ನಾಡಪ್ರಭು ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆಗೆ ಭರದ ಸಿದ್ಧತೆ

Social Share

ಬೆಂಗಳೂರು,ನ.8- ಇದೇ 11ರಂದು ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಾಣವಾಗಿರುವ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆ ಅನಾವರಣಗೊಳ್ಳಲಿದೆ.

ಕೆಂಪೇಗೌಡ ಅವರ ಇತಿಹಾಸ, ಸಾಧನೆ ಮತ್ತು ಪರಂಪರೆಯನ್ನು ಸಾರುವ ಆಕರ್ಷಕ ಕೆಂಪೇಗೌಡ ಥೀಮ್ ಪಾರ್ಕ್ ಕೂಡಾ ಅಂದೇ ಲೋಕಾರ್ಪಣೆಗೊಳ್ಳುತ್ತಿದೆ. ಥೀಮ್ ಪಾರ್ಕ್ ಸ್ಥಾಪನೆಗೆ ಸರಕಾರವು 30 ಕೋಟಿ ವಿನಿಯೋಗಿಸುತ್ತಿದೆ. 23 ಎಕರೆಯಲ್ಲಿ ಹೆರಿಟೇಜ್ ಪಾರ್ಕ್ ನಿರ್ಮಾಣವಾಗಿದೆ.

64 ಕೋಟಿ ರೂ. ವೆಚ್ಚದಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಕಂಚಿನ ಪ್ರತಿಮೆಯ ಭಾಗವಾದ ಖಡ್ಗ 4 ಸಾವಿರ ಕೆಜಿ ತೂಕ ಹೊಂದಿದೆ. ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಆಶಯಗಳನ್ನು ಸಂಕೇತಿಸುವಂತೆ ಪ್ರಗತಿ ಪ್ರತಿಮೆ ಎಂದು ನಾಮಕರಣ ಮಾಡಲಾಗುತ್ತಿದೆ.

ಮೊದಲಿಗೆ ಶಾಸಕರ ಭವನದ ಆವರಣದಲ್ಲಿ ಕನಕದಾಸ ಪುತ್ಥಳಿಗೆ ಮಾಲಾರ್ಪಣೆ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲಿಗೆ ಚಾಲನೆ ಸಿಗಲಿದೆ. ಇದೇ ವೇಳೆ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಿರುವ ಟರ್ಮಿನಲ್-2 ಲೋಕಾರ್ಪಣೆಗೊಳ್ಳುತ್ತಿದೆ.

ಸತೀಶ್ ಜಾರಕಿಹೊಳಿ ಹೇಳಿಕೆ ಪೂರ್ವ ಯೋಜಿತ ಮತ್ತು ವ್ಯವಸ್ಥಿತ: ಸಿಎಂ ಬೊಮ್ಮಾಯಿ

ಅಂದಿನ ಕಾರ್ಯಕ್ರಮಗಳಿಗೆ ಪ್ರಧಾನಿ ನರೇಂದ್ರಮೋದಿ ಆಗಮಿಸುತ್ತಿದ್ದು, ಅವರಿಗೆ ಗೌರವಪೂರ್ವಕವಾಗಿ ಮೈಸೂರು ಮಹಾರಾಜರು ಹಾಕಿಕೊಳ್ಳುತ್ತಿದ್ದ ಮಾದರಿಯ ಪೇಟವನ್ನು ಸಿದ್ದತೆ ಮಾಡಲಾಗಿದ್ದು, ಅದನ್ನು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯವರಿಗೆ ಹಸ್ತಾಂತರಿಸಲಾಗಿದೆ.

ಮೊದಲ ಬಾರಿಗೆ ಕೆಂಪೇಗೌಡ ಪೇಟ ತಯಾರಿ:
ಇದೇ ಮೊದಲ ಬಾರಿಗೆ ಕೆಂಪೇಗೌಡ ಪೇಟ ತಯಾರಿ ಮಾಡಲಾಗಿದ್ದು, ಕೆಂಪೇಗೌಡ ಪ್ರತಿಮೆಯಲ್ಲಿ ಇರುವಂತೆಯೇ ಪೇಟವನ್ನು ಹತ್ತು ದಿನಗಳ ಶ್ರಮಪಟ್ಟು ಸಿದ್ದಪಡಿಸಲಾಗಿದೆ. ಬೆಂಗಳೂರಿಗೆ ಆಗಮಿಸುವ ಪ್ರಧಾನಿಗಳಿಗೆ ಇದನ್ನು ತೊಡಿಸಿ ಗೌರವಿಸಲಾಗುತ್ತಿದೆ.

ಶಾಲೆಗಳಲ್ಲಿ ಪುನೀತ್ ಅಭಿನಯದ ಗಂಧದಗುಡಿ ಚಿತ್ರದ ಉಚಿತ ಪ್ರದರ್ಶನ ಏರ್ಪಡಿಸಿ

ಕೆಂಪೇಗೌಡ ಪ್ರತಿಮೆಯಲ್ಲಿ ಇರುವಂತೆಯೇ ಕೆಂಪು ಬಣ್ಣದ ಪೇಟ ಇದಾಗಿದ್ದು, ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್ ಹಾಗೂ ಕೆಂಪೇಗೌಡ ಅಭಿಮಾನಿ ಬಳಗದಿಂದ ಕೆಂಪೇಗೌಡ ಪೇಟ ತಯಾರು ಮಾಡಲಾಗಿದೆ. ಇದು ಬನಾರಸ್ ರೇಷ್ಮೆ, ಗರಿ, ಮುತ್ತುಗಳು ಸೇರಿ ಕುಸುರಿ ಕೆಲಸದಿಂದ ಕಂಗೊಳಿಸುತ್ತಿದೆ. ಆದಿ ಚುಂಚನಗಿರಿ ಜಗದ್ಗುರು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅನುಮತಿ ಪಡೆದು ಇದನ್ನು ತಯಾರಿಸಲಾಗಿದೆ.

ಮೈಸೂರಿನ ನಮ್ಮೂರು ನಮ್ಮೊರು ಸಮಾಜ ಸೇವಾ ಟ್ರಸ್ಟ್‍ನ ಸತೀಶ್ ಗೌಡ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ ಅವರ ಸಲಹೆಯಂತೆ ನಂದನ್ ಸಿಂಗ್ ವಿನೂತನ ಪೇಟವನ್ನು ಸಿದ್ಧಪಡಿಸಿದ್ದಾರೆ. ಯೋಗ ದಿನಾಚರಣೆಗೆ ಮೋದಿ ಅವರು ಮೈಸೂರಿಗೆ ಭೇಟಿ ನೀಡಿದ ಸಮಯದಲ್ಲೂ ನಂದನ್ ಸಿಂಗ್ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಪೇಟ ನೀಡಿ ಗಮನ ಸೆಳೆದಿದ್ದರು.

ಮುಂಭಾಗದಲ್ಲಿ ರಾಷ್ಟ್ರೀಯ ಪಕ್ಷಿ ನವಿಲು ಮಾದರಿ ಚಿನ್ನದ ಬಣ್ಣದ ಡಾಲರ್ ಪೇಟದ ಆಕರ್ಷಣೆಯನ್ನು ಹೆಚ್ಚಿಸಿದೆ. ಇಕ್ಕೆಲಗಳಲ್ಲಿ ಇರುವ ಮಣಿಹಾರ ಪೇಟಕ್ಕೊಂದು ಮೆರುಗು ಹೆಚ್ಚಿಸಿದೆ. ಮೋದಿಗಾಗಿ ಮಾಡಿರುವ ಪೇಟವನ್ನು ಕಲಾವಿದ ನಂದನ್ ಸಿಂಗ್ ಮುಖ್ಯಮಂತ್ರಿಗಳಿಗೆ ಈಗಾಗಲೇ ಹಸ್ತಾಂತರಿಸಿದ್ದಾರೆ.

ಪ್ರಸಿದ್ಧ ಕಲಾವಿದ ರಾಮ್ ಎ.ಸುತಾರ ಅವರು 108 ಆಡಿ ಎತ್ತರದ ಕೆಂಪೇಗೌಡರ ಬೃಹತ್ ಪ್ರತಿಮೆಯನ್ನು ನಿರ್ಮಿಸಿದ್ದು, ಅವರು ವಿನ್ಯಾಸಗೊಳಿಸಿರುವ ಪೇಟದ ಮಾದರಿಯಲ್ಲೇ ಪೇಟವನ್ನೂ ಸಿದ್ಧಪಡಿಸಲಾಗಿದೆ.
ಕೆಂಪೇಗೌಡರು ಕೈಯಲ್ಲಿ ಹಿಡಿದಿರುವ ಕತ್ತಿಯು (ಖಡ್ಗ) ಕ್ಷಾತ್ರಬಲವನ್ನು ಪ್ರತಿನಿಸುತ್ತಿದ್ದು, ನವಭಾರತಕ್ಕೊಂದು ಸಂಕೇತವಾಗಿದೆ. ವಿಮಾನ ನಿಲ್ದಾಣದ ಮೂಲಕ ಹೋಗುವವರು ಮತ್ತು ಇಲ್ಲಿಗೆ ಬಂದಿಳಿಯುವವರಿಗೆ ಕೆಂಪೇಗೌಡರ ಬೃಹದಾಕಾರದ ಪ್ರತಿಮೆಯ ನೋಟವೇ ಒಂದು ದಿವ್ಯ ಅನುಭೂತಿ ಮಾಡುವಂತಿರಬೇಕು ಎಂಬುದು ಸರಕಾರದ ಉದ್ದೇಶವಾಗಿದೆ.

ಹಿಂದುತ್ವಕ್ಕೆ ಅಪಮಾನವಾದಾಗ ನಾ ಮೌನಿಯಾಗಲಾರೆ: ಸಚಿವ ಸುನಿಲ್ ಕುಮಾರ್

ಥೀಮ್ ಪಾರ್ಕ್ ವಿಶೇಷ: 23 ಎಕರೆ ವಿಸ್ತೀರ್ಣದಲ್ಲಿ ಥೀಮ್ ಪಾರ್ಕ್ ಎರಡು ಹಂತಗಳಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಮೊದಲ ಹಂತದ ಕಾಮಗಾರಿ ಇನ್ನು ಒಂಬತ್ತು ತಿಂಗಳಲ್ಲಿ ಮುಗಿಯಲಿದೆ.
ಕೆಂಪೇಗೌಡರ ಜೀವನ, ಸಾಧನೆ ಮತ್ತು ಭಾವೈಕ್ಯದ ಸಂದೇಶಗಳ ಪ್ರತಿಕೃತಿಯಾಗಲಿರುವ ಥೀಮ್ ಪಾರ್ಕ್ ಅಭಿವೃದ್ಧಿಗೆ 30 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಇದು ಜಾಗತಿಕ ಮಟ್ಟದ ಪ್ರವಾಸಿ ಆಕರ್ಷಣೆಯ ತಾಣ ಆಗಲಿದೆ.

ಒಟ್ಟು 23 ಎಕರೆ ಜಾಗದ ಪೈಕಿ ಮೊದಲ ಹಂತದಲ್ಲಿ 3 ಎಕರೆ 35 ಗುಂಟೆ ಪ್ರದೇಶದಲ್ಲಿ ಥೀಮ್ ಪಾರ್ಕ್ ತಲೆಯೆತ್ತಲಿದೆ. ಇದಕ್ಕೆ ಮುಖ್ಯಮಂತ್ರಿಗಳು 20 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ. ಇದು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯ ಮುಂಭಾಗದಲ್ಲಿ ಮೈದಾಳಲಿದೆ.

ಸಂಸದೆ ನವನೀತ್ ರಾಣಾ ಮತ್ತು ತಂದೆ ವಿರುದ್ಧ ಜಾಮೀನು ರಹಿತ ವಾರಂಟ್

ಇದರಲ್ಲಿ ಗುಣಮಟ್ಟದ ಆ್ಯಂಪಿ ಥಿಯೇಟರ್, ಪಾತ್ ವೇ, ಸುರಂಗ ನಿರ್ಮಾಣ, ಎವಿ ಎಕ್ಸಿಬಿಷನ್ ವ್ಯವಸ್ಥೆ, ತ್ರೀ-ಡಿ ಪ್ರೊಜೆಕ್ಷನ್, ಚಕ್ರಾಕಾರದ ಕಾರಂಜಿ, ಹೂದೋಟ, ವಿಐಪಿ ಲಾಂಜ್, ಕಿಯೋಸ್ಕ್, ವಿಶ್ರಾಂತಿ ಕೊಠಡಿಗಳು, ಅತ್ಯುತ್ತಮ ಹಾಸುಗಲ್ಲುಗಳು, ಪೆವಿಲಿಯನ್ ಗಳು, ಕಾಂಕ್ರೀಟ್ ತಡೆಗೋಡೆ ಇರಲಿವೆ.

ಈ ಕಾರ್ಯಕ್ರಮದಿಂದ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಹಾಗೂ ಸಂಚಾರ ವ್ಯವಸ್ಥೆಗೆ ಯಾವುದೇ ತೊಡಕು ಆಗದಂತೆ ಕಾರ್ಯಕ್ರಮ ಆಯೋಜಿಸುವಂತೆ ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Articles You Might Like

Share This Article