ರಾಜ್ಯದಲ್ಲಿ ಮೋದಿ ಅಭಿವೃದ್ಧಿ ನೆಪ.. ರಾಜಕೀಯ ಲಾಭದ ಜಪ..

Social Share

ಬೆಂಗಳೂರು,ನ.11-… ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವ ಸಂದರ್ಭದಲ್ಲೇ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಒಂದು ದಿನದ ಭೇಟಿಗಾಗಿ ರಾಜ್ಯಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಆಗಮನ ರಾಜ್ಯದಲ್ಲಿ ಸುನಾಮಿಯನ್ನೇ ಸೃಷ್ಟಿಸಿದೆ.

ಮೇಲ್ನೋಟಕ್ಕೆ ಇದೊಂದು ಸರ್ಕಾರಿ ಕಾರ್ಯಕ್ರಮ ಎಂದು ಹೇಳಲಾಗಿತ್ತಾದರೂ ಆಡಳಿತರೂಢ ಬಿಜೆಪಿ ಮೋದಿ ಅವರ ಕಾರ್ಯಕ್ರಮವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದು ಗುಟ್ಟಾಗಿ ಉಳಿಯಲಿಲ್ಲ.

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೋಲು ಗೆಲುವನ್ನು ನಿರ್ಧರಿಸಲಿರುವ ಒಕ್ಕಲಿಗ- ಕುರುಬ- ವಾಲ್ಮೀಕಿ ಸಮುದಾಯದ ಮತಗಳನ್ನು ಸೆಳೆಯಲು ಈ ಕಾರ್ಯಕ್ರಮವನ್ನು ಬಿಜೆಪಿ ಯಶಸ್ವಿಯಾಗಿ ಬಳಸಿಕೊಂಡಿತು.

ಮಿಷನ್ 150 ಗೆಲ್ಲಬೇಕಾದರೆ ಹಳೆ ಮೈಸೂರು ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ಥಾನಗಳನ್ನು ಗೆಲ್ಲಲು ಒಕ್ಕಲಿಗರ ಸ್ವಾಭಿಮಾನದ ಸಂಕೇತ ಎನಿಸಿರುವ ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ಲೋಕಾರ್ಪಣೆ ಮಾಡುವ ಮೂಲಕ ನಿಮ್ಮ ಜೊತೆಗೆ ಬಿಜೆಪಿ ಇರಲಿದೆ ಎಂಬ ಸಂದೇಶವನ್ನೂ ಸಹಾ ರವಾನಿಸಲಾಯಿತು.

ಈ ಹಿನ್ನಲೆಯಲ್ಲಿ ಮೋದಿ ಅವರ ಕಾರ್ಯಕ್ರಮಕ್ಕೆ ಹಳೆ ಮೈಸೂರು ಭಾಗದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮೈಸೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ ಸೇರಿದಂತೆ ಮತ್ತಿತರರ ಜಿಲ್ಲೆಗಳಿಂದ ದೊಡ್ಡ ಪ್ರಮಾಣದಲ್ಲಿ ಕಾರ್ಯಕರ್ತರನ್ನು ಕರೆತರಲಾಗಿತ್ತು.

ಇತ್ತೀಚೆಗಷ್ಟೇ ಪರಿಶಿಷ್ಟ ವರ್ಗಗಳ ಸಮುದಾಯದ ಮೀಸಲಾತಿಯನ್ನು ಹೆಚ್ಚಿಸಲಾಗಿತ್ತು. ಹೆಚ್ಚಿನ ಪ್ರಮಾಣದಲ್ಲಿ ಇರುವ ವಾಲ್ಮೀಕಿ ಸಮುದಾಯವನ್ನು ಸೆಳೆಯಲು ಬಿಜೆಪಿ, ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆಗೆ ಮೋದಿ ಅವರ ಕೈಯಿಂದ ಮಾಲಾರ್ಪಣೆ ಮಾಡಿಸಿ ಮತಬುಟ್ಟಿಗೆ ಕೈ ಹಾಕಿದೆ.

