ನವದೆಹಲಿ,ಆ.9- ಕ್ವಿಟ್ ಇಂಡಿಯಾ ಚಳುವಳಿ ಸಂಸ್ಮರಣಾ ದಿನವಾದ ಇಂದು ಪ್ರಧಾನಿ ನರೇಂದ್ರಮೋದಿ ದೃಶ್ಯ ಸಂಕಲನದ ಮೂಲಕ ಸ್ಪೂರ್ತಿದಾಯಕವಾದ ಮಾತುಗಳ ಸಂದೇಶವನ್ನು ಸಾರಿದ್ದಾರೆ. ಸ್ವಾತಂತ್ರ್ಯ ಪೂರ್ವ ಆಗಸ್ಟ್ ತಿಂಗಳಿನಲ್ಲಿ ಹಲವಾರು ಮಹತ್ವಪೂರ್ಣ ಘಟನೆಗಳು ಸಂಭವಿಸಿವೆ. 1942, ಆ.9ರಂದು ಮಹಾತ್ಮ ಗಾಂಧೀಜಿಯವರು ಕ್ವಿಟ್ ಇಂಡಿಯಾ( ಭಾರತ ಬಿಟ್ಟು ತೊಲಗಿ) ಚಳುವಳಿಯನ್ನು ಆರಂಭಿಸಿದರು.
ಈ ಅಭಿಯಾನದಲ್ಲಿ ದೇಶವಾಸಿಗಳು ಯಾವುದೇ ಬೇಧಭಾವವಿಲ್ಲದೆ ತಮ್ಮನ್ನು ತೊಡಗಿಸಿಕೊಂಡರು. ಬಹಳಷ್ಟು ಮಂದಿ ಓದುವುದನ್ನು ಬಿಟ್ಟರು, ಸರ್ಕಾರಿ ಕೆಲಸ ತೊರೆದರು, ಮನೆ ಬಿಟ್ಟು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ತೊಡಗಿಸಿಕೊಂಡರು.
ಅಕ್ಷರಸ್ಥರು, ಅನಕ್ಷರಸ್ಥರು, ಬಡವರು, ಶ್ರೀಮಂತರು ಸೇರಿದಂತೆ ಯಾವುದೇ ಬೇಧವಿಲ್ಲದೆ ಎಲ್ಲ ಸಹಭಾಗಿತ್ವದಲ್ಲಿ ನಡೆದ ಚಳುವಳಿ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಅಧ್ಯಾಯ. ಮಹಾತ್ಮ ಗಾಂಧೀಜಿಯವರ ಕರೆ ಆಧರಿಸಿ ಜಯಪ್ರಕಾಶ್ ನಾರಾಯಣ್(ಜೆಪಿ), ಡಾ.ಲೋಹಿಯಾ ಸೇರಿದಂತೆ ಅನೇಕರು ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಲಕ್ಷಾಂತರ ಜನರ ತ್ಯಾಗ, ಬಲಿದಾನದಿಂದಾಗಿ ನಾವಿಂದು ಸ್ವಾತಂತ್ರ್ಯದ ಫಲಾನುಭವಿಗಳಾಗಿದ್ದೇವೆ ಎಂದಿದ್ದಾರೆ.
ಕ್ವಿಟ್ ಇಂಡಿಯಾ ಮಾದರಿಯಲ್ಲೆ ಭಾರತ ಮತ್ತೊಂದು ಚಳುವಳಿ-ಅಭಿಯಾನವನ್ನು ಆರಂಭಿಸಬೇಕಿದೆ. ಅನೈರ್ಮಲ್ಯ, ಬಡತನ, ಭ್ರಷ್ಟಾಚಾರ, ಭಯೋತ್ಪಾದನೆ, ಜಾತಿವಾದ, ಸಂಪ್ರದಾಯ ವಾದಗಳನ್ನು ಭಾರತದಿಂದ ತೊಲಗಿಸುವ ಚಳುವಳಿಯಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕಾಗಿದೆ.
ದೇಶಕ್ಕಾಗಿ, ಗ್ರಾಮಕ್ಕಾಗಿ, ನೆರೆಹೊರೆಯವರಿಗಾಗಿ ನಮ್ಮದೇ ಆದ ಕೊಡುಗೆ ನೀಡುತ್ತೇವೆ ಎಂದು ಕೋಟಿ ಕೋಟಿ ಸಂಕಲ್ಪಗಳನ್ನು ಕೈಗೊಳ್ಳಬೇಕಿದೆ. ಈ ಮೂಲಕ ಮತ್ತೊಂದು ಮಹತ್ವಪೂರ್ಣ ಚಳುವಳಿಯಲ್ಲಿ ನಾವು ತೊಡಗಿಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಕ್ವಿಟ್ ಇಂಡಿಯಾ ಚಳುವಳಿಯ ಆರಂಭದ ದಿನಗಳ ಸುದ್ದಿಯ ತುಣುಕು ಮತ್ತು ಮಹಾತ್ಮ ಗಾಂಧೀಜಿಯವರು ಧರಣಿ ನಡೆಸುತ್ತಿರುವ ಫೋಟೋವನು ಪ್ರಧಾನಿಯವರು ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದಾರೆ.