ನಾಳೆ ಷಂಷಾಬಾದ್‍ನಲ್ಲಿ ಶ್ರೀ ರಾಮಾನುಜಾಚಾರ್ಯರ ಬೃಹತ್ ಪ್ರತಿಮೆ ಅನಾವರಣ

Social Share

ಹೈದರಾಬಾದ್, ಫೆ.4- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆಬ್ರವರಿ 5ರಂದು ಇಲ್ಲಿನ ಷಂಷಾಬಾದ್‍ನಲ್ಲಿ ನಿರ್ಮಿಸಲಾಗಿರುವ ಭಕ್ತಿಸಂತ ಶ್ರೀರಾಮಾನುಜಾಚಾರ್ಯ ಅವರ ಸ್ಮಾರಕವಾಗಿ 216 ಅಡಿ ಎತ್ತರದ ಸಮಾನತೆಯ ಪ್ರತಿಮೆಯನ್ನು ದೇಶಕ್ಕೆ ಸಮರ್ಪಣೆ ಮಾಡಲಿದ್ದಾರೆ. ಶ್ರೀ ರಾಮಾನುಜರು ನಂಬಿಕೆ, ಜಾತಿ, ಮತ ಸೇರಿದಂತೆ ಬದುಕಿನ ಸಕಲ ಸ್ತರಗಳಲ್ಲಿ ಸಮಾನತೆಯ ಚಿಂತನೆಯನ್ನು ಪ್ರರ್ವಸಿದವರು.
ಈ ಪ್ರತಿಮೆಯನ್ನು ಪಂಚಲೋಹ (ಚಿನ್ನ, ಬೆಳ್ಳಿ, ತಾಮ್ರ, ಕಂಚು ಮತ್ತು ಸತುವು) ಗಳಿಂದ ನಿರ್ಮಿಸಲಾಗಿದೆ. ಇದು ಪ್ರಪಂಚದ ಅತಿ ಎತ್ತರದ ಕುಳಿತಿರುವ ಭಂಗಿಯ ಲೋಹದ ಪ್ರತಿಮೆಗಳಲ್ಲಿ ಒಂದಾಗಿದೆ. `ಭದ್ರವೇದಿ’ ಹೆಸರಿನ 54 ಅಡಿ ಎತ್ತರದ ಮೂಲ ಕಟ್ಟಡದ ಮೇಲೆ ಈ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಈ ಕಟ್ಟಡದಲ್ಲಿ ಹಲವು ಅಂತಸ್ತುಗಳಿದ್ದು, ಅವುಗಳಲ್ಲಿ ವೈದಿಕ ಡಿಜಿಟಲ್ ಗ್ರಂಥಾಲಯ ಮತ್ತು ಸಂಶೋಧನಾ ಕೇಂದ್ರ, ಪ್ರಾಚೀನ ಭಾರತೀಯ ಗ್ರಂಥಗಳು, ಒಂದು ರಂಗಮಂದಿರ, ಶ್ರೀರಾಮಾನುಜಾಚಾರ್ಯರ ಕೃತಿಗಳನ್ನು ವಿವರಿಸುವ ಒಂದು ಶೈಕ್ಷಣಿಕ ಗ್ಯಾಲರಿ ಇರಲಿವೆ ಎಂದು ಪ್ರಧಾನಮಂತ್ರಿಯವರ ಕಾರ್ಯಾಲಯ ತಿಳಿಸಿದೆ.
ಶ್ರೀ ರಾಮಾನುಜಾಚಾರ್ಯ ಆಶ್ರಮದ ಶ್ರೀ ಚಿನ್ನಜೀಯರ್ ಸ್ವಾಮೀಜಿ ಈ ಪ್ರತಿಮೆಯ ಪರಿಕಲ್ಪನೆ ಮಾಡಿದ್ದಾರೆ. ಪ್ರತಿಮೆ ಅನಾವರಣ ಕಾರ್ಯಕ್ರಮ ದಲ್ಲಿ ರಾಮಾನುಜಾಚಾರ್ಯರ ಜೀವನಯಾನ ಮತ್ತು ಬೋಧನೆಗಳ ಚಿತ್ರಣ ನೀಡುವ `ತ್ರೀ ಡಿ’ ಪ್ರಸ್ತುತಿ ಇರುತ್ತದೆ. ಮೋದಿ ಅವರು 108 ದಿವ್ಯ ದೇಶಮ್‍ಗಳು ಎಂದು ಕರೆಯಲಾಗುವ, ಮೂರ್ತಿಯ ಸುತ್ತ ಆಲಂಕಾರಿಕವಾಗಿ ಕೆತ್ತಲಾದ ದೇವಾಲಯಗಳಿಗೂ ಭೇಟಿ ನೀಡಲಿದ್ದಾರೆ.
ಶ್ರೀ ರಾಮಾನುಜಾಚಾರ್ಯರು ರಾಷ್ಟ್ರೀಯತೆ, ಲಿಂಗ, ಜನಾಂಗ, ಜಾತಿ ಅಥವಾ ಮತಗಳನ್ನು ಲೆಕ್ಕಿಸದೆ ಸರ್ವಜನರ ಏಳಿಗೆಗಾಗಿ ವಿಶ್ರಾಂತಿರಹಿತರಾಗಿ ಕಾರ್ಯನಿರ್ವಹಿಸಿದ ಸಂತರಾಗಿದ್ದಾರೆ.
ಈ ಪ್ರತಿಮೆಯ ಉದ್ಘಾಟನೆಯು ಶ್ರೀ ರಾಮಾನುಜಾಚಾರ್ಯರ 1000ನೇ ಜನ್ಮದಿನೋತ್ಸವದ 12 ದಿನಗಳ ಆಚರಣೆಯ ಒಂದು ಭಾಗವಾಗಿದೆ.
ಶ್ರೀ ರಾಮಾನುಜಾಚಾರ್ಯರ ಸಹಸ್ರಾಬ್ಧಿ ಉತ್ಸವ ಇಲ್ಲಿನ ಷಂಷಾಬಾದ್‍ನ ಶ್ರೀರಾಮನಗರಂನ ಜೀವಾ ಕ್ಯಾಂಪಸ್‍ನಲ್ಲಿ ಫೆಬ್ರವರಿ 2ರಿಂದಲೇ ಆರಂಭವಾಗಿದ್ದು, ಫೆ.14ರಂದು ಸಮಾರೋಪಗೊಳ್ಳಲಿದೆ.

Articles You Might Like

Share This Article