ನವದೆಹಲಿ,ಫೆ.14- 2019ರಲ್ಲಿ ಪುಲ್ವಾಮಾನದಲ್ಲಿ ಬೆಂಗಾವಲು ವಾಹನದ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‍ಪಿಎಫ್) ಸಿಬ್ಬಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶ್ರದ್ಧಾಂಜಲಿ ಸಲ್ಲಿಸಿದರು.
ದಕ್ಷಿಣ ಕಾಶ್ಮೀರ ಜಿಲ್ಲೆಯಲ್ಲಿ ಪಾಕ್-ಪ್ರಾಯೋಜಿತ ಉಗ್ರರು ನಡೆಸಿದ್ದ ದಾಳಿಯಲ್ಲಿ 40 ಸಿಆರ್‍ಪಿಎಫ್ ಯೋಧರು ಪ್ರಾಣತ್ಯಾಗ ಮಾಡಿದ್ದರು.
ಪ್ರತಿ ದಾಳಿ ನಡೆಸಿದ ಭಾರತೀಯ ವಾಯುಪಡೆಯು 2019ರ ಫೆಬ್ರವರಿ 26ರಂದು ಪಾಕಿಸ್ತಾನದ ಬಾಲಾಕೋಟ್‍ನ ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಿತ್ತು.
2019ರಲ್ಲಿ ಈ ದಿನ ಪುಲ್ವಾಮಾದಲ್ಲಿ ಹುತಾತ್ಮರಾದ ಎಲ್ಲಾ ಯೋಧರಿಗೆ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಮತ್ತು ರಾಷ್ಟ್ರಕ್ಕೆ ಅವರು ನೀಡಿದ ವಿಶಿಷ್ಟ ಸೇವೆಯನ್ನು ಸ್ಮರಿಸುತ್ತೇನೆ. ಅವರ ಶೌರ್ಯ-ಸ್ಥೈರ್ಯ ಮತ್ತು ಪರಮೋನ್ನತ ತ್ಯಾಗವು ಪ್ರತಿಯೊಬ್ಬ ಭಾರತೀಯನಿಗೆ ಸದೃಢ ಮತ್ತು ಸಮೃದ್ಧ ದೇಶ ನಿರ್ಮಾಣದ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಸೂರ್ತಿದಾಯಕವಾಗಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
