ಹೈದರಾಬಾದ್, ಫೆ.5- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೈದರಾಬಾದ್ ಸಮೀಪದ ಷಂಷಾಬಾದ್‍ನಲ್ಲಿ 11ನೆ ಶತಮಾನದ ವೈಷ್ಣವ ಸಂತ ಶ್ರೀರಾಮಾನುಜಾಚಾರ್ಯ ಅವರ 216 ಅಡಿ ಎತ್ತರದ ಪ್ರತಿಮೆಯನ್ನು ಇಂದು ಅನಾವರಣ ಮಾಡಲಿದ್ದಾರೆ.
ಹೈದರಾಬಾದ್‍ಗೆ ಪ್ರಧಾನಿಯವರ ಭೇಟಿಯನ್ನು ಕಳೆದ ತಿಂಗಳು ಪ್ರಕಟಿಸಲಾಗಿತ್ತು. ಶ್ರೀ ರಾಮಾನುಜಾಚಾರ್ಯ ಆಶ್ರಮದ ಚಿನ್ನ ಜೀಯರ್ ಸ್ವಾಮೀಜಿ ಕಳೆದ ವರ್ಷದ ಸೆಪ್ಟೆಂಬರ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ನಗರವನ್ನು ಸಂದರ್ಶಿಸುವಂತೆ ಆಹ್ವಾನಿಸಿದ್ದರು.
ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಮತ್ತು ದೇಶ-ವಿದೇಶಗಳ ಹಲವಾರು ಗಣ್ಯರನ್ನು ಪ್ರತಿಮೆಯ ಉದ್ಘಾಟನಾ ಸಮಾರಂಭಕ್ಕೆ ಆಮಂತ್ರಿಸಲಾಗಿದೆ.
ಉದ್ಘಾಟನೆ ಸಂಜೆ 5 ಗಂಟೆಗೆ ನಡೆಯಲಿದೆ ಎಂದು ಪ್ರಧಾನಿಯವರ ಕಚೇರಿ ತಿಳಿಸಿದೆ. ಪ್ರಧಾನಿ ಮೋದಿ ಅವರು ಪಟಾಂಚೇರುನಲ್ಲಿ ಇಂಟರ್ ನ್ಯಾಷನಲ್ ಕ್ರಾಪ್ಸ್ ರಿಸರ್ಚ್ ಇನ್‍ಸ್ಟಿಟ್ಯೂಟ್ ಫಾರ್ ದಿ ಸೆಮಿ-ಆರಿಡ್ ಟ್ರೋಪಿಕ್ಸ್ ಆವರಣಕ್ಕೂ ಭೇಟಿ ನೀಡಿ ಅದರ ಸ್ವರ್ಣ ಮಹೋತ್ಸವ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ.
