ದಿಯೋಘರ್,ಜು.12- ಪ್ರಧಾನಿ ನರೇಂದ್ರ ಮೋದಿ ಅವರು ಜಾರ್ಖಂಡ್ನಲ್ಲಿಂದು ದಿಯೋಘರ್ ವಿಮಾನ ನಿಲ್ದಾಣ ಉದ್ಘಾಟಿಸುತ್ತಿದ್ದಾರೆ. ಅಲ್ಲದೆ 16,800 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸಲಿದ್ದಾರೆ.
ದಿಯೋಘರ್ನಲ್ಲಿ ನೂತನ ವಿಮಾನ ನಿಲ್ದಾಣ ಸೇರಿದಂತೆ 16,800 ಕೋಟಿ ರೂ.ಗೂ ಅಧಿಕ ಮೊತ್ತದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ ರಾಜಧಾನಿ ಪಾಟ್ನಾಕ್ಕೆ ತೆರಳಲಿದ್ದಾರೆ.
ಇದಕ್ಕೂ ಮುನ್ನ ಮಧ್ಯಾಹ್ನ 2.20ರ ಸುಮಾರಿಗೆ ಜಾರ್ಖಂಡ್ನಲ್ಲಿರುವ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಬಾಬಾ ಬೈದ್ಯನಾಥ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಸಂಜೆ 6 ಗಂಟೆಗೆ ಬಿಹಾರ ವಿಧಾನಸಭೆಯ ಶತಮಾನೋತ್ಸವ ಸಮಾರಂಭದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ದಿಯೋಘರ್ ವಿಮಾನ ನಿಲ್ದಾಣವು ಜಾರ್ಖಂಡ್ನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. 2018ರ ಮೇ 25ರಂದು ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇಂದು ನಿಲ್ದಾಣ ಉದ್ಘಾಟನೆ ನೆರವೇರಿಸುತ್ತಿದ್ದಾರೆ.
2014ರ ಮೊದಲು ಭಾರತದಲ್ಲಿ ಕೇವಲ 74 ವಿಮಾನ ನಿಲ್ದಾಣಗಳಿದ್ದವು ಎಂದು ಹೇಳಲಾಗುತ್ತಿದೆ. ಅದೇ ಸಮಯದಲ್ಲಿ, ಬಿಜೆಪಿಯ ನರೇಂದ್ರ ಮೋದಿ ಸರ್ಕಾರದ ನಂತರ, ಏಪ್ರಿಲ್ 2022ರ ವೇಳೆಗೆ ಭಾರತದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ 140ಕ್ಕೆ ಏರಿದೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೇ ಅವರು ದಿಯೋಘರ್ನ ಏಮ್ಸ್ನಲ್ಲಿ ಒಳರೋಗಿ ವಿಭಾಗ ಮತ್ತು ಆಪರೇಷನ್ ಥಿಯೇಟರ್ ಸೇವೆಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಪ್ರಧಾನಿ ಮೋದಿ ಅವರು 2018ರ ಮೇ 25ರಲ್ಲಿ ಏಮ್ಸ್ಗೆ ಶಂಕುಸ್ಥಾಪನೆ ಮಾಡಿದ್ದರು. ವರದಿಯೊಂದರ ಪ್ರಕಾರ ಕಳೆದ ಎಂಟು ವರ್ಷಗಳಲ್ಲಿ ಮೋದಿ ಸರ್ಕಾರದಲ್ಲಿ 16 ಏಮ್ಸ್ಗಳಿಗೆ ಅನುಮೋದನೆ ನೀಡಲಾಗಿದೆ.
ಅದೇ ಸಮಯದಲ್ಲಿ, 2014ರ ಮೊದಲು ದೇಶದಲ್ಲಿ ಕೇವಲ ಏಳು ಏಮ್ಸ್ ಆಸ್ಪತ್ರೆಗಳು ಇದ್ದವು ಎಂದು ಹೇಳಲಾಗಿದೆ.
ಇಂದು ಜಾರ್ಖಂಡ್ ಮತ್ತು ಬಿಹಾರಕ್ಕೆ ಭೇಟಿ ನೀಡಲು ನಾನು ತುಂಬಾ ಎದುರು ನೋಡುತ್ತಿದ್ದೇನೆ ಎಂದು ಅವರು ಪ್ರಧಾನಿಗಳು ಟ್ವೀಟ್ನಲ್ಲಿ ತಿಳಿಸಿದ್ದಾರೆ.