ನವದೆಹಲಿ, ಜು.18- ಸಂಸತ್‍ನ ಮುಂಗಾರು ಅಧಿವೇಶನವನ್ನು ಸಾಧ್ಯವಾದಷ್ಟು ಫಲಪ್ರದವಾಗಿಸಲು ಎಲ್ಲಾ ಪಕ್ಷಗಳ ಸಂಸದರು ಸಹಕರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಇಂದಿನಿಂದ ಆರಂಭವಾಗುವ ಮುಂಗಾರು ಸಂಸತ್ ಅಧಿವೇಶನಕ್ಕೂ ಮುನ್ನಾ ಲೋಕಸಭೆ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್ ಅಧಿವೇಶನ ಗಂಭೀರ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ಉತ್ಪಾದಕತೆಯನ್ನು ಹೊಂದಿರುಬೇಕು ಮತ್ತು ಫಲಪ್ರದವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಎಲ್ಲಾ ಸಂಸದರು ಚರ್ಚೆ ಮಾಡಬೇಕು ಎಂದಿದ್ದಾರೆ.
ಚರ್ಚೆಗಳು ಮುಕ್ತ ಮನಸ್ಸಿನಿಂದ ನಡೆಯಬೇಕು. ಎಲ್ಲರಿಗೂ ಪರಿಣಾಮಕಾರಿಯಾಗುವ ಉತ್ತಮ ನಿರ್ಣಯಗಳನ್ನು ತೆಗೆದುಕೊಳ್ಳಬೇಕು. ಅದಕ್ಕಾಗಿ ಸಂಸದರು ಇಂದಿನಿಂದ ಆಗಸ್ಟ್ 12ರವರೆಗೆ ನಡೆಯುವ ಸಂಸತ್ ಕಲಾಪವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಅಧಿವೇಶನ ಬಹಳ ಮುಖ್ಯವಾಗಿದೆ. ಹೊಸದಾಗಿ ಚುನಾಯಿತರಾಗುವ ರಾಷ್ಟ್ರಾಧ್ಯಕ್ಷರು, ಉಪಧ್ಯಕ್ಷರು ದೇಶಕ್ಕೆ ಮಾರ್ಗದರ್ಶನ ಮಾಡಲಿದ್ದಾರೆ ಎಂದು ಹೇಳಿದ್ದಾರೆ.