ಮುಂಬೈ-ಗೋವಾ ಹೆದ್ದಾರಿಯ ಸೇತುವೆ ಕೆಳಗೆ ಸ್ಪೋಟಕ ಪತ್ತೆ

ಕಾಂಗ್ರೆಸ್ ಪಕ್ಷದ ಬೆನ್ನಿಗೆ ನಿಂತಿರುವ ಕುರುಬ ಸಮುದಾಯದ ಮತಗಳನ್ನು ವಿಭಜಿಸಲು ಕನಕ ಜಯಂತಿ ದಿನವೇ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸೂಚಿಸಿದ್ದರ ಹಿಂದೆ ಬಿಜೆಪಿಯ ರಾಜಕೀಯ ಲೆಕ್ಕಾಚಾರ ಅಡಗಿದೆ ಎನ್ನಲಾಗಿದೆ.

ಮೋದಿಯವರು ಬೆಂಗಳೂರಿಗೆ ಆಗಮಿಸಿದ್ದು ಬಿಜೆಪಿ ಕಾರ್ಯಕರ್ತರಲ್ಲೂ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು. ಬೆಳಗ್ಗೆ 9 ಗಂಟೆಗೆ ಸುಮಾರಿಗೆ ಬಂದ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಅರವಿಂದ ಲಿಂಬಾವಳಿ, ಸತೀಶ್ ರೆಡ್ಡಿ ಸೇರಿದಂತೆ ಬಿಜೆಪಿ ಮುಖಂಡರು ಅದ್ದೂರಿಯಾಗಿ ಬರಮಾಡಿಕೊಂಡರು.

ಎಚ್‍ಎಲ್ ವಿಮಾನ ನಿಲ್ದಾಣದಲ್ಲಿ ರಸ್ತೆ ಮೂಲಕ ಶಾಸಕರ ಭವನದಲ್ಲಿರುವ ಮಹರ್ಷಿ ವಾಲ್ಮೀಕಿ ಹಾಗೂ ಕನಕದಾಸರ ಪ್ರತಿಮೆ ಬಳಿಗೆ ಆಗಮಿಸಿದರು. ಆಗಮಿಸಿದ್ದ ಸಂದರ್ಭದಲ್ಲಿ ರಸ್ತೆಯ ಇಕ್ಕೆಲಗಳೆಲ್ಲೂ ಬಿಜೆಪಿ ಕಾರ್ಯಕರ್ತರು ಮೋದಿ ಪರವಾಗಿ ಜೈಕಾರ, ಹರ್ಷೋದ್ಘಾರಗಳನ್ನು ಕೂಗಿ ಬಿಜೆಪಿಗೆ ಬೆಂಬಲ ಸೂಚಿಸಿದರು.

ಕಾರ್ಯಕರ್ತರನ್ನು ಕಂಡ ಮೋದಿ ಕೂಡ ಕಾರಿನಿಂದಲೇ ಕೈ ಬೀಸಿದರು. ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ರೋಡ್ ಶೋ ಮೂಲಕ ಮೆಜೆಸ್ಟಿಕ್‍ನಲ್ಲಿರುವ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಶಾಸಕರ ಭವನದಿಂದ ಕೆಪಿಎಸ್‍ಸಿ, ಸಿಐಡಿ ಕಚೇರಿ, ಅರಮನೆ ರಸ್ತೆ, ಏಟ್ರಿಯಾ ಹೋಟೆಲ್, ಪ್ಯಾಲೇಸ್ ರಸ್ತೆ, ಶೇಷಾದ್ರಿ ರಸ್ತೆ, ಮಹಾರಾಣಿ ಕಾಲೇಜು ವೃತ್ತ, ಸ್ವಾತಂತ್ರ್ಯ ಉದ್ಯಾನವನದ, ಫೈರ್ ಸ್ಟೇಷನ್, ಆನಂದರಾವ್ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್ ಮೂಲಕ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದರು.

