ಅಪೌಷ್ಠಿಕತೆ ವಿರುದ್ಧದ ಹೋರಾಟಕ್ಕೆ ಮೋದಿ ಕರೆ

Social Share

ನವದೆಹಲಿ, ಅ. 28 -ದೇಶವನ್ನು ಕಾಡುತ್ತಿರುವ ಅಪೌಷ್ಟಿಕತೆಯನ್ನು ತೊಡೆದುಹಾಕಲು ಜನರು ಪ್ರಯತ್ನಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ತಮ್ಮ ಮಾಸಿಕ ಮನ್ ಕಿ ಬಾತ್‍ನಲ್ಲಿ ಮಾತನಾಡಿದ ಮೋದಿ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳನ್ನು ಸಂದಿರುವ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವದ ಅಮೃತ ಧಾರೆ ದೇಶದ ಮೂಲೆ ಮೂಲೆಗಳಲ್ಲೂ ಹರಿಯುತ್ತಿದೆ ಎಂದರು.

ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರ ಹಮ್ಮಿಕೊಳ್ಳಲಿರುವ ಅಪೌಷ್ಟಿಕತೆಯ ವಿರುದ್ಧದ ಹೋರಾಟದ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಅವರು ದೇಶದ ಜನರಿಗೆ ಕರೆ ನೀಡಿದರು. ಹಬ್ಬ ಹಿರಿದಿನಗಳ ಜೊತೆಗೆ ಸೆಪ್ಟೆಂಬರ್ ತಿಂಗಳನ್ನು ಪೋಷಣೆಗೆ ಸಂಬಂಧಿಸಿದ ದೊಡ್ಡ ಅಭಿಯಾನಕ್ಕೆ ಮೀಸಲಿಡಲಾಗಿದೆ. ನಾವು ಸೆ.1ರಿಂದ ನಾವು ಪೋಶನ್ ಮಾಹೆ ಅಥವಾ ಪೌಷ್ಟಿಕಾಂಶದ ತಿಂಗಳನ್ನು ಆಚರಿಸುತ್ತೇವೆ ಎಂದು ಮೋದಿ ಹೇಳಿದರು.

ಅಪೌಷ್ಟಿಕತೆಯ ವಿರುದ್ಧ ಅನೇಕ ಸೃಜನಶೀಲ ಮತ್ತು ವೈವಿಧ್ಯಮಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ತಂತ್ರಜ್ಞಾನದ ಉತ್ತಮ ಬಳಕೆ ಮತ್ತು ಸಾರ್ವಜನಿಕ ಸಹಭಾಗಿತ್ವವು ಪೋಶನ್ ಅಭಿಯಾನದ ಪ್ರಮುಖ ಭಾಗವಾಗಿದೆ. ಜಲ ಜೀವನ್ ಮಿಷನ್ ಭಾರತವನ್ನು ಅಪೌಷ್ಟಿಕತೆಯಿಂದ ಮುಕ್ತಗೊಳಿಸುವಲ್ಲಿ ದೊಡ್ಡ ಪರಿಣಾಮ ಬೀರಲಿದೆ ಎಂದು ಅವರು ಉಲ್ಲೇಖಿಸಿದರು.

ಅಪೌಷ್ಟಿಕತೆಯ ಸವಾಲುಗಳನ್ನು ಎದುರಿಸುವಲ್ಲಿ ಸಾಮಾಜಿಕ ಜಾಗೃತಿಗೆ ಸಂಬಂಧಿಸಿದ ಪ್ರಯತ್ನಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಮೋದಿ ಹೇಳಿದರು ಮತ್ತು ಜನರು ಅಪೌಷ್ಟಿಕತೆಯನ್ನು ಹೋಗಲಾಡಿಸಲು ಪ್ರಯತ್ನಗಳನ್ನು ಮಾಡುವಂತೆ ಒತ್ತಾಯಿಸಿದರು.

ದೂರದರ್ಶನದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಗಳನ್ನು ಎತ್ತಿ ತೋರಿಸುವ ಸ್ವರಾಜ್ ಧಾರಾವಾಹಿಯನ್ನು ವೀಕ್ಷಿಸುವಂತೆ ಪ್ರಧಾನಿ ಜನರನ್ನು ಒತ್ತಾಯಿಸಿದರು. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಅಪ್ರತಿಮ ವೀರರ ಶ್ರಮವನ್ನು ದೇಶದ ಯುವ ಪೀಳಿಗೆಗೆ ಪರಿಚಯಿಸಲು ಇದು ಉತ್ತಮ ಉಪಕ್ರಮವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

Articles You Might Like

Share This Article