ಪುಣೆ,ಮಾ.6- ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪುಣೆಯಲ್ಲಿ ಮೆಟ್ರೋ ರೈಲಿಗೆ ಚಾಲನೆ ನೀಡಿ ನಂತರ ಟಿಕೆಟ್ ಖರೀದಿಸಿ ಪ್ರಯಾಣಿಸಿದ್ದು ವಿಶೇಷವಾಗಿತ್ತು. ಉದ್ಘಾಟನೆ ನಂತರ ಏಕಾ ಏಕಿ ಟಿಕೆಟ್ ಕೌಂಟರ್ ಬಳಿ ತೆರಳಿದ ಪ್ರಧಾನಿ ಸಹೋದ್ಯೋಗಿಗಳ ಜತೆ ಮೆಟ್ರೋ ಅನುಭವವನ್ನು ಪಡೆದರು.
ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಪುಣೆ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದರು. “ಈ ಯೋಜನೆಯು ಪುಣೆಯಲ್ಲಿ ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಒದಗಿಸುವ ಪ್ರಯತ್ನವಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಬೆಳಗ್ಗೆ 11.30ಕ್ಕೆ ಪುಣೆ ಮೆಟ್ರೋ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ ಅವರು, ಬಳಿಕ ಕೆಲವು ವಿದ್ಯಾರ್ಥಿಗಳೊಂದಿಗೆ ಆನಂದನಗರ ಮೆಟ್ರೋ ನಿಲ್ದಾಣದಿಂದ ಮೆಟ್ರೋದಲ್ಲಿ ಪ್ರಯಾಣಿಸಿದರು.
ಡಿಸೆಂಬರ್ 24, 2016 ರಂದು ಪುಣೆ ಮೆಟ್ರೋ ಯೋಜನೆಗೆ ಶಂಕು ಸ್ಥಾಪನೆ ಮಾಡಿದ್ದ ಪ್ರಧಾನಿ ಮೋದಿ ಇಂದು ಮೆಟ್ರೋಗೆ ಚಾಲನೆ ನೀಡಿದರು. ಒಟ್ಟು 32.2 ಕಿಮೀ ಪುಣೆ ಮೆಟ್ರೋ ರೈಲು ಯೋಜನೆಯಲ್ಲಿ 12 ಕಿಮೀ ಮಾರ್ಗಕ್ಕೆ ಪ್ರಧಾನಿ ಚಾಲನೆ ನೀಡಿದರು.