ಈ ಸಂದರ್ಭದಲ್ಲಿ ಮೋದಿ ಅವರ ಜೊತೆಗೆ ಬಿಜೆಪಿಯ ಕಾರ್ಯಕರ್ತರು ನಿರೀಕ್ಷೆಗೂ ಮೀರಿ ರಸ್ತೆಯ ಇಕ್ಕೆಲಗಳಲ್ಲಿ ಜಮಾವಣೆಗೊಂಡು ಮೋದಿ ಮೋದಿ, ಮೋದಿ, ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದರು.

ಒಂದು ರೀತಿಯಲ್ಲಿ ಇದು ಚುನಾವಣಾ ರ್ಯಾಲಿಯಂತೆ ಕಂಡುಬಂದಿತು. ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‍ಪ್ರೆಸ್, ಭವ್ಯಕಾಶಿ ರೈಲಿಗೆ ಹಸಿರು ನಿಶಾನೆ ತೋರಿದ ಬಳಿಕ ರಸ್ತೆ ಮಾರ್ಗವಾಗಿ ಹೆಬ್ಬಾಳದ ಭಾರತೀಯ ವಾಯುಪಡೆ ಕೇಂದ್ರಕ್ಕೆ ಕಾರಿನ ಮೂಲಕ ಆಗಮಿಸಿ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಆಗಮಿಸಿದರು.

ಚೆನ್ನೈ- ಮೈಸೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಮೋದಿ ಚಾಲನೆ

ಟರ್ಮಿನಲ್-2 ಉದ್ಘಾಟನೆ ನೆರವೇರಿಸಿ ನೇರವಾಗಿ ನಾಡಪ್ರಭು ಕೆಂಪೇಗೌಡ ಪ್ರತಿಮೆ ಸ್ಥಾಪನೆಯಾಗಿರುವ ಭುವನಹಳ್ಳಿ ಬಳಿ ಪ್ರಗತಿ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿ ಬಳಿಕ ಸಾರ್ವಜನಿಕ ಸಮಾರಂಭ ನಡೆಯುವ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಪ್ರಧಾನಿಗೆ ಭವ್ಯ ಸ್ವಾಗತ ಕೋರಲಾಯಿತು.

ಒಂದು ಕ್ಷಣ ವೇದಿಕೆಯಲ್ಲಿ ಮಿಂಚಿನ ಸಂಚಲ ಉಂಟಾಯಿತು. ಇಲ್ಲಿಯೂ ಕೂಡ ಕಾರ್ಯಕರ್ತರು ಜೈಕಾರ, ಚಪ್ಪಾಳೆ, ಶಿಳ್ಳೆ ಹಾಕಿ ಮೋದಿ ಮೋದಿ ಎಂದು ಕೂಗುತ್ತಿದ್ದರು. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಬಿಜೆಪಿ ಕಾರ್ಯಕರ್ತರಲ್ಲಿ ಸ್ವಲ್ಪ ಮಟ್ಟಿಗೆ ಆತ್ಮಸ್ಥೈರ್ಯ ಕುಂದಿತ್ತು. ಮೋದಿ ಆಗಮನ ಹಾಗೂ ಕಾರ್ಯಕ್ರದಲ್ಲಿ ಸೇರಿದ್ದ ಜನಸ್ತೋಮ ಇತರೆ ಅಂಶಗಳು ಪಕ್ಷದ ಕಾರ್ಯಕರ್ತರ ಮನೋಸ್ಥೈರ್ಯ ಹೆಚ್ಚಿಸಿದೆ.

ನರೇಂದ್ರ ಮೋದಿ ರಾಜ್ಯ ಭೇಟಿ ಮುಂದಿನ ಚುನಾವಣೆಯ ದಿಕ್ಕನ್ನೇ ಬದಲಾಯಿಸುವ ನಿರೀಕ್ಷೆಯೊಂದಿಗೆ ರಾಜ್ಯ ಬಿಜೆಪಿ ಮತ್ತಷ್ಟು ಉತ್ಸಾಹದಿಂದ ಚುನಾವಣೆ ಎದುರಿಸಲು ಪಕ್ಷ ಸಂಘಟನೆಗೆ ಅಣಿಯಾಗಿದೆ.

ಕೇಂದ್ರ ಹಾಗೂ ರಾಜ್ಯ ಸರಕಾರದ ಅಭಿವೃದ್ಧಿ ಯೋಜನೆ, ಜನಪರ ಕಾರ್ಯಕ್ರಮಗಳ ಬಗ್ಗೆ ಮನೆ ಮನೆಗೆ ತಿಳಿಸಬೇಕೆಂಬ ಪ್ರಧಾನಿ ಮೋದಿ ಸೂಚನೆ ಹಿನ್ನೆಲೆಯಲ್ಲಿ ಯೋಜಿತ ರೀತಿಯಲ್ಲಿ ಜನ ಜಾಗೃತಿ ಅಭಿಯಾನ, ಪ್ರಚಾರ ಕಾರ್ಯ ಕೈಗೊಳ್ಳಲು ಬಿಜೆಪಿ ಸಜ್ಜಾಗಿದೆ.

ದಕ್ಷಿಣ ಭಾರತದಲ್ಲಿ ಬಿಜೆಪಿ ವಿಸ್ತರಣೆ ಹಾಗೂ ಪಕ್ಷ ಬಲವರ್ಧನೆ ದೃಷ್ಟಿಯಿಂದ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಮುಖ್ಯವಾಗಿದೆ. ಆ ಕಾರಣಕ್ಕಾಗಿಯೇ ಮೋದಿ ಸೇರಿದಂತೆ ಬಿಜೆಪಿ ರಾಷ್ಟ್ರೀಯ ನಾಯಕರ ರಾಜ್ಯ ಭೇಟಿ ಹೆಚ್ಚಾಗುತ್ತಿದೆ.

ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರನ ಎನ್‌ಕೌಂಟರ್‌

ಆರು ಬೃಹತ್ ಸಮಾವೇಶ:
ಯುವ, ರೈತ, ಮಹಿಳಾ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಒಬಿಸಿ ಸಮಾವೇಶ ಆಯೋಜಿಸಲು ಸಿದ್ಧತೆ ನಡೆದಿದೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವ ರಾಜನಾಥ ಸಿಂಗ್ ಇತರೆ ರಾಷ್ಟ್ರೀಯ ನಾಯಕರನ್ನು ಕರೆಸುವ ಬಗ್ಗೆ ರಾಜ್ಯ ಬಿಜೆಪಿ ಚಿಂತನೆ ನಡೆಸಿದೆ.

ಈ ತಿಂಗಳಿನಿಂದ ಡಿಸೆಂಬರ್ ಅಂತ್ಯಕ್ಕೆ 50 ಕ್ಷೇತ್ರಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ, ಸಮಾವೇಶ ನಡೆಯಲಿವೆ. ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಇತರೆ ನಾಯಕರ ನೇತೃತ್ವದಲ್ಲಿ ಸಭೆ, ಸಮಾವೇಶಗಳು ನಡೆಯಲಿವೆ.

ಒಟ್ಟಾರೆ ಪ್ರತಿ ತಿಂಗಳು ಮೋದಿ ಅವರನ್ನು ರಾಜ್ಯಕ್ಕೆ ಆಹ್ವಾನಿಸುವ ಮೂಲ ಬಿಜೆಪಿ ವಿಧಾನಸಭೆ ಚುನಾವಣೆಗೆ ರಣ ಕಹಳೆ ಮೊಳಗಿಸಲು ಬಿಜೆಪಿ ಸಜ್ಜಾಗಿದೆ.

Articles You Might Like

Share This Article