ಒಂದೇ ವಾರದಲ್ಲಿ ರಾಜ್ಯಕ್ಕೆ 2 ಬಾರಿ ಆಗಮಿಸಲಿರೋ ಮೋದಿ , ಬಿಜೆಪಿಯಲ್ಲಿ ಸಂಚಲನ

Social Share

ಬೆಂಗಳೂರು,ಜ.10- ರಾಜ್ಯಕ್ಕೆ ಗುರುವಾರ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹುಬ್ಬಳ್ಳಿಯಲ್ಲಿ ನಡೆಯಲಿರುವ ಯುವಜನೋತ್ಸವ ಕಾರ್ಯಕ್ರಮದ ಮೂಲಕ ವಿಧಾನಸಭೆ ಚುನಾವಣೆಗೆ ಅಧಿಕೃತವಾಗಿ ಕಹಳೆ ಮೊಳಗಿಸಲಿದ್ದಾರೆ.

ಇದಾದ ನಂತರ 19ರಂದು ಪುನಃ ಕಲಬುರಗಿಗೆ ಆಗಮಿಸಲಿದ್ದು, ವಿವಿಧ ಅಭಿವೃದ್ದಿ ಕಾಮಗಾರಿ
ಗಳನ್ನು ಉದ್ಘಾಟಿಸುವ ಮೂಲಕ ಪರೋಕ್ಷವಾಗಿ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ.
ಒಂದೇ ವಾರದಲ್ಲಿ ಎರಡು ದಿನಗಳ ಕಾಲ ಪ್ರಧಾನಿಯವರು ಆಗಮಿಸುತ್ತಿರುವುದರಿಂದ ಬಿಜೆಪಿಯಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದೆ.

ಗುರುವಾರ ಛೋಟಾ ಮುಂಬೈ ಎಂದೇ ಗುರುತಿಸಿಕೊಂಡಿರುವ ಹುಬ್ಬಳ್ಳಿಗೆ ನವದೆಹಲಿಯಿಂದ ವಿಶೇಷ ವಿಮಾನದ ಮೂಲಕ ಆಗಮಿಸಲಿರುವ ಮೋದಿ ಅವರು ಯುವಜನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೋದಿ ಅವರ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮುಂದಾಗಿರುವ ಬಿಜೆಪಿ ವಿಮಾನ ನಿಲ್ದಾಣದಿಂದ ಹುಬ್ಬಳ್ಳಿಯ ಪ್ರಮುಖ ರಸ್ತೆಗಳಲ್ಲಿ ತೆರೆದ ವಾಹನದ ಮೂಲಕ ರೋಡ್ ಶೋ ನಡೆಸಲಿದೆ.

ಅಂದಾಜು ಒಂದು ಲಕ್ಷ ಕಾರ್ಯಕರ್ತರನ್ನು ಕರೆತರಲು ಮುಂದಾಗಿರುವ ಬಿಜೆಪಿ ಗುಜರಾತ್‍ನಲ್ಲಿ ರೋಡ್ ಶೋ ಮೂಲಕ ಮತದಾರರನ್ನು ಆಕರ್ಷಿಸಿದ ಮಾದರಿಯಲ್ಲೇ ಕರ್ನಾಟಕದಲ್ಲೂ ಯುವ ಮತದಾರರನ್ನು ಸೆಳೆಯಲು ಮುಂದಾಗಿದೆ.

ಖುದ್ದು ಪ್ರಧಾನಿಯವರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರೇ ನೇತೃತ್ವ ವಹಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಅಧಿಕಾರಿಗಳ ಜೊತೆ ಸಭೆ ನಡೆಸಿ ಕಾನೂನು ಸುವ್ಯವಸ್ಥೆ ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ಪಡೆಯುವರು.

ಅಂದಾಜು 5 ಕಿ.ಮೀ ಹೆಚ್ಚು ಮೋದಿ ಅವರ ರೋಡ್ ಶೋ ನಡೆಯಲಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಭಾರೀ ಜನಸ್ತೋಮ ಸೇರಿಸುವ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ. ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಸುಮಾರು 8ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠಪಕ್ಷ ಒಂದೊಂದು ಕ್ಷೇತ್ರಕ್ಕೆ 15ರಿಂದ 20 ಸಾವಿರ ಕಾರ್ಯಕರ್ತರನ್ನು ಕರೆತರಬೇಕೆಂದು ಸೂಚನೆ ನೀಡಲಾಗಿದೆ.

ಹುಬ್ಬಳ್ಳಿಗೆ ಬಂದುಹೋದ ಬೆನ್ನಲ್ಲೇ 19ರಂದು ಕಲಬುರಗಿಗೆ ಮೋದಿ ಆಗಮಿಸುವರು. ಅಂದು ಕಲಬರುಗಿಯಲ್ಲಿ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಸರ್ಕಾರ ಪರಿವರ್ತಿಸಿದೆ.

ಖುದ್ದು ನರೇಂದ್ರ ಮೋದಿ ಅವರೇ 51,199 ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಣೆ ಮಾಡಲಿದ್ದಾರೆ. ನಂತರ ಯಾದಗಿರಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ನಾರಾಯಣಪುರ ಎಡದಂಡೆ 2ನೇ ಹಂತದ ಕಾಲುವೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

ಮೇಲ್ನೋಟಕ್ಕೆ ಇದೊಂದು ಸರ್ಕಾರಿ ಕಾರ್ಯಕ್ರಮವೆಂದು ಕಂಡರೂ ಬಿಜೆಪಿ ಸಂಪೂರ್ಣವಾಗಿ ರಾಜಕೀಯ ಕಾರ್ಯಕ್ರಮ ವನ್ನಾಗಿ ಪರಿವರ್ತಿಸಲು ಮುಂದಾಗಿದೆ. ಉತ್ತರಪ್ರದೇಶ ಮತ್ತು ಗುಜರಾತ್‍ನಲ್ಲೂ ಇದೇ ರೀತಿ ಸರ್ಕಾರಿ ಅಭಿವೃದ್ಧಿ ಕಾರ್ಯಗಳನ್ನೇ ಪಕ್ಷದ ಸ್ವಂತ ಕಾರ್ಯಕ್ರಮಗಳಂತೆ ಬಿಂಬಿಸಿಕೊಂಡು ಪುನಃ ಅಧಿಕಾರ ಹಿಡಿಯುವಲ್ಲಿ ಕಮಲಪಡೆ ಯಶಸ್ವಿಯಾಗಿತ್ತು.

ಇದೇ ಮಾದರಿಯನ್ನು ಕರ್ನಾಟಕದಲ್ಲೂ ಅಳವಡಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಕೇಸರಿ ನಾಯಕರಿದ್ದಾರೆ. ಮೋದಿ ಬಂದು ಹೋದ ನಂತರ ಮತ್ತೆ ಗೃಹ ಸಚಿವ ಅಮಿತ್ ಷಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಪ್ರಮುಖ ನಾಯಕರನ್ನು ಕರೆಸಿ ಪ್ರಚಾರ ನಡೆಸಬೇಕೆಂದು ನೀಲನಕ್ಷೆ ಸಿದ್ದಪಡಿಸಲಾಗಿದೆ.

ಕರಾವಳಿಯಲ್ಲಿ ಯೋಗಿ ಆದಿತ್ಯನಾಥ್, ಮೈಸೂರು ಭಾಗದಲ್ಲಿ ಮೋದಿ, ಅಮಿತ್ ಷಾ, ದಾವಣೆಗೆರೆ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ನಡ್ಡಾ ಜೊತೆಗೆ ಮೋದಿ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರು ರಾಜ್ಯಕ್ಕೆ ದಾಂಗುಡಿ ಇಡಲಿದ್ದಾರೆ.

PM Modi, visit, Karnataka, twice, month,

Articles You Might Like

Share This Article