಕರಿಗೆ ತಿಳಿದಿದೆ.

ಅದರಲ್ಲಿಯೂ ಚುನಾವಣೆ ಸಮಯದಲ್ಲಿ ಯಡಿಯೂರಪ್ಪ ಅವರ ಶಕ್ತಿ ಪಕ್ಷಕ್ಕೆ ಅತಿ ಅಗತ್ಯವಾಗಿದೆ. ಚುನಾವಣೆ ಹತ್ತಿರ ಬಂದ ಸಂದರ್ಭದಲ್ಲಿ ಅವರನ್ನು ಪಕ್ಷದ ಉನ್ನತ ನಿರ್ಧಾರ ಕೈಗೊಳ್ಳುವ ಸಂಸದೀಯ ಮಂಡಳಿಗೆ ನೇಮಿಸಲಾಗಿತ್ತು.

ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸರ್ಕಾರ ಎದುರಿಸುತ್ತಿರುವ ಭ್ರಷ್ಟಾಚಾರ ಆರೋಪಗಳ ನಡುವೆ, ಅವರ ನೇತೃತ್ವದಲ್ಲಿ ಚುನಾವಣೆಗೆ ಇಳಿಯುವುದು ಬಿಜೆಪಿಗೆ ಹಿನ್ನಡೆ ಉಂಟುಮಾಡುವ ಸಾಧ್ಯತೆ ಇದೆ ಎಂಬ ಆತಂಕ ಕೇಂದ್ರ ನಾಯಕರಲ್ಲಿದೆ.

ಅತ್ತ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ ನಂತರ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಿದ್ದರೂ, ಅವರ ಅವಶ್ಯಕತೆ ಹಾಗೂ ಶಕ್ತಿ ಪಕ್ಷಕ್ಕೆ ಈಗ ಅರಿವಾಗಿದೆ. ಹೀಗಾಗಿ ರಾಜ್ಯದಲ್ಲಿನ ಮುಂದಿನ ನಡೆಯ ಬಗ್ಗೆ ಸಮಾಲೋಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು 15 ನಿಮಿಷಗಳ ಕಾಲ ಯಡಿಯೂರಪ್ಪನವರೊಂದಿಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.

ಬಿಜೆಪಿಯ ಮುಖ್ಯ ಚುನಾವಣಾ ತಂತ್ರಜ್ಞ ಅಮಿತ್ ಶಾ, ರಾಜ್ಯದ 224 ಕ್ಷೇತ್ರಗಳ ಪೈಕಿ 136ರಲ್ಲಿ ಗೆಲ್ಲುವಂತೆ ಮಿಷನ್ 136 ಗುರಿಯನ್ನು ಕರ್ನಾಟಕದ ಬಿಜೆಪಿಗೆ ನೀಡಿದ್ದಾರೆ.

ಆದರೆ ದೇಶದಲ್ಲಿ ತಾನು ಅತಿ ಹೆಚ್ಚು ಪ್ರಾಬಲ್ಯ ಹೊಂದಿರುವ ರಾಜ್ಯಗಳಲ್ಲಿ ಒಂದೆನಿಸಿರುವ ಕರ್ನಾಟಕದಲ್ಲಿ ಕಾಂಗ್ರೆಸ್ ಈಗಾಗಲೇ ಅಖಾಡಕ್ಕೆ ಇಳಿದಿದೆ. ಉಚಿತ ವಿದ್ಯುತ್, ಗೃಹಿಣಿಯರಿಗೆ ಮಾಸಾಶನದಂತಹ ಘೋಷಣೆಗಳು ಬಿಜೆಪಿಗೆ ಕಳವಳ ಮೂಡಿಸಿದೆ.

ಪಕ್ಷಕ್ಕೆ ಬಿಎಸ್‍ವೈ ಅನಿವಾರ್ಯ:
ಕಾಂಗ್ರೆಸ್ ಅಬ್ಬರದ ಪ್ರಚಾರ ತಂತ್ರಕ್ಕೆ ಎದುರಾಗಿ ಬಿಜೆಪಿಯನ್ನು ನಿಲ್ಲಿಸಲು ಯಡಿಯೂರಪ್ಪ ಅನಿವಾರ್ಯವಾಗಿದ್ದಾರೆ. ಆದರೆ ಯಡಿಯೂರಪ್ಪ ಅವರು ತಮ್ಮನ್ನು ಪಕ್ಷದಲ್ಲಿ ಕಡೆಗಣಿಸುತ್ತಿರುವುದರ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಬಹಿರಂಗವಾಗಿ ಅವರು ಈ ಬಗ್ಗೆ ಏನನ್ನೂ ಹೇಳಿಲ್ಲ. ಆದರೆ ಅವರ ನಡೆಗಳು ಅದರ ಸುಳಿವು ನೀಡಿದೆ.

ಕಳೆದೊಂದು ವರ್ಷದಿಂದ ಚೀನಾದಲ್ಲಿ ಕ್ಷೀಣಿಸುತ್ತಿದೆ ಜನಸಂಖ್ಯೆ ..!

ಪಕ್ಷದಲ್ಲಿ ತಮ್ಮನ್ನು ಮೊದಲಿನಂತೆ ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ. ಸಿಎಂ ಹುದ್ದೆಯಿಂದ ಇಳಿಸುವ ಸಂದರ್ಭದಲ್ಲಿ ಕೊಟ್ಟಿದ್ದ ಮಾತನ್ನು ಪಾಲಿಸುತ್ತಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ತಮ್ಮನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಯಡಿಯೂರಪ್ಪನವರಿಗೆ ಬೇಸರ ಮೂಡಿಸಿದೆ.

ಜನಸ್ಪಂದನೆ ಯಾತ್ರೆಗೆ ಗೈರಾಗಿದ್ದು ಯಡಿಯೂರಪ್ಪ ನೀಡಿದ್ದ ಎಚ್ಚರಿಕೆ ಸಂದೇಶ ಎಂದೇ ಹೇಳಲಾಗಿದೆ. ರಾಜ್ಯಕ್ಕೆ ಬಂದಿದ್ದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಯಡಿಯೂರಪ್ಪನವರ ಸಿಟ್ಟು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದರು. ಮೋದಿ ಅವರ ಮಾತುಕತೆ ಕೂಡ ಇದೇ ನಿಟ್ಟಿನಲ್ಲಿ ನಡೆದಿದೆ ಎಂದು ಹೇಳಲಾಗಿದೆ.

Articles You Might Like

Share This Article