ಅಂತಾರಾಷ್ಟ್ರೀಯ ಯೋಗ ದಿನದಂದು ಮೈಸೂರಿಗೆ ಪ್ರಧಾನಿ ಮೋದಿ

ಬೆಂಗಳೂರು, ಮೇ 21- ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರಧಾನಿ ಮೋದಿ ಅವರು ಆಗಮಿಸುವ ಬಗ್ಗೆ ಪ್ರಧಾನ ಮಂತ್ರಿ ಸಚಿವಾಲಯ ಖಚಿತ ಪಡಿಸಿದೆ. ಜೂನ್ 21ರಂದು ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗವಹಿಸಲು ಮೈಸೂರಿಗೆ ಮೋದಿ ಆಗಮಿಸಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಖಚಿತಪಡಿಸಿರುವುದನ್ನು ಸಂಸದ ಪ್ರತಾಪ್ ಸಿಂಹ ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ಪ್ರಧಾನ ಮಂತ್ರಿ ಕಾರ್ಯಾಲಯವು ಈಗಾಗಲೇ ರಾಜ್ಯ ಸರ್ಕಾರಕ್ಕೆ ಈ ಕುರಿತು ಪತ್ರ ಬರೆದಿದೆ.

ಮೈಸೂರು ಯೋಗ ಹಬ್ ಆಗಿರುವುದರಿಂದ ಮೋದಿ ಅವರು ಅಂತಿಮವಾಗಿ ಮೈಸೂರಿಗೆ ಬರುವುದನ್ನು ಖಚಿತಪಡಿಸಿದ್ದಾರೆ. ಈ ಬಾರಿ ಸಂಸದ ಪ್ರತಾಪಸಿಂಹ ಅವರು ಯೋಗದಿನ ದಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬರುವಂತೆ ಖುದ್ದ ದೆಹಲಿಗೆ ತೆರಳಿ ಆಹ್ವಾನಿಸಿದ್ದರು. ಇತ್ತ ಸ್ಥಳೀಯ ಶಾಸಕರೂ ಮೋದಿ ಅವರನ್ನು ಕರೆಯಲು ಪ್ರಯತ್ನಿಸುತ್ತಿದ್ದರು.

ಕೇಂದ್ರದ ಆಯುಷ್ ತಂಡವೂ ಏ.29ರಂದು ಮೈಸೂರಿಗೆ ಭೇಟಿ ನೀಡಿ ಅಗತ್ಯ ವ್ಯವಸ್ಥೆಗಳನ್ನು ಪರಿಶೀಲಿಸಿ ಹೋಗಿತ್ತು. ಸದ್ಯ ಈ ಎಲ್ಲಾ ಪ್ರಯತ್ನ ಗಳಿಂದ ಮೈಸೂರಿಗೆ ಮೋದಿ ಬರುವುದು ಖಚಿತಗೊಂಡಿದೆ.

ಕೇಂದ್ರ ಆಯುಷ್ ಸಚಿವಾಲಯವು 2015ರಿಂದ ಜೂ.21ರಂದು ಯೋಗ ದಿನವನ್ನು ಆಚರಿಸಿಕೊಂಡು ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿವರ್ಷ ಒಂದೊಂದು ರಾಜ್ಯದ ನಗರಕ್ಕೆ ತೆರಳಿ ಯೋಗ ಆಸನಗಳನ್ನು ಮಾಡುವ ಮೂಲಕ ಯೋಗದ ಮಹತ್ವವನ್ನು ಜಗತ್ತಿಗೆ ಸಾರುವ ಕೆಲಸ ಮಾಡುತ್ತಿದ್ದಾರೆ.

2015ರಲ್ಲಿ ದೆಹಲಿಯ ರಾಜಪಥದಲ್ಲಿ ಮೋದಿ ಯೋಗ ಸಂದೇಶ ಸಾರಿದ್ದರು. 2016ರಲ್ಲಿ ಚಂಡೀಗಢ, 2017ರಲ್ಲಿ ಲಕ್ಷ್ಮೀ, 2018ರಲ್ಲಿ ಉತ್ತರಾಖಂಡದ ಡೆಹ್ರಾಡೂನ್, 2019ರಲ್ಲಿ ಜಾರ್ಖಂಡ್ನ ರಾಂಚಿಯಲ್ಲಿ ಪ್ರಧಾನಿ ನೇತೃತ್ವದಲ್ಲಿ ಯೋಗ ದಿನಾಚರಣೆ ನಡೆದಿತ್ತು. ಇಲ್ಲೆಲ್ಲಾ ನರೇಂದ್ರ ಮೋದಿ ಅವರು ಭಾಗವಹಿಸಿ ಸ್ವತಃ ಯೋಗಾಸನ ಗಳನ್ನು ಮಾಡಿ ಯೋಗದ ಪ್ರಾಮುಖ್ಯತೆ ಯನ್ನು ಪ್ರಚುರಪಡಿಸಿದ್ದರು.

ಸಾವಿರಾರು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗ ಶಕ್ತಿಯನ್ನು ಪ್ರದರ್ಶಿಸುತ್ತಿದ್ದಾರೆ. ಕಳೆದ ಎರಡು ವರ್ಷದಲ್ಲಿ ಕೋವಿಡ್ ಕಾರಣದಿಂದ ಯಾವ ರಾಜ್ಯದಲ್ಲೂ ಯೋಗ ದಿನಾಚರಣೆ ನಡೆದಿಲ್ಲ.

# ರೇಸ್ಕೋರ್ಸ್ ಅಥವಾ ಅರಮನೆ?:
ಈಗಾಗಲೇ ಯೋಗ ಫೆಡರೇಶನ್, ಅಸೋಸಿಯೇಷನ್ ಹಾಗೂ ಎಲ್ಲಾ ಸಂಘಸಂಸ್ಥೆಗಳು ಮೈಸೂರಿನಲ್ಲಿ ಯೋಗ ದಿನಾಚರಣೆ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿವೆ. ಅರಮನೆ ಎದುರು ಅಥವಾ ರೇಸ್ಕೋರ್ಸ್‍ನಲ್ಲಿ ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ ಉದ್ದೇಶಿಸಿದ್ದು, ಜಾಗ ಇನ್ನೂ ಅಂತಿಮವಾಗಿಲ್ಲ.

ಆದರೆ, ಒಂದೂವರೆ ಲಕ್ಷಜನರನ್ನು ಸೇರಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಮೈಸೂರು ಯೋಗಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಎಷ್ಟೋ ಯೋಗ ತಜ್ಞರು ಮೈಸೂರಿನಲ್ಲಿ ಸೇವೆ ಸಲ್ಲಿಸಿದ್ದಾರೆ. ವಿದೇಶಿ ಪ್ರಜೆಗಳು ಮೈಸೂರಿಗೆ ಆಗಮಿಸಿ ಯೋಗ ಕಲಿಯುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿ ಆಗಮಿಸಲು ಸಮ್ಮತಿಸಿದ್ದಾರೆ.