ನವದೆಹಲಿ,ಅ.1-ದೇಶದ ಹದಿಮೂರು ನಗರಗಳಲ್ಲಿ ಇಂದಿನಿಂದ ಲಭ್ಯವಾಗುವ 5ಜಿ ಸೇವೆಗೆ ಪ್ರಧಾನಿ ನರೇಂದ್ರಮೋದಿ ಚಾಲನೆ ನೀಡಿದರು. ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ 6ನೇ ಭಾರತೀಯ ಮೊಬೈಲ್ ಕಾಂಗ್ರೆಸ್ ಸಮಾವೇಶದಲ್ಲಿ 5ಜಿಗೆ ಚಾಲನೆ ನೀಡಲಾಗಿದೆ. ಈ ಸೇವೆ ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ 13 ನಗರಗಳಲ್ಲಿ ಇಂದಿನಿಂದ ಲಭ್ಯವಾಗಲಿದೆ.
5ಜಿಗಿಂತಲೂ 10 ಪಟ್ಟು ವೇಗ ಹೊಂದಿರುವ 5ಜಿ ಸೇವೆ ಹೊಸ ತಂತ್ರಜ್ಞಾನ ಉದಯಕ್ಕೆ ಕಾರಣವಾಗಿದೆ. ತಡೆರಹಿತ ನೆಟ್‍ವರ್ಕ್, ವೇಗವಾದ ದತ್ತಾಂಶ ವರ್ಗಾವಣೆ, ಕಡಿಮೆ ವಲಯದಲ್ಲಿ ಹೆಚ್ಚು ವಿಶ್ವಾಸಾರ್ಹ ಸಂವಹನಗಳು,ಇಂಧನ ದಕ್ಷತೆ, ಸ್ಪೆಕ್ಟ್ರಂ ದಕ್ಷತೆ ಸೇರಿದಂತೆ ಹಲವು ಪ್ರಯೋಜನಗಳನ್ನು 5ಜಿ ನೆಟ್‍ವರ್ಕ್ ಹೊಂದಿದೆ.
2035ರ ವೇಳೆಗೆ ಭಾರತದ ಆರ್ಥಿಕತೆ 5ಜಿಯಿಂದಾಗಿ 450 ಬಿಲಿಯನ್ ಡಾಲರ್ ಹೆಚ್ಚಾಗುವ ಅಂದಾಜುಗಳಿವೆ. ಮೊದಲ ಹಂತದಲ್ಲಿ ರಿಲಾಯನ್ಸ್, ವೊಡಫೋನ್, ಏರ್‍ಟೇಲ್ ಸೇರಿದಂತೆ ವಿವಿಧ ಕಂಪನಿಗಳು 5ಜಿ ಸೇವೆಯನ್ನು ಒದಗಿಸುತ್ತಿವೆ.
ಇಂದಿನಿಂದ ನಾಲ್ಕು ದಿನಗಳ ಕಾಲ ನಡೆಯುವ ಭಾರತೀಯ ಮೊಬೈಲ್ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರಮೋದಿ ಅವರು ವಸ್ತು ಪ್ರದರ್ಶಗಳನ್ನು ವೀಕ್ಷಿಸಿ, ಗೇಮಿಂಗ್ ಸೇರಿದಂತೆ ಇತರ ಸೇವೆಗಳಲ್ಲಿ ಇಂಟರ್‍ನೆಟ್ ವೇಗವನ್ನು ಖುದ್ದು ಪರಿಶೀಲನೆ ನಡೆಸಿದರು.
ಅಲ್ಲಿ ಆಧುನಿಕ ಉಪಕರಣಗಳು, ತಂತ್ರಜ್ಞಾನಗಳು ಮತ್ತು ಸೇವೆಗಳ ಸಮಗ್ರ ಮಾಹಿತಿ ವಿನಿಯಮ ನಡೆಯುತ್ತಿದೆ.
ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರು, ಕೇಂದ್ರ ಸರ್ಕಾರ ದೂರಸಂಪರ್ಕ ಕ್ಷೇತ್ರಗಳ ಪೂರ್ವಾನುಮತಿಯನು ಸುಲಭವಾಗಿ ದೊರೆಯುವಂತೆ ಮಾಡಿದೆ. ಡಿಜಿಟಲ್ ಇಂಡಿಯಾದ ಮೂಲಕ ಸಂಪರ್ಕ ಕ್ರಾಂತಿಯ ಹೆಬ್ಬಾಗಿಲನ್ನು ತೆರೆದಿದೆ.
ದೇಶದ ಪ್ರತಿಯೊಬ್ಬರಿಗೂ ಡಿಜಿಟಲ್ ಸೇವೆ ಕಲ್ಪಿಸುವುದು ನಮ್ಮ ಗುರಿಯಾಗಿದ್ದು, 5ಜಿ ಸೇವೆ ಉದ್ಘಾಟನೆಯಾಗುತ್ತಿರುವ ಈ ಸುದಿನ ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಾಗಿದೆ ಎಂದರು.
ಸಮಾವೇಶದಲ್ಲಿ ಮಾತನಾಡಿದ ರಿಲೆಯನ್ಸ್ ಸಂಸ್ಥೆಯ ಮುಖೇಶ್ ಅಂಬಾನಿ 2023ರ ಡಿಸೆಂಬರ್ ವೇಳೆಗೆ ದೇಶದ ಪ್ರತಿಯೊಂದು ತಾಲ್ಲೂಕಿನಲ್ಲೂ 5ಜಿ ಸೇವೆ ಲಭ್ಯವಾಗಲಿದೆ ಎಂದು ವಿವರಿಸಿದ್ದಾರೆ. ರಿಯಲೆನ್ಸ್ ಸಂಸ್ಥೆ ಭಾರತೀಯ ಮೊಬೈಲ್ ಕಾಂಗ್ರೆಸ್ ಅಷ್ಟೇ ಅಲ್ಲದೆ ಏಷ್ಯಾ ಮೊಬೈಲ್ ಕಾಂಗ್ರೆಸ್ ಹಾಗೂ ಮುಂದಿನ ದಿನಗಳಲ್ಲಿ ಜಾಗತಿಕ ಮೊಬೈಲ್ ಕಾಂಗ್ರೆಸ್‍ನ ಮುಂಚೂಣಿ ನಾಯಕತ್ವ ವಹಿಸಿಕೊಳ್ಳುವ ಹಾದಿಯಲ್ಲಿರುವುದು ಹೆಮ್ಮೆಯ ವಿಷಯ ಎಂದಿದ್ದಾರೆ.