ಚೀನಾಗೆ ಸೆಡ್ಡು ಹೊಡೆದ ಮೋದಿ, ಕೇಂದ್ರ ಏಷ್ಯಾ ರಾಷ್ಟ್ರಗಳ ಜೊತೆ ಶೃಂಗಸಭೆ..!

Social Share

ನವದೆಹಲಿ, ಜ.28- ಕೇಂದ್ರ ಏಷ್ಯಾ ಭಾಗದ ರಾಷ್ಟ್ರಗಳ ನಡುವೆ ಮುಂದಿನ ಮುವತ್ತು ವರ್ಷಗಳವರೆಗೆ ಪ್ರಾದೇಶಿಕ ಸಹಕಾರ ಮತ್ತು ಸಮಗ್ರ ಸಹಭಾಗಿತ್ವಕ್ಕಾಗಿ ಬಾಂಧವ್ಯವನ್ನು ಮತ್ತಷ್ಟು ಬಲಿಷ್ಠಗೊಳಿಸಿಕೊಳ್ಳುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಏಷ್ಯಗಳ ರಾಷ್ಟ್ರಗಳ ಜೊತೆ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಜ.25ರಂದು ವರ್ಚುವಲ್ ಸಭೆ ನಡೆಸಿ 500 ಮಿಲಿಯನ್ ಡಾಲರ್ ನೆರವನ್ನು ಪ್ರಾದೇಶಿಕ ಹಾಗೂ ವ್ಯವಹಾರಿಕ ಬಲವರ್ದನೆಗೆ ಘೋಷಣೆ ಮಾಡಿದರು. ಇದಾದ ಎರಡು ದಿನಗಳಲ್ಲೇ ಭಾರತವೂ ಮಹತ್ವದ ಹೆಜ್ಜೆಯಿಟ್ಟಿದ್ದು, ಗಣರಾಜ್ಯೋತ್ಸವದ ಮಾರನೇ ದಿನ ಕೇಂದ್ರ ಏಷ್ಯಾ ಭಾಗದ ಐದು ದೇಶಗಳ ನಡುವೆ ವರ್ಚುವಲ್ ಸಭೆ ನಡೆಸಿದ್ದಾರೆ.
ಕಝಕಿಸ್ತಾನದ ಖಾಸೀಮ್-ಜೋಮಾರ್ಟ್ ಟೋಕಾಯೆವ್, ಉಜ್ಬೇಕಿಸ್ತಾನದ ಶಾವ್ಕತ್ ಮಿರ್ಜಿಯೊಯೆವ್, ತಜಿಕಿಸ್ತಾನದ ಎಮೋಮಾಲಿ ರಹಮಾನ್, ತುರ್ಕಮೆನಿಸ್ತಾನದ ಗುರ್ಬಂಗುಲಿ ಬರ್ಡಿಮುಹಮೆಡೋವ್ ಮತ್ತು ಕಿರ್ಗ್‍ಮೆನಿಸ್ತಾನದ ಸದಿರ್ ಜಪರೋವ್ ಅವರು ಭಾರತ ಆತಿಥೇಯ ವಹಿಸಿದ್ದ ವರ್ಚುವಲ್ ಶೃಂಗ ಸಭೆಯಲ್ಲಿ ಭಾಗವಹಿಸಿದ್ದರು. ಈ ನಾಯಕರು ಭಾರತದ ಗಣರಾಜ್ಯೋತ್ಸವದಲ್ಲಿ ಭಾಗವಹಿಸಬೇಕಿತ್ತು. ಆದರೆ ಕೋವಿಡ್ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಶೃಂಗ ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ಮಾತನಾಡಿದ ಮೋದಿ ಅವರು, ಆಫ್ಘಾನಿಸ್ತಾನದ ಬೆಳವಣಿಗೆಗಳ ಬಗ್ಗೆ ಹೆಚ್ಚಿನ ಆದ್ಯತೆ ನೀಡಿದರು. ಸ್ಥಳೀಯ ಭದ್ರತೆ ಮತ್ತು ಸ್ಥಿರತೆಗಾಗಿ ಪರಸ್ಪರ ಸಹಕಾರ ಬಹಳ ಮುಖ್ಯವಾಗಿದೆ. ನಾವೇಲ್ಲಾ ಪ್ರಾದೇಶಿಕ ಭದ್ರತೆಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಅದೇ ಸಮಯಕ್ಕೆ ಆಫ್ಘಾನಿಸ್ತಾನದ ಬೆಳವಣಿಗೆಗಳ ಬಗ್ಗೆಯೂ ಕಳಕಳಿ ಹೊಂದಿದ್ದೇವೆ ಎಂದು ಹೇಳಿದರು.
ಭಾರತೀಯ ದೃಷ್ಠಿಕೋನದಲ್ಲಿ ನೆರೆಯ ದೇಶಗಳೊಂದಿಗಿನ ಬಾಂಧವ್ಯ ಉತ್ತಮವಾಗಿಡುವುದು ಮತ್ತು ಅಲ್ಲಿನ ಸ್ಥಿರತೆಗೆ ಸಹಕಾರ ನೀಡುವ ನೀತಿಯನ್ನು ಪಾಲನೆ ಮಾಡುತ್ತಿದ್ದೇವೆ. ಪರಸ್ಪರ ಸಹಕಾರದ ವಿಷಯದಲ್ಲಿ ಸ್ಪಷ್ಟ ರೂಪುರೇಶೆ ಸಿದ್ಧಪಡಿಸಬೇಕು. ವಿವಿಧ ಹಂತಗಳ ಚರ್ಚೆಯ ಬಳಿಕ ಸೌಹಾರ್ದತೆಗೆ ಸ್ಪಷ್ಟ ಚೌಕಟ್ಟು ರೂಪಿಸುವ ಅಗತ್ಯವಿದೆ ಎಂದು ಪ್ರಧಾನಿ ಪ್ರಸ್ತಾಪಿಸಿದ್ದಾರೆ.
ಈ ಶೃಂಗಸಭೆ ಸಾಂಕೇತಿಕವಾಗಿದ್ದು, ಕೇಂದ್ರ ಏಷ್ಯಾ ದೇಶಗಳ ಬದ್ಧತೆ ಪಾಲುದಾರಿಕೆಗೆ ನಾಂದಿಯಾಡಿದೆ ಎಂದು ಪ್ರಧಾನಿ ಹೇಳಿದ್ದಾರೆ. ಶೃಂಗದಲ್ಲಿ ಭಾಗವಹಿಸಿದ್ದ ರಾಷ್ಟ್ರಗಳ ಮುಖಂಡರು ಪ್ರಧಾನಿ ಅಭಿಪ್ರಾಯಕ್ಕೆ ಬೆಂಬಲ ವ್ಯಕ್ತ ಪಡಿಸಿದ್ದಾರೆ.

Articles You Might Like

Share This Article