ಕಲಬುರಗಿಗೆ ನಾಳೆ ಪ್ರಧಾನಿ ಮೋದಿ ಭೇಟಿ, ಹೊಸ ದಾಖಲೆಗೆ ಮುನ್ನುಡಿ

Social Share

ಬೆಂಗಳೂರು,ಜ.18- ವಿಧಾನಸಭೆ ಚುನಾವಣೆಯನ್ನು ಗುರಿಯಾಸಿಗಿಸಿಕೊಂಡು ಬಿಜೆಪಿ ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದರ ಭಾಗವಾಗಿ ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿಗೆ ಭೇಟಿ ನೀಡುತ್ತಿದ್ದಾರೆ. ಒಂದೇ ವಾರದ ಅವಧಿಯಲ್ಲಿ ಮೋದಿಯವರ ಎರಡನೇ ರಾಜ್ಯ ಭೇಟಿ ಇದಾಗಿದೆ.

ಕಳೆದ ವಾರ ವಾಣಿಜ್ಯ ಕೇಂದ್ರ ಹುಬ್ಬಳ್ಳಿಗೆ ಆಗಮಿಸಿದ್ದ ಅವರು, ಯುವಜನೋತ್ಸವಕ್ಕೆ ಚಾಲನೆ ನೀಡಿದ್ದರು. ಕಾರ್ಯಕ್ರಮಕ್ಕೂ ಮುನ್ನ ವಿಮಾನ ನಿಲ್ದಾಣದಿಂದ ಕಾರ್ಯಕ್ರಮ ನಡೆಯುವ ಸ್ಥಳದವರೆಗೂ ರೋಡ್ ಶೋ ನಡೆಸಿ ಪರೋಕ್ಷವಾಗಿ ಚುನಾವಣೆಗೆ ಕಹಳೆ ಮೊಳಗಿಸಿದ್ದರು. ಇದೀಗ ವಿವಿಧ ಅಭಿವೃದ್ಧಿ ಕಾಮಾಗಾರಿಗಳಿಗೆ ಚಾಲನೆ ಹಾಗೂ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡುವ ಮೂಲಕ ಮತದಾರರ ಮನ ಗೆಲ್ಲಲು ಮುಂದಾಗಿದ್ದಾರೆ.

ನಾಳೆ ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರಮೋದಿ ಅವರು ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿಯವರನ್ನು ಬರಮಾಡಿಕೊಳ್ಳಲಿದ್ದಾರೆ. ಅಲ್ಲಿಂದ ಯಾದಗಿರಿ ಜಿಲ್ಲೆ ಹುಣಸಗಿ ತಾಲ್ಲೂಕು ಕೊಡೆಕಲ್ ಹೆಲಿಪ್ಯಾಡ್‍ಗೆ ತಲುಪಲಿದ್ದಾರೆ.

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇವೆ 2.5 ಲಕ್ಷ ಹುದ್ದೆಗಳು

ಬೆಳಗ್ಗೆ 12ಕ್ಕೆ ಪ್ರಧಾನಿ ಮೋದಿ ಅವರು ನಾರಾಯಣಪುರ ಎಡದಂಡೆ ಕಾಲುವೆ ಜಾಲದ ವಿಸ್ತರಣೆ ನವೀಕರಣ ಮತ್ತು ಆಧೂನೀಕರಣ ಕಾಮಗಾರಿ ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ 1 ಗಂಟೆಗೆ ಜಲ್ ಜೀವನ್ ಮಿಷನ್‍ನಡಿ ಯಾದಗಿರಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಮತ್ತು ಸರತ್ ಚೆನ್ನೈ ಎಕ್ಸ್‍ಪ್ರೆಸ್ ವೇ ಪ್ಯಾಕೇಜ್ 3ನೇ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಅಲ್ಲಿಂದ 1.10ಕ್ಕೆ ಕೊಡೆಕಲ್ ಹೆಲಿಪ್ಯಾಡ್‍ಗೆ ರಸ್ತೆ ಮೂಲಕ ಹೊರಡು ಹೆಲಿಪ್ಯಾಡ್ ಮೂಲಕ ಕಲಬುರಗಿ ಜಿಲ್ಲೆ ಸೇಡಂ ತಾಲೂಕು ಮಳಖೇಡ ಹೆಲಿಪ್ಯಾಡ್‍ಗೆ ತಲುಪಲಿದ್ದಾರೆ. ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಹಾಗೂ ವಿವಿಧ ಕಾರ್ಯಕ್ರಮಗಳ ಶಿಲನ್ಯಾಸ ಮಾಡಲಿದ್ದಾರೆ.

ಬಳಿಕ 2.15ಕ್ಕೆ ಮಳಖೇಡದಲ್ಲಿ ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿಂದ ರಸ್ತೆ ಮೂಲಕ 3.05ಕ್ಕೆ ಮಳಖೇಡ ಹೆಲಿಪ್ಯಾಡ್‍ಗೆ ತಲುಪಲಿದ್ದಾರೆ. ಬಳಿಕ 3.30ಕ್ಕೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ತಲುಪಲಿದ್ದಾರೆ.

ವಿವಿಧ ಜಿಲ್ಲೆಗಳ ಫಲಾನುಭವಿಗಳ ಜೊತೆಗೆ ಮೋದಿ ಅಭಿಮಾನಿಗಳು ಸಹ ಆಗಮಿಸುವುದರಿಂದ ಬೃಹತ್ ಜರ್ಮನ್ ವೇದಿಕೆ ನಿರ್ಮಾಣ, ಹೆಲಿಪ್ಯಾಡ್ ನಿರ್ಮಾಣ, ಪಾರ್ಕಿಂಗ್ ವ್ಯವಸ್ಥೆ, ಸುಗಮ ಸಂಚಾರ, ಸಾರ್ವಜನಿಕರ ಮತ್ತು ಗಣ್ಯರ ಆಸನದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಊಟ, ಸ್ವಚ್ಛತೆ, ಭದ್ರತೆ ಹೀಗೆ ಎಲ್ಲವು ವ್ಯವಸ್ಥೆಯನ್ನು ಮಾಡಲಾಗಿದೆ.

ಊಟಕ್ಕೆ 200 ಕೌಂಟರ್ ಸ್ಥಾಪಿಸಲಾಗುತ್ತಿದ್ದು, 600 ಬಾಣಸಿಗರು ಇರಲಿದ್ದಾರೆ. ಜಿಲ್ಲೆಯ ವಿವಿಧ ಸ್ಥಳಗಳಿಂದ ಫಲಾನುಭವಿಗಳನ್ನು ಕರೆತರಲು 2,582 ಸಾರಿಗೆ ಬಸ್ ವ್ಯವಸ್ಥೆ, ಪ್ರತಿ ಬಸ್‍ಗೆ ಮತ್ತು ಫಲಾನುಭವಿಗಳನ್ನು ನೋಡಿಕೊಳ್ಳಲು ಗ್ರಾಮ ಲೆಕ್ಕಿಗರನ್ನು ನಿಯೋಜಿಸಲಾಗಿದೆ.

ಮುಖ್ಯ ವೇದಿಕೆ ಜರ್ಮನ್ ಟೆಂಟ್‍ನಿಂದ ಹಾಕಲಾಗುವುದು, ಐದು ಕಡೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕಲಬುರಗಿಯು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕ್ಷೇತ್ರವಾಗಿದೆ. ಈ ಹಿನ್ನಲೆ ರಾಜ್ಯ ಸರ್ಕಾರ ಪ್ರಭಾವಿ ಕಾರ್ಯಕ್ರಮ ರೂಪಿಸಲು ಮುಂದಾಗಿದೆ.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ, ಸಚಿವರಾದ ಆರ್ ಅಶೋಕ್, ಮುರುಗೇಶ್ ನಿರಾಣಿ, ಕೇಂದ್ರ ಸಚಿವರು ,ಸಂಸದರು ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.

ಕಾಂಗ್ರೆಸ್ ಕೊಡುಗೆಗಳಿಗೆ ಟಕ್ಕರ್ ಕೊಡಲು ಕಮಲ ಪ್ರಣಾಳಿಕೆ ತಯಾರಿ

ಗಿನ್ನಿಸ್ ದಾಖಲೆಗೆ ಸೇರ್ಪಡೆ: ದೆಹಲಿಯಿಂದ ವಿಶೇಷ ವಿಮಾನದಲ್ಲಿ ಆಗಮಿಸುವ ಅವರು, ಭೇಟಿಯ ವೇಳೆ ಮಾಲ್ಖೇಡ್‍ನಲ್ಲಿ ನಡೆಯುವ ಬೃಹತ್ ಕಾರ್ಯಕ್ರಮದಲ್ಲಿ 51,900 ತಾಂಡಾಗಳ ನಿವಾಸಿಗಳಿಗೆ ಆಸ್ತಿ ದಾಖಲೆಗಳನ್ನು ವಿತರಿಸಲಿದ್ದಾರೆ. ಏಕಕಾಲದಲ್ಲಿ ಇಷ್ಟು ದೊಡ್ಡ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುತ್ತಿರುವುದು ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಲಿದೆ.

ಹೈದರಾಬಾದ್-ಕರ್ನಾಟಕ ಪ್ರದೇಶದ ರಾಯಚೂರು, ಬೀದರ್, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಿಂದ ತಾಂಡಾ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಒಟ್ಟು 10,800 ರೂ. ಕೋಟಿಗಿಂತ ಹೆಚ್ಚಿನ ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ. ಈ ವೇಳೆ ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಿಗೆ ಪ್ರಧಾನಿ ಭೇಟಿ ಹಲವಾರು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಜಲಜೀವನ್ ಮಿಷನ್‍ನಡಿ ಯಾದಗಿರಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ನಾರಾಯಣಪುರ ಎಡದಂಡೆ ಕಾಲುವೆ – ವಿಸ್ತರಣೆ ನವೀಕರಣ ಮತ್ತು ಆಧುನೀಕರಣ ಯೋಜನೆ ಮತ್ತು ಸೂರತ್ – ಚೆನ್ನೈ ಎಕ್ಸ್‍ಪ್ರೆಸ್‍ವೇ ಭಾಗವಾಗಿರುವ ಎರಡು ಗ್ರೀನ್‍ಫೀಲ್ಡ್ ಹೆದ್ದಾರಿ ಅಭಿವೃದ್ಧಿ ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ.

PM Modi, Kalaburagi, enter, Guinness books,

Articles You Might Like

Share This Article