ಮಾರ್ಚ್ ತಿಂಗಳಲ್ಲಿ ಮತ್ತೆ ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮನ

Social Share

ಬೆಂಗಳೂರು,ಫೆ.13- ಶತಾಯ ಗತಾಯ ಕರ್ನಾಟಕದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕೆಂದು ದೃಢ ಸಂಕಲ್ಪ ಮಾಡಿರುವ ಪ್ರಧಾನಿ ನರೇಂದ್ರಮೋದಿ ಮತ್ತೆ ಮತ್ತೆ ರಾಜ್ಯಕ್ಕೆ ದಾಂಗುಡಿ ಇಡಲಿದ್ದಾರೆ.

ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಮಧ್ಯದ ಅವಯಲ್ಲಿ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳಿಗೆ ಚಾಲನೆ ಕೊಡಲು 4ರಿಂದ 5 ಬಾರಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ದೇಶದ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಂದಾಗಿರುವ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ಸ್ವತಃ ನರೇಂದ್ರ ಮೋದಿ ಅವರೇ ಉದ್ಘಾಟನೆ ಮಾಡಲು ಆಗಮಿಸಲಿದ್ದಾರೆ.

ರಾಜ್ಯದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿಪ್ರತಿ 15 ದಿನಗಳಿಗೊಮ್ಮೆ ಕರ್ನಾಟಕಕ್ಕೆ ನರೇಂದ್ರ ಮೋದಿ ಬರಲಿದ್ದು, ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿಯೇ ರಸ್ತೆ ಉದ್ಘಾಟನೆ ಮಾಡಲಾಗುತ್ತಿದೆ.ರಾಜ್ಯದಲ್ಲಿ ಹಳೆಯ ಮೈಸೂರು ಭಾಗವಾಗಿರುವ ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳು ಜೆಡಿಎಸ್ ಭದ್ರಕೋಟೆಯಾಗಿವೆ.

ಈಗಾಗಲೇ ಮಂಡ್ಯ ಜಿಲ್ಲೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸರ್ಕಾರಿ ಕಾರ್ಯಕ್ರಮವಾದ ಗೆಜ್ಜಲಗೆರೆ ಹಾಲು ಸಂಸ್ಕರಣಾ ಘಟಕ ಲೋಕಾರ್ಪಣೆ ಹಾಗೂ ಚುನಾವಣಾ ಪ್ರಚಾರ ಕಾರ್ಯಕ್ರಮ, ಸಮಾವೇಶ ಮಾಡಿದ್ದಾರೆ.
ಈಗ ಮತ್ತೊಮ್ಮೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜೆಡಿಸ್ ಭದ್ರಕೋಟೆಯನ್ನು ಬೇಸಲು ಮಂಡ್ಯಕ್ಕೆ ಆಗಮಿಸಲಿದ್ದಾರೆ.

ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಉದ್ಘಾಟನೆ ಮಾಡಲು ಯೋಜನೆ ರೂಪಿಸಲಾಗಿದೆ.ಇದೇ ತಿಂಗಳು 27 ರಂದು ಶಿವಮೊಗ್ಗದ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಲು ಆಗಮಿಸಲಿದ್ದಾರೆ. ಇದಾದ ಕೇವಲ 15 ದಿನಗಳ ಅವಯಲ್ಲಿಯೇ ಮತ್ತೊಮ್ಮೆ ಮಾ.10ರೊಳಗೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಅದು ರಾಷ್ಟ್ರೀಯ ಹೆದ್ದಾರಿ 275 (ಬೆಂಗಳೂರು ಮೈಸೂರು ದಶಪಥ ಹೆದ್ದಾರಿ) ಉದ್ಘಾಟಿಸಲು ಬರುತ್ತಿದ್ದಾರೆ.

ಅದರಲ್ಲಿಯೂ ರಾಜ್ಯ ವಿಧಾನಸಭಾ ಚುನಾವಣೆ ಇರುವುದರಿಂದ ರಾಜ್ಯಕ್ಕೆ ಪದೇ ಪದೇ ಬಂದು ಹೋಗುತ್ತಿದ್ದಾರೆ. ಇನ್ನು ಸರ್ಕಾರಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆಯ ನೆಪದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯಗಳನ್ನೂ ಇದೇ ನೆಪದಲ್ಲಿ ಮಾಡಿಕೊಳ್ಳಲಾಗುತ್ತಿದೆ.

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಮಾ.10ರೊಳಗೆ ಉದ್ಘಾಟನೆ ಬಳಿಕ ಮೋದಿಯವರು ಮತ್ತೊಮ್ಮೆ ಮಾರ್ಚ್ ತಿಂಗಳಲ್ಲಿ ಕರಾವಳಿ ಭಾಗಕ್ಕೆ ಆಗಮಿಸಲಿದ್ದಾರೆ. ಜೊತೆಗೆ ಮಾರ್ಚ್ ತಿಂಗಳಲ್ಲಿ ದಾವಣಗೆರೆಯಲ್ಲಿ ನಡೆಯುವ ರಥಯಾತ್ರೆ ಮಹಾಸಂಗಮ ಸಮಾವೇಶಕ್ಕೆ ಮೋದಿ ಆಗಮಿಸಲಿದ್ದಾರೆ. ಹೀಗಾಗಿ, ರಾಜ್ಯಕ್ಕೆ ಮಾರ್ಚ್ನಲ್ಲಿ ಒಟ್ಟು ಮೂರು ಬಾರಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಲಿದ್ದಾರೆ.

10 ಮೋದಿ ಸಮಾವೇಶ ಆಯೋಜನೆ ಗುರಿ: ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯು ಮಾರ್ಚ್ ಅಂತ್ಯಕ್ಕೆ ಘೋಷಣೆ ಆಗಲಿದೆ. ಈ ಅವಯೊಳಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ರಾಜ್ಯದಲ್ಲಿ ಬರೋಬ್ಬರಿ 10 ರಾಜಕೀಯ ಸಮಾವೇಶಗಳನ್ನು ಮಾಡುವ ಗುರಿಯನ್ನು ರಾಜ್ಯ ಬಿಜೆಪಿ ಹಾಕಿಕೊಂಡಿದೆ. ಈಗಾಗಲೇ 3 ಬೃಹತ್ ಸಮಾವೇಶಗಳು ಪೂರ್ಣಗೊಂಡಿವೆ. ಮುಂದಿನ ದಿನಗಳಲ್ಲಿ 3 ಸಮಾವೇಶಗಳು ನಿಗದಿಯಾಗಿವೆ. ಉಳಿದಂತೆ 4 ಸಮಾವೇಶಗಳನ್ನು ಆಯೋಜನೆ ಮಾಡಲು ದಿನಾಂಕಕ್ಕೆ ನಿರೀಕ್ಷೆ ಮಾಡಲಾಗುತ್ತಿದೆ.
ರಾಜ್ಯಕ್ಕೆ ಮೋದಿ ಭೇಟಿ ವಿವರ:

  • ಕಲಬುರಗಿ ಹಾಗೂ ಯಾದಗಿರಿ ತಾಂಡಾಗಳಿಗೆ ಹಕ್ಕು ಪತ್ರ ವಿತರಣೆ
  • ಹುಬ್ಬಳ್ಳಿ- ಧಾರವಾಡದಲ್ಲಿ ನಡೆದ ಯುವಜನೋತ್ಸವ
  • ತುಮಕೂರಿನಲ್ಲಿ ಹೆಚ್ಎಎಲ್ ಘಟಕದ ಲೋಕಾರ್ಪಣೆ
  • 2022ರ ಜೂನ್, ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಮೋದಿ ಒಟ್ಟು ಮೂರು ಬಾರಿ ಬಂದಿದ್ದರು.
  • ಫೆ.27ಕ್ಕೆ ಶಿವಮೊಗ್ಗದ ವಿಮಾನ ನಿಲ್ದಾಣ ಲೋಕಾರ್ಪಣೆ

#PMModi, #Visit, #Karnataka, #March,

Articles You Might Like

Share This Article