ಪ್ರಧಾನಿ ಭದ್ರತಾ ಲೋಪದ ಹಿಂದೆ ಗಡಿಗಾಚೆಗಿನ ಭಯೋತ್ಪಾದನೆ ಹುನ್ನಾರ..?

Social Share

ನವದೆಹಲಿ,ಜ.7- ಪ್ರಧಾನಮಂತ್ರಿಯವರ ಸುರಕ್ಷತಾ ನಿಯಮಗಳ ಉಲ್ಲಂಘನೆ ಪ್ರಕರಣವನ್ನು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇದರ ಹಿಂದೆ ಗಡಿಗಾಚೆಗಿನ ಭಯೋತ್ಪಾದನೆಯ ಹುನ್ನಾರ ಇರುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಮುಂದೆ ವಾದಿಸಿದ್ದು, ಘಟನೆಗೆ ಸಂಬಂಧಪಟ್ಟಂತೆ ಎಲ್ಲ ಸಾಕ್ಷ್ಯಾ ಪುರಾವೆಗಳನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.
ಲಾಯರ್ಸ್ ವಾಯ್ಸ್ ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರನ್ನೊಳಗೊಂಡ ವಿಭಾಗೀಯ ಪೀಠ ಸೋಮವಾರದವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಚಿಸಿರುವ ಸಮಿತಿಗಳು ಯಾವುದೇ ವಿಚಾರಣೆ ಮುಂದುವರೆಸಬಾರದು ಎಂದು ಸಲಹೆ ನೀಡಿದೆ.
ಸುಪ್ರೀಂಕೋರ್ಟ್ ಮುಂದೆ ಇಂದು ಕಾವೇರಿದ ವಾದ-ವಿವಾದಗಳು ನಡೆದಿವೆ. ಹಿರಿಯ ವಕೀಲ ಮಹೇಂದ್ರ ಸಿಂಗ್ ಅವರು ಅರ್ಜಿದಾರರ ಪರವಾಗಿ ವಾದಿಸಿದ್ದು, ಇದು ರಾಜ್ಯ ಸರ್ಕಾರದ ಅೀನಕ್ಕೆ ಒಳಪಟ್ಟ ಕಾನೂನು ಸುವ್ಯವಸ್ಥೆಯ ಸಮಸ್ಯೆ ಅಷ್ಟೇ ಅಲ್ಲ ರಾಷ್ಟ್ರೀಯ ಭದ್ರತಾ ವಿಷಯಕ್ಕೆ ಸಂಬಂಧಿಸಿದೆ.
ವಿಶೇಷ ರಕ್ಷಣಾ ಗುಂಪು ಕಾಯ್ದೆಯಡಿ(ಎಸ್‍ಪಿಜಿ) ಸೆಕ್ಷನ್ 14ರಡಿ ರಾಜ್ಯ ಕೇಂದ್ರ ಮತ್ತು ಸ್ಥಳೀಯ ಆಡಳಿತಗಳು ರಕ್ಷಣೆ ವಿಷಯದಲ್ಲಿ ಎಸ್‍ಪಿಜಿಯೊಂದಿಗೆ ಸಹಕರಿಸಬೇಕಿದೆ. ಈ ಹಿಂದೆ ಮಾಜಿ ಪ್ರಧಾನಿಯೊಬ್ಬರ ಭ್ರಷ್ಟಾಚಾರ ಹಗರಣದಲ್ಲಿ ಸುಪ್ರೀಂಕೋರ್ಟ್ ವಿಚಾರಣೆ ನಡೆಸುವಾಗ ಎಸ್‍ಪಿಜಿಯ ಸುರಕ್ಷತಾ ಕವಚವನ್ನು ಸಡಿಲಿಸಬಾರದು ಎಂದು ಸೂಚನೆ ನೀಡಿದೆ ಎಂದು ಹೇಳಿದರು.
ಪ್ರಧಾನಿಯವರ ಪ್ರಯಾಣವನ್ನು ಪೂರ್ವಾನುಮತಿ ಇಲ್ಲದೆ ಅರ್ಧದಲ್ಲಿ ನಿಲ್ಲಿಸಲಾಗಿದೆ. ಇದು ಅತ್ಯುನ್ನತವಾದ ರಕ್ಷಣಾ ನಿಯಮಗಳ ಉಲ್ಲಂಘನೆ. ಮುಂದೊಂದು ಈ ರೀತಿಯ ಘಟನೆಗಳು ನಡೆಯಬಾರದು. ಪಂಜಾಬ್‍ನಲ್ಲಿ ನಡೆದಿರುವ ಪ್ರಕರಣವನ್ನು ವೃತ್ತಿಪರರಿಂದ ತನಿಖೆಗೊಳಪಡಿಸಬೇಕು.
ಪಂಜಾಬ್ ಸರ್ಕಾರ ರಚಿಸಿರುವ ಸಮಿತಿಯಿಂದ ತನಿಖೆ ನಡೆಸುವುದು ಸೂಕ್ತವಲ್ಲ.
ಬಥಿಂದ ಫೀರೋಜಪುರ್ ಮತ್ತು ಹುಸೇನ್ ವಾಲಾವರೆಗಿನ ಪ್ರಧಾನಿಯವರ ಪ್ರವಾಸದ ಎಲ್ಲ ದಾಖಲಾತಿಗಳನ್ನು ಎನ್‍ಐಎ ಅಧಿಕಾರಿಗಳ ಸಮ್ಮುಖದಲ್ಲಿ ಜಪ್ತಿ ಮಾಡಬೇಕು. ಸಾಕ್ಷ್ಯಾಗಳನ್ನು ರಚಿಸುವ ಸಲುವಾಗಿ ಕೂಡಲೇ ತನಿಖೆಯನ್ನು ಸ್ವಾೀಧಿನಕ್ಕೆ ತೆಗೆದುಕೊಳ್ಳಬೇಕು. ಸುಪ್ರೀಂಕೋರ್ಟ್ ನೇರ ನಿಗಾವಣೆಯಲ್ಲೇ ಎನ್‍ಐಎಯಿಂದ ತನಿಖೆ ನಡೆಯಬೇಕು ಎಂದು ವಾದಿಸಿದರು.
ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮಹೆತಾ ಅವರು, ಸುಪ್ರೀಂಕೋರ್ಟ್ ಈ ವಿಚಾರವನ್ನು ಕೈಗೆತ್ತಿಕೊಂಡಿರುವುದಕ್ಕಾಗಿ ಧನ್ಯವಾದ ಹೇಳಿದೆ.
ಪ್ರಧಾನಿಯವರ ಪ್ರವಾಸ ಅರ್ಧಕ್ಕೆ ಮೊಟಕುಗೊಂಡಿರುವುದು ಅಂತಾರಾಷ್ಟ್ರೀಯ ಸಮುದಾಯದ ಮುಂದೆ ತಲೆ ತಗ್ಗಿಸುವಂತಾಗಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರೊಂದಿಗಿನ ಸಮಾಲೋಚನೆಯ ಬಳಿಕವೇ ಪ್ರಧಾನಿಯವರ ಪ್ರವಾಸ ಬೆಂಗಾವಲು ಪಡೆಯೊಂದಿಗೆ ರಸ್ತೆ ಮೂಲಕ ಸಂಚರಿಸಿತ್ತು.
ಪ್ರಧಾನಿಯವರ ಸಂಚಾರಕ್ಕೆ ರಸ್ತೆ ಮುಕ್ತವಾಗಿದೆ ಎಂದು ಮಾಹಿತಿ ದೊರಕಿತ್ತು. ರೈತರ ಪ್ರತಿಭಟನೆ ನಡೆಯುತ್ತಿರುವುದು, ಅದರಿಂದ ರಸ್ತೆಗೆ ಅಡ್ಡಲಾಗಿರುವ ಬಗ್ಗೆ ಯಾವುದೇ ಮುನ್ಸೂಚನೆ ನೀಡಿರಲಿಲ್ಲ. ಪ್ರಧಾನಿಯವರ ಕಾರು ಮೇಲ್ಸೇತುವೆ ಮೇಲೆ ಬಂದು ಸ್ಥಗಿತಗೊಳ್ಳುವ ವೇಳೆಯಲ್ಲಿ ಪಂಜಾಬ್ ಪೊಲೀಸರು, ಪ್ರತಿಭಟನೆ ನಡೆಸುತ್ತಿದ್ದ ರೈತರ ಜೊತೆ ಟೀ ಕುಡಿಯುತ್ತಿದ್ದರು ಎಂದು ಆರೋಪಿಸಿದ್ದಾರೆ.
ಸಿಖ್ಸ್ ಫಾರ್ ಜಸ್ಟೀಸ್ ನಿಷೇಧಿತ ಸಂಘಟನೆ ಪ್ರಧಾನಿ ಪ್ರವಾಸಕ್ಕೂ ಮುನ್ನ ಹೇಳಿಕೆ ನೀಡಿದ್ದು, ಮೋದಿಯವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿತ್ತು. ಈ ದೃಷ್ಟಿಯಿಂದ ಪ್ರಧಾನಿಯವರ ಸುರಕ್ಷತಾ ನಿಯಮಗಳ ಉಲ್ಲಂಘನೆ ಹಿಂದೆ ಅಂತಾರಾಷ್ಟ್ರೀಯ ಭಯೋತ್ಪಾದನೆ ಕೈವಾಡವಿರುವ ಸಾಧ್ಯತೆಯಿದೆ. ಇದರಿಂದಾಗಿ ರಾಜ್ಯ ಸರ್ಕಾರ ಪ್ರಕರಣದ ತನಿಖೆ ನಡೆಸುವುದು ಸರಿಯಲ್ಲ.
ಸರ್ಕಾರವೇ ನಿಯಮ ಉಲ್ಲಂಘನೆ ಮಾಡಿ, ಅವರೇ ತನಿಖೆಗೆ ಸಮಿತಿ ರಚನೆ ಮಾಡುವುದು ನ್ಯಾಯಾಂಗ ಪ್ರಕ್ರಿಯೆಗಳ ಉಲ್ಲಂಘನೆಯಾಗಲಿದೆ ಎಂದು ವಾದಿಸಿದರು. ಪಂಜಾಬ್ ಸರ್ಕಾರದ ಪರವಾಗಿ ಹಾಜರಾದ ಅಡ್ವೋಕೇಟ್ ಜನರಲ್ ಡಿ.ಎಸ್.ಪಟ್ವಾಲಿಯಾ ಅವರು, ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅದೇ ದಿನ ತನಿಖೆಗಾಗಿ ಉನ್ನತ ಸಮಿತಿ ರಚಿಸಿದೆ. ಕೇಂದ್ರ ಸಮಿತಿಗಳು ಉದ್ದೇಶಪೂರ್ವಕವಾಗಿ ರಾಜ್ಯ ಪೊಲೀಸರ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ.
ಪೊಲೀಸರು ನೀಡಿದ ಮಾರ್ಗಸೂಚಿಗಳನ್ನು ಎಸ್‍ಜಿಪಿಯವರು ಪಾಲಿಸಿಲ್ಲ ಎಂದು ತಿರುಗೇಟು ನೀಡಿದ್ದಾರೆ. ನಾವು ಈಗಾಗಲೇ ಸ್ವತಂತ್ರ ತನಿಖೆ ಆರಂಭಿಸಿದ್ದೇವೆ. ಅದನ್ನು ನೆಲಹಾಸಿನ ಕೆಳಗೆ ಮುಚ್ಚಿಡಲಾಗುವುದಿಲ್ಲ ಎಂದು ಹೇಳಿದ್ದಾರೆ.
ಈ ವೇಳೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ದಾಖಲೆಗಳ ಸಂರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರ ರಚಿಸಿರುವ ತನಿಖಾ ಸಮಿತಿಗಳ ಬಗ್ಗೆ ನಿಮ್ಮ ಆಕ್ಷೇಪಗಳನ್ನು ಪರಿಗಣಿಸಲಾಗುವುದು. ಯಾವುದೇ ಸ್ವರೂಪದ ತನಿಖೆಯಾದರೂ ಲೋಪಗಳನ್ನು ಪತ್ತೆಹಚ್ಚಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏಕರೂಪದ ತನಿಖೆಗೆ ಒಮ್ಮತ ಅಭಿಪ್ರಾಯ ವ್ಯಕ್ತಪಡಿಸಿದರೆ ಸೂಕ್ತ. ಅರ್ಜಿದಾರರ ಕೋರಿಕೆಯಂತೆ ವಿಚಾರಣೆ ಮುಂದುವರೆಸಲಾಗುವುದು ಎಂದು ಹೇಳಿದರು.
ಸದ್ಯಕ್ಕೆ ದಾಖಲಾತಿಗಳನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ರಿಜಿಸ್ಟರ್ ಜನರಲ್ ಅವರ ಸಮ್ಮುಖದಲ್ಲಿ ದಾಖಲಾತಿಗಳು ಮತ್ತು ಸಾಕ್ಷ್ಯಗಳನ್ನು ಸಂರಕ್ಷಣೆ ಮಾಡಬೇಕು. ಪಂಜಾಬ್ ಪೊಲೀಸರು, ಎಸ್‍ಪಿಜಿ ಅವರು ದಾಖಲಾತಿಗಳ ಸಂರಕ್ಷಣೆಗೆ ಸಹಕರಿಸಬೇಕು. ತನಿಖಾ ಸಮಿತಿಯಲ್ಲಿ ಎನ್‍ಐಎ ಅಕಾರಿಗಳು ಮತ್ತು ಪಂಜಾಬ್‍ನ ಡಿಜಿಪಿಯವರನ್ನು ಸದಸ್ಯರನ್ನಾಗಿಸುವ ಬಗ್ಗೆ ಸಲಹೆ ನೀಡುವುದಾಗಿ ಸುಪ್ರೀಂಕೋರ್ಟ್ ಹೇಳಿದೆ. ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.

Articles You Might Like

Share This Article