ಮೋದಿ ರೋಡ್‍ಶೋ, ಬಿಜೆಪಿಗೆ ಆನೆಬಲ

Social Share

ಬೆಂಗಳೂರು,ಮಾ.9- ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಬೆಂಗಳೂರು- ಮೈಸೂರು ದಶಪಥ ಹೆದ್ದಾರಿ ಕಾಮಗಾರಿ ಉದ್ಘಾಟನೆಗಾಗಿ ಇದೇ 12ರಂದು ರಾಜ್ಯಕ್ಕೆ ಆಗಮಿಸುತ್ತಿದ್ದು, ಅಂದು ಮಂಡ್ಯ ನಗರದಲ್ಲಿ ರೋಡ್ ಶೋ ನಡೆಸಿ ಬಿಜೆಪಿಗೆ ಬಲ ತುಂಬಲಿದ್ದಾರೆ.

ಮೋದಿ ಆಗಮನದ ಹಿನ್ನಲೆಯಲ್ಲಿ ಸಕ್ಕರೆ ನಾಡು ಮಂಡ್ಯ ಕೇಸರಿಮಯವಾಗಿದ್ದು, ಮೈಸೂರು ಕರ್ನಾಟಕದಲ್ಲಿ ಈ ಬಾರಿ ಹೆಚ್ಚಿನ ಸ್ಥಾನ ಗಳಿಸುವ ಬಿಜೆಪಿ ಕಾರ್ಯತಂತ್ರಕ್ಕೆ ಪ್ರಧಾನಿಯವರ ಭೇಟಿ ಟಾನಿಕ್ ನೀಡಲಿದೆ ಎಂದು ಹೇಳಲಾಗುತ್ತಿದೆ.

ನಗರದ ಪ್ರವಾಸಿಮಂದಿರ ವೃತ್ತದಿಂದ ಪ್ರಾರಂಭವಾಗಿ ಜಯಚಾಮರಾಜೇಂದ್ರ ಒಡೆಯರ್ ವೃತ್ತದ ಮಾರ್ಗವಾಗಿ ನಂದಾ ವೃತ್ತದ ಮೂಲಕ ರೋಡ್ ಶೋ ಮುಕ್ತಾಯವಾಗಲಿದೆ. 1.5ಕಿ.ಮೀ ರೋಡ್ ಶೋ ನಡೆಯಲಿರುವ ಹಿನ್ನೆಲೆಯಲ್ಲಿ ರಸ್ತೆಯ ಶುಚಿತ್ವ, ದುರಸ್ತಿ ಕುರಿತು ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ.

ಸೋಮಣ್ಣ ಮುನಿಸು ತಣಿಸಿದ ಸಿಎಂ ಬೊಮ್ಮಾಯಿ

ಮಾ.12ರಂದು ಬೆಂಗಳೂರು-ಮೈಸೂರು ಹೈವೇ ಲೋಕಾರ್ಪಣೆಗೆ ನರೇಂದ್ರಮೋದಿ ಆಗಮಿಸುತ್ತಿರುವುದರಿಂದ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿಯಲ್ಲಿ ನಡೆಯುವ ಸಮಾವೇಶಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ.

16 ಎಕರೆ ವಿಸ್ತೀರ್ಣದಲ್ಲಿ ಬೃಹತ್ ಸಮಾವೇಶ ಮಾಡಲಾಗುತ್ತಿದೆ. ಪ್ರಧಾನಿ ಮೋದಿ ಆಗಮನದ ಹಿನ್ನಲೆ ಜಿಲ್ಲಾಡಳಿತ ಭಾರೀ ಎಚ್ಚರಿಕೆ ವಹಿಸುತ್ತಿದೆ. ಸಮಾವೇಶ ನಡೆಯುವ ಸ್ಥಳಕ್ಕೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಎಡಿಜಿಪಿ ಅಲೋಕ್‍ಕುಮಾರ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಎಸ್‍ಪಿಜಿ ಟೀಂ ಸಮಾವೇಶದ ಸ್ಥಳ ಪರಿಶೀಲನೆ ನಡೆಸಿ ಪಾರ್ಕಿಂಗ್ ವ್ಯವಸ್ಥೆ, ವೇದಿಕೆ ಪ್ರಧಾನಿ ಸಂಚರಿಸುವ ಮಾರ್ಗ ಪರಿಶೀಲನೆ ಮಾಡಿ ಎಸ್‍ಪಿ, ಡಿಸಿ ಜೊತೆ ಸಭೆ ನಡೆಸಿದ್ದಾರೆ.

ಮಾ.24ಕ್ಕೆ ಬಸವಣ್ಣ-ಕೆಂಪೇಗೌಡರ ಪ್ರತಿಮೆ ಅನಾವರಣ

ಕಳೆದ ಫೆಬ್ರವರಿ ತಿಂಗಳಿನಲ್ಲಿ ಮೋದಿ ಅವರು ಶಿವಮೊಗ್ಗ, ಬೆಳಗಾವಿಗೆ ಭೇಟಿ ನೀಡಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ್ದರು ಹಾಗೂ ಫಲಾನುಭವಿಗಳ ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು. ಜೆಡಿಎಸ್ ಭದ್ರಕೋಟೆಯಾಗಿರುವ ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸುತ್ತಿರುವುದು ಮಹತ್ವ ಪಡೆದುಕೊಂಡಿದೆ.

ಧಾರವಾಡಕ್ಕೂ ಭೇಟಿ: ಮಂಡ್ಯ ಭೇಟಿ ನಂತರ ಧಾರವಾಡಕ್ಕೆ ತೆರಳಿರುವ ಪ್ರಧಾನಿಮೋದಿ ಅವರು, 5 ಸಾವಿರ ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಮಧ್ಯಾಹ್ನ 2 ಗಂಟೆಗೆ ಹುಬ್ಬಳ್ಳಿ ಆಗಮಿಸಲಿರುವ ಮೋದಿ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಐಐಟಿ ಸ್ಥಳಕ್ಕೆ ತೆರಳಲಿದ್ದಾರೆ. ಧಾರವಾಡ ಐಐಟಿ ನೂತನ ಕಟ್ಟಡ, ಏಷ್ಯಾದ ಅತಿ ಉದ್ದದ ಹುಬ್ಬಳ್ಳಿಯ ರೈಲ್ವೆ ಪ್ಲಾಟ್‍ಫಾರ್ಮ್ ಸೇರಿದಂತೆ ವಿವಿಧ ಯೋಜನೆಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಕೇಂದ್ರ ಚುನಾವಣಾ ಆಯುಕ್ತರಿಂದ ಚುನಾವಣೆ ಪೂರ್ವ ತಯಾರಿ ಪರಿವೀಕ್ಷಣೆ

ಐಐಟಿ-ಧಾರವಾಡ ಕ್ಯಾಂಪಸ್ ಹೊರಗೆ ಮೈದಾನದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಮೋದಿ ಅವರು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಿರ್ಮಿಸಲಾದ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‍ಫಾರ್ಮ್‍ನ್ನು ಉದ್ಘಾಟಿಸಲಿದ್ದಾರೆ.ನಂತರ ತುಪ್ಪರಿಹಳ್ಳ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

250 ಕೋಟಿ ರೂ.ಗಳ ಜಯದೇವ ಹೃದ್ರೋಗ ಸಂಸ್ಥೆ ಮತ್ತು 144 ಗ್ರಾಮ ಪಂಚಾಯಿತಿಗಳಿಗೆ ನಲ್ಲಿ ನೀರು ಒದಗಿಸುವ 1,200 ಕೋಟಿ ರೂ.ಗಳ ಜಲಜೀವನ್ ಮಿಷನ್‍ಗೆ ಶಂಕುಸ್ಥಾಪನೆ, 42 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ 295 ವಿವೇಕ್ ತರಗತಿ ಕೊಠಡಿಗಳನ್ನು ಉದ್ಘಾಟನೆ ನಂತರ ಸ್ಮಾರ್ಟ್ ಸಿಟಿ ಯೋಜನೆಯಡಿ 353 ಕೋಟಿ ರೂ. ವೆಚ್ಚದ 15 ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ.

ಹುಬ್ಬಳ್ಳಿಯಲ್ಲಿ 166 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಹೈಟೆಕ್ ಕ್ರೀಡಾ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿರುವ ಮೋದಿ, ಹುಬ್ಬಳ್ಳಿ-ಹೊಸಪೇಟೆ ರೈಲು ಮಾರ್ಗ ವಿದ್ಯುದೀಕರಣ ಯೋಜನೆಯನ್ನು ಕೂಡ ಉದ್ಘಾಟಿಸಲಿದ್ದಾರೆ. ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಸಮಾವೇಶಕ್ಕೆ ಧಾರವಾಡ ಜಿಲ್ಲೆಯಿಂದಲೇ ಎರಡು ಲಕ್ಷಕ್ಕೂ ಅಕ ಜನರು ಜಮಾಯಿಸುವ ನಿರೀಕ್ಷೆ ಇದೆ.

PM Modi, hold, roadshow, Mandya,

Articles You Might Like

Share This Article