ಜಪಾನ್ ಪ್ರಧಾನಿ ಜೊತೆ ಮೋದಿ : ಚೀನಾ ವಿರುದ್ಧ ಕಾರ್ಯತಂತ್ರ ಚರ್ಚೆ

ವ್ಲಾಡಿವೊಸ್ಟಾಕ್, ಸೆ.5 (ಪಿಟಿಐ)- ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಜಪಾನ್‍ನ ತಮ್ಮ ಸಹವರ್ತಿ ಶಿಂಜೋ ಅಬೆ ಅವರನ್ನು ಭೇಟಿ ಮಾಡಿ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಬಾಂಧವ್ಯ ಬಲವರ್ಧನೆ ಕುರಿತು ಮಹತ್ವದ ಸಮಾಲೋಚನೆ ನಡೆಸಿದರು.  ಶಿಂಜೋಅವೆ ಜತೆ ಭೇಟಿ ವೇಳೆ ಇಂಡೋ ಪೆಸಿಫಿಕ್ ಪ್ರಾಂತ್ಯದಲ್ಲಿ ಚೀನಾದ ಸೇನಾ ಸಾಮಥ್ರ್ಯ ಬಲಗೊಳ್ಳುತ್ತಿರುವ ಹಾಗೂ ಅದರ ವಿರುದ್ಧ ಸಮರ್ಥ ಕಾರ್ಯತಂತ್ರ ರೂಪಿಸುವ ಕುರಿತು ಮೋದಿ ಚರ್ಚಿಸಿದರು.

ಇಂಡೋ ಪೆಸಿಫಿಕ್ ಪ್ರಾಂತ್ಯದಲ್ಲಿ ಚೀನಾ ಆಗಾಗ ಸೇನೆ ಜಮಾವಣೆ ಮೂಲಕ ಉದ್ದಟತನ ಪ್ರದರ್ಶಿಸುತ್ತಿದ್ದು, ಈ ಉಪಟಳವನ್ನು ಸಮರ್ಥವಾಗಿ ನಿಭಾಯಿಸಲು ಸಹಕಾರ ನೀಡುವಂತೆ ಮೋದಿ, ಜಪಾನಿ ಪ್ರಧಾನಿ ಅವರನ್ನು ಕೋರಿದರು.  ಇದರೊಂದಿಗೆ ಈ ಪ್ರಾಂತ್ಯದಲ್ಲಿ ಆತಂಕ ಸೃಷ್ಟಿಸಿರುವ ಚೀನಾಗೆ ತಿರುಗೇಟು ನೀಡಲು ಮೋದಿ ಮುಂದಾಗಿದ್ದಾರೆ.

ರಷ್ಯಾದ ದೂರ ಪ್ರಾಚ್ಯ ಪ್ರಾಂತ್ಯ ವ್ಲಾಡಿವೊಸ್ಟಾಕ್‍ನಲ್ಲಿ ಪೂರ್ವ ಆರ್ಥಿಕ ವೇದಿಕೆ (ಇಇಎಫ್)ನ ಐದನೇ ಸಭೆಯ ಸಂದರ್ಭದಲ್ಲಿ ಈ ಇಬ್ಬರು ನಾಯಕರು ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿದರು. ಮೋದಿ-ಅಬೆ ನಡುವೆ ವ್ಯಾಪಕ ವಿಷಯಗಳ ಕುರಿತು ಚರ್ಚೆಯಾಯಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವಿಟ್ ಮಾಡಿದ್ದಾರೆ.  ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಮಂಗೋಲಿಯಾ ರಾಷ್ಟ್ರಾಧ್ಯಕ್ಷ ಖಾಳ್ಟ್ ಮಾಜಿನ್, ಬಟೂಲ್ಗಾ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ವಿಷಯಗಳ ಕುರಿತು ಸಮಾಲೋಚಿಸಿದರು.