ನಾಳೆ ಬೆಂಗಳೂರಲ್ಲಿ ಮೋದಿ ಮೇನಿಯಾ, ಇಲ್ಲಿದೆ ಕಾರ್ಯಕ್ರಮಗಳ ಕಂಪ್ಲೀಟ್ ಡೀಟೇಲ್ಸ್

Social Share

ಬೆಂಗಳೂರು,ನ.10- ನಾಡ ಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ, ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಉದ್ಘಾಟನೆ, ವಂದೇ ಭಾರತ್ ರೈಲಿಗೆ ಚಾಲನೆ, ಕನಕ ಮತ್ತು ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಬಹು ದಿನಗಳ ನಂತರ ಪ್ರಧಾನಿ ನಗರಕ್ಕೆ ಆಗಮಿಸುತ್ತಿರುವುದರಿಂದ ಬಿಜೆಪಿ ಪಾಳಯದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದೆ. ಚುನಾವಣ ವರ್ಷವಾಗಿರುವುದರಿಂದ ಪ್ರಧಾನಿ ಕಾರ್ಯಕ್ರಮವನ್ನು ಬಿಜೆಪಿ ಸಂಪೂರ್ಣವಾಗಿ ರಾಜಕೀಯ ಕಾರ್ಯಕ್ರಮವನ್ನಾಗಿ ಮಾಡಿಕೊಂಡಿದೆ. ವಿಶೇಷವಾಗಿ ಒಕ್ಕಲಿಗ ಮತಗಳನ್ನು ಸೆಳೆಯುವ ತಂತ್ರವನ್ನು ಸಹ ಹೆಣೆದಿದೆ.

ನಾಳೆ ಬೆಳಗ್ಗೆ 6.20ಕ್ಕೆ ನವದೆಹಲಿಯಿಂದ ಭಾರತೀಯ ವಾಯುಪಡೆಗೆ ಸೇರಿದ ವಿಮಾನದಲ್ಲಿ ಹೊರಡಲಿರುವ ಮೋದಿ ಅವರು ಬೆಳಗ್ಗೆ 9 ಗಂಟೆಗೆ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ.

ಪ್ಯಾಲೆಸ್ತೇನ್ ಮೂಲದ ಡ್ರಗ್ ಪೆಡ್ಲರ್ ಬಂಧನ, 25 ಲಕ್ಷ ಮೌಲ್ಯದ ಮಾದಕ ವಸ್ತು ಜಪ್ತಿ

ಬೆಳಗ್ಗೆ 9.5ಕ್ಕೆ ಹೆಲಿಕಾಫ್ಟರ್ ಮೂಲಕ ಮೇಕ್ರಿ ವೃತ್ತದಲ್ಲಿರುವ ಭಾರತೀಯ ವಾಯುಪಡೆ ಕೇಂದ್ರಕ್ಕೆ ಆಗಮಿಸಿ 9.45ಕ್ಕೆ ವಿಧಾನಸೌಧಕ್ಕೆ ಆಗಮಿಸುವರು. 9.45ರಿಂದ 9.55ರವರೆಗೆ ಕನಕದಾಸ ಮತ್ತು ವಾಲ್ಮೀಕಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ.

ವಿಧಾನಸೌಧದಿಂದ ಬೆಳಗ್ಗೆ 10 ಗಂಟೆಗೆ ಹೊರಟು 10.20ಕ್ಕೆ ಸಂಗೊಳ್ಳಿ ರೈಲ್ವೆ ನಿಲ್ದಾಣಕ್ಕೆ ಆಗಮಿಸುವ ಮೋದಿ ಅವರು, ಭಾರತ್ ಗೌರವ್ ಕಾಶಿ ದರ್ಶನದ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ.
ರೈಲ್ವೆ ನಿಲ್ದಾಣದಿಂದ 10.45ಕ್ಕೆ ಮೇಕ್ರಿ ವೃತ್ತದಲ್ಲಿರುವ ಎಎಫ್‍ಟಿಸಿಸಿ ಹೆಲಿಪ್ಯಾಡ್‍ಗೆ ಬರಲಿದ್ದಾರೆ. ಅಲ್ಲಿಂದ 11 ಗಂಟೆಗೆ ಹೆಲಿಕಾಫ್ಟರ್ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿಯಾಗಿ ನಿರ್ಮಾಣಗೊಂಡಿರುವ 2ನೇ ಟರ್ಮಿನಲ್‍ನ್ನು 11.25ರಿಂದ 11.30ಕ್ಕೆ ಉದ್ಘಾಟಿಸಲಿದ್ದಾರೆ. ಈ ಮೂಲಕ ದೆಹಲಿ ಮತ್ತು ಮುಂಬೈ ಹೊರತುಪಡಿಸಿದರೆ ಎರಡನೇ ಟರ್ಮಿನಲ್ ಹೊಂದಿದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಕೆಂಪೇಗೌಡ ವಿಮಾನ ನಿಲ್ದಾಣ ಪಾತ್ರವಾಗಲಿದೆ.

ಬೆಳಗ್ಗೆ 12 ಗಂಟೆಗೆ ವಿಮಾನ ನಿಲ್ದಾಣಕ್ಕೆ ತೆರಳುವ ಎಡಭಾಗದಲ್ಲಿ ನಿರ್ಮಿಸಿರುವ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಮೋದಿ ಅವರು ಅನಾವರಣಗೊಳಿಸಲಿದ್ದಾರೆ. 12.30ಕ್ಕೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಾಷಣ ಮಾಡಲಿದ್ದಾರೆ. 1.30ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತಮಿಳುನಾಡಿನ ಮಧುರೈಗೆ ತೆರಳಲಿದ್ದಾರೆ.

ಟಿ-20 ವಿಶ್ವಕಪ್ : ಫೈನಲ್ ಪ್ರವೇಶಿಸಿದ ಪಾಕ್

ಪ್ರಧಾನಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಭಾರೀ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಅವರು ಸಂಚರಿಸುವ ಮಾರ್ಗದ ರಸ್ತೆಗಳನ್ನು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿದೆ. ಅಲ್ಲದೆ, ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಸಹ ಬಂದ್ ಮಾಡಲಾಗಿದೆ.

2023ಕ್ಕೆ ಏನು ಲಾಭ?: ಕೆಂಪೇಗೌಡರ ಪ್ರತಿಮೆ ನಿರ್ಮಾಣದ ಹಿಂದೆ ರಾಜಕೀಯ ಉದ್ದೇಶ ಅಂಶ ಇದ್ದೇ ಇದೆ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಬಲಗೊಳಿಸುವ ಕಾರ್ಯಕ್ಕೆ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸಹಾಯವಾಗಬಹುದು ಎಂಬ ಲೆಕ್ಕಾಚಾರವಿದೆ.

2023ರ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಚುನಾವಣೆಗೆ ಐದಾರು ತಿಂಗಳು ಇರುವಾಗಲೇ ಪ್ರಧಾನಿ ಅವರಿಂದ ಪ್ರತಿಮೆಯನ್ನು ಅನಾವರಣ ಮಾಡಿಸುತ್ತಿದೆ. ಜೆಡಿಎಸ್-ಕಾಂಗ್ರೆಸ್ ಬುಟ್ಟಿಯಲ್ಲಿರುವ ಒಕ್ಕಲಿಗ ಮತಗಳಿಗೆ ಕೈ ಹಾಕಿರುವ ಬಿಜೆಪಿ, ಕೆಂಪೇಗೌಡರ ಪ್ರತಿಮೆ ಮೂಲಕ ಆ ಸಮುದಾಯದ ಓಲೈಕೆಗೆ ಪ್ಲಾನ್ ಮಾಡಿದೆ ಎಂದು ಹೇಳಲಾಗಿದೆ.

Articles You Might Like

Share This Article