ನವದೆಹಲಿ, ಆ.25- ಪ್ರಧಾನಮಂತ್ರಿ ನರೇಂದ್ರ ಮೋದಿ ಪಂಜಾಬ್‍ಗೆ ಭೇಟಿ ನೀಡುವ ವೇಳೆ ಭದ್ರತೆ ಒದಗಿಸುವಲ್ಲಿ ಫಿರೊಜೆಪುರ್ ಪೊಲೀಸ್ ಮುಖ್ಯಾಧಿಕಾರಿ ವಿಫಲರಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ನಿಯೋಜಿತ ಸಮಿತಿ ವರದಿ ನೀಡಿದೆ.
ವಿಧಾನಸಭೆ ಚುನಾವಣೆಗೂ ಮುನ್ನಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನವರಿ 5ರಂದು ಪಂಜಾಬ್‍ಗೆ ಭೇಟಿ ನೀಡಬೇಕಿತ್ತು. ಮೊದಲು ಹೆಲಿಕಾಫ್ಟರ್‍ನಲ್ಲಿ ಪ್ರಧಾನಿ ಭೇಟಿ ನೀಡುತ್ತಾರೆ ಎಂದು ಹೇಳಲಾಗಿತ್ತು. ಇದಕ್ಕಿದ್ದಂತೆ ಹೆಲಿಫಾಕ್ಟರ್ ಬದಲು ರಸ್ತೆಯಲ್ಲಿ ಪ್ರಧಾನಿ ಪ್ರಯಾಣಿಸಿದ್ದರು.
ಈ ವೇಳೆ ರೈತರು ಹಾದಿ ಮಧ್ಯದಲ್ಲಿ ಪ್ರತಿಭಟನೆ ನಡೆಸಿದ್ದರು. ಪ್ರಧಾನಿ ಅವರಿದ್ದ ವಾಹನಗಳು ಮತ್ತು ಭದ್ರತಾ ವಾಹನಗಳು ಮುಂದೆ ಹೋಗಲಾಗದೆ ಮೇಲುಸೇತುವೆ ಮೇಲೆ 20 ನಿಮಿಷ ಸಿಲುಕಿಕೊಂಡಿದ್ದವು. ಪ್ರಧಾನಿ ಅವರ ಭದ್ರತೆಯನ್ನು ಗಂಭಿರವಾಗಿ ಪರಿಗಣಿಸಿದ ಸುಪ್ರೀಂಕೋರ್ಟ್ ವಿಚಾರಣೆಗೆ ಸುಪ್ರೀಂಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಅವರ ನೇತೃತ್ವದಲ್ಲಿ ಐವರ ಸಮಿತಿಯನ್ನು ರಚಿಸಿತ್ತು.
ಸಮಿತಿ ವರದಿ ಸಲ್ಲಿಸಿದ್ದು ಸುಪ್ರಿಂಕೋರ್ಟ್‍ನ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಅವರ ನೇತೃತ್ವದ ಸೂರ್ಯ ಕಾಂತ್, ಹಿಮಕೊಹ್ಲಿ ಅವರನ್ನೊಳಗೊಂಡ ಪೀಠ ಪರಿಶೀಲನೆ ನಡೆಸಿದೆ. ವರದಿಯನ್ನು ನ್ಯಾಯಾಲಯದಲ್ಲಿ ಓದಿದ ನ್ಯಾಯಮೂರ್ತಿಗಳು, ಫೆರೊಜೆಪುರ್ ಜಿಲ್ಲೆಯ ಹಿರಿಯ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಲು ವಿಫಲರಾಗಿದ್ದಾರೆ.
ಪ್ರಧಾನಿ ಅವರ ಭೇಟಿಯ ಮಾರ್ಗದ ಕುರಿತು ಎರಡು ಗಂಟೆಗೂ ಮೊದಲೆ ಸಂಪೂರ್ಣ ಮಾಹಿತಿ ನೀಡಲಾಗಿತ್ತು. ಆದರೂ ಹೆಚ್ಚುವರಿ ಸಿಬ್ಬಂದಿಯನ್ನು ಕಳುಹಿಸಿ ಭದ್ರತೆ ಒದಗಿಸಲು ವಿಫಲರಾಗಿದ್ದಾರೆ ಎಂದು ಸಮಿತಿ ಗುರುತಿಸಿದೆ ಎಂದರು.
ವರದಿಯನ್ನು ಸೂಕ್ತ ಕ್ರಮಕ್ಕಾಗಿ ಕೇಂದ್ರ ಸರ್ಕಾರಕ್ಕೆ ರವಾನೆ ಮಾಡುತ್ತೇವೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